ಹುತ್ತದೊಳಗೆ ಹಾವು ಬಿಟ್ಟು
ಸುತ್ತಮುತ್ತ ಹವಣಿಸುತಿಹರು
ಪುಂಗಿಯೂದಿ ಸದ್ದು ಮಾಡದೆ
ದೋಚುತಿಹರೊ ಎಲ್ಲ ಚಂದಿರ
ತಿದ್ದಿ ತೀಡಿ ಮೊನಚಾದ ಚೂರಿ
ತಿರುಗಿ ಇರಿಯುತಿಹರು ಮತ್ತೆ ಅಲ್ಲೇ,
ಯಾರ ಭಯ, ಯಾರ ಜಯ,
ಪಡೆದನೇನೊ ಚಂದಿರ
ಮುಖದಲೊತ್ತು ಸತತ ಸಿನಿಕ ಕಳೆ
ಸಾತ್ವಿಕ ಸಂತಾಪದ ಕ್ರುದ್ಧ ಭಾವದಿಂದ
ಸೋತು ಸೋತು ಜಡವಾದ ಮನವ
ಸಡಿಲವಾಗಿಸೊಮ್ಮೆ ಚಂದಿರ
ಕೆಟ್ಟ ನಿದರ್ಶನ ಮಾದರಿಯಾಗಿರಿಸಿ
ದುರ್ಬಲ ಭಾವನೆಗಳ ಬಂಧನದೊಳಗೆ
ದುಶ್ಚಟಗಳೊಡನೆ ಸರಸವಾಡಿ ಪ್ರತಿದಿನ
ಈ ಕತ್ತಲಕೂಪದಿಂದೊರಗೆ ಬಾರೊ ಚಂದಿರ
ಹನುಮಂತನ ಬಾಲ ಬೆಳೆದಂತೆ
ಉದ್ದೋ ಉದ್ದ... ಉದ್ದನೆ ಸಾಲ
ಎದ್ದು ಬಿದ್ದು, ಬಿದ್ದು ಎದ್ದು
ಇಲ್ಲಿ ಗೆದ್ದವರು ಯಾರೋ ಚಂದಿರ
ಓಡುತಿಹರೋ ಅಣ್ಣ, ಎಲ್ಲ ಓಡುತಿಹರೋ
ಹುಚ್ಚುಕುದುರೆ ಏರಿ ಎಲ್ಲಿಯೂ ನಿಲ್ಲದಂತೆ
ಬಿದ್ದವರೆಷ್ಟೊ, ಸತ್ತವರೆಷ್ಟೊ, ಎಲ್ಲರಮೇಲೆ
ಗೆದ್ದವರೆಷ್ಟೊ ತಿಳಿಸೊ ಚಂದಿರ
ಬಿದ್ದಾನೆಂದರೆ ಬೀಳಲಿ ಹಾಗೆ
ಸತ್ತಾನೆಂದರೆ ಸಾಯಲಿ ಹಾಗೆ
ಬೆಂಕಿಯ ಜ್ವಾಲೆ ಉರಿಯುತ ಸುತ್ತ
ಬರದಿದ್ದರೆ ಸಾಕು ನಮ್ಮನೆಯತ್ತ ಚಂದಿರ
ಕಾಗೆ ಗುಬ್ಬಿಯ ಕತೆಗಳು ಹೇಳುತ
ಸುಬ್ಬ ಸುಬ್ಬಿಯ ಜಗಳವ ತಿಳಿಸುತ
ಡಬ್ಬಿಯಕೊಂಡು ಉಂಡೂ ಬಂದನು
ಚಂಚಲ ಚೆಲುವ ಚತುರನೊ ಚಂದಿರ
ಜಂಬದ ಕೋಳಿ ಕೊಬ್ಬಿದೆ ಬಹಳ
ಸಿಕ್ಕವರೊಂದಿಗೆ ಮಾಡುತ ಜಗಳ
ತೂಕಡಿಸುವವರ ಎಚ್ಚರಗೊಳಿಸಿ
ಚಂಗನೆ ಹಾರಿತು ಎಲ್ಲಿಗೆ ಚಂದಿರ
ಚುಮು ಚುಮು ಚಳಿಯಲಿ
ಸ ರಿ ಗ ಮ ಪ ದ ನಿ ಸ
ಹಾಡುತ ತಾಗುವ ತಂಗಾಳಿಯ
ಜೊತೆ ಸರಸಕೆ ಬರುವೆಯಾ ಚಂದಿರ
No comments:
Post a Comment