ಸಾಧನೆಗೆ ಸಿದ್ಧ ಸಾಧನಗಳು
ಸಿಗಲು ಸಾವಿರ ಮಾದರಿಗಳು
ಸತ್ಯ ಮಿತ್ಯ ಅನಗತ್ಯವಿಲ್ಲಿ
ನಿತ್ಯ ನಗದು ನಗುತಿದೆ ಚಂದಿರ
ತನು ಮನಗಳ ವಿಕಸನ ವಿರಳ
ಸರಳವಲ್ಲ ಬದುಕು ನಿತ್ಯ ಜಗಳ
ಮೌಲ್ಯಗಳ ಮಾರಿ ಮೆರೆವರಿಲ್ಲಿ
ನೈತಿಕತೆಗೆ ನೆಲೆಯೆಲ್ಲಿ ಚಂದಿರ
ಹಣದ ಹೊಳೆಗೆ ಜನರು ಜಾರಿ
ಹೆಣದ ಮೇಲೆ ನೊಣಗಳ ಸವಾರಿ
ರಣ ಹದ್ದುಗಳ ಕೇಕೆ ದಾರಿಬಿಡಿ
ಮಾನವ ಮರಳಿ ಮಣ್ಣಿಗೆ ಚಂದಿರ
ತರ್ಕಹೀನ ಸಮಾಜ ಶ್ರೇಣೀಕರಣ
ಮತಿಹೀನ ಮತದ ಕೇಂದ್ರೀಕರಣ
ಬಡವರ ಬದುಕಾಗಿರಲು ಧಾರುಣ
ಕಾರಣವ ಹುಡುಕೊ ಚಂದಿರ
ಜಾತ್ಯಾತೀತ ಜಗದ ನಿರ್ಮಾಣಕೆ
ಜಾತೀಯತೆಯ ತೊಡೆದು ಹಾಕು
ಮಾನವೀಯತೆ ಮುಂಚೂಣಿಗಿರಿಸಿ
ಮೊದಲು ಮನುಜನಾಗು ಚಂದಿರ
ಜನನ ಮರಣ ಸಹಜ ಸುತನೆ
ಅಡ್ಡಗೋಡೆ ಕೆಡಹೊ ಗೆಳೆಯನೆ
ಮನುಜ ಮತವೆ ಜಗದ ಹಿತವು
ಈ ಸತ್ಯವರಿಯೊ ಚಂದಿರ
ವೇದ, ಪುರಾಣಗಳ ಕಟ್ಟಿಬಿಡು
ಕುಲ ಗೋತ್ರಗಳ ತೂರಿಬಿಡು
ಮನುಕುಲಕೆ ಮಗುವೆ ಮಾದರಿ
ಬೇರೆ ತತ್ವ ತರ್ಕ ಬೇಕೆ ಚಂದಿರ
ಅಭದ್ರತೆಗೆ ಸಿಲುಕಿ ಮನವು
ತತ್ತರಿಸುತಿದೆ ಇಡೀ ಜಗವು
ಸರಳ ತತ್ವದೆಲ್ಲೆಮೀರಿದ ಜನರಿಗೆ
ಶಾಂತಿ ಸಿದ್ಧಿಸುವುದೇ ಚಂದಿರ
ಸ್ಮೃತಿಯು ತೀವ್ರವಾಗಿ ಕಾಡುತಿದೆ
ಸ್ಫುಟನೋಟ ತೀಕ್ಷ್ಣವಾಗಿ ಕೆಣಕಿದೆ
ನುಡಿದ ನುಡಿಯ ವಿವರ ತಿಳಿಯುವ
ತಿಳುವಳಿಕೆ ನೀಡೊ ಚಂದಿರ
ತೋರಿಕೆಗೆ ಮಾತ್ರ ಕಠೋರಶಿಸ್ತು
ಬೋಧನೆಗೆ ಮಾತ್ರ ತತ್ವ ವಸ್ತು
ಅಸಾಧಾರಣ ಹಂಬಲಗಳಡಗಿವೆ
ಅವುಗಳ ಶ್ರಾದ್ಧ ಮಾಡೊ ಚಂದಿರ
No comments:
Post a Comment