Aug 27, 2009

ದುಷ್ಟ ವ್ಯಾಘ್ರ ಕಾಯುತ್ತಲೇ ಇದೆ

ನಿನ್ನೊಂದಿಗೆ ಎಲ್ಲ ಜಾಗಗಳೂ ಸುತ್ತುವೆ,
ಸುಂದರ ಕಾಣಿಕೆಗಳ ನೀಡುವೆ,
ಸುಮಧುರ ಹಾಡುಗಳಾಡುವೆ ನಲ್ಲೆ,
ಮನಮಿಡಿಯುವ ಕವನ ಪಠಿಸುವೆ,
ನೀನೆ ನನ್ನ ಕನಸಿನ ಕನಸು,
ತಾರೆಗಳ ಧ್ರುವತಾರೆ,
ಸರ್ವಸ್ವದ ಆಭರಣ,
ಋತುಗಳ ವಸಂತ,
ಮರುಭೂಮಿಯ ಮಳೆ,
ಬರಗಾಲದ ಹಸಿರು,
ರಾತ್ರಿಗಳ ರಾಣಿ,
ಪದ್ಯದ ರಾಗ,
ನೀನೆ ನನ್ನ ಜಗ,
ನೀನೆ ನನ್ನ ದೈವ,
ನೀನೆ ನನ್ನ ಜೀವ,
ನೀನೆ ನನ್ನ ಒಲವು,
ನಿಜವಾಗಲೂ ನಿನ್ನ ವರ್ಣಿಸಲಸದಳ...
ನಿನಿಗೆ ಸ್ವರ್ಗವ ನೀಡಲು ಹಾತೊರೆಯುವೆ
ನಿನ್ನ ಕೂಡಲೆ ಕಾಣಲು ಬಯಸುವೆ
ಇದೆಲ್ಲಾ ನಿನಗಾಗಿ ಮಾಡುವೆನಾದರೂ...
ಗೆಳತಿ
ಮೊದಲಿನಿಂದಲೂ ನನ್ನೊಳಗೆ
ಹಸಿದ ದುಷ್ಟ ವ್ಯಾಘ್ರವೊಂದು
ಕಾಯುತ್ತಲೇ ಇದೆ....

Aug 21, 2009

ಹಾಡು ಅದೇ

ಹಾಡು ಅದೇ ಮತ್ತೆ ಮತ್ತೆ
ಹೊಮ್ಮುತಿದೆ ಸುತ್ತಿಸುತ್ತಿ
ಎಲ್ಲಿ ಅಡಗಿ ಕೂಡಲಿ
ಯಾವ ಕಡೆಗೆ ಓಡಲಿ

ಬತ್ತಿಹೋದ ಬಾವಿಯಲ್ಲಿ
ಹಸಿರು ಬಳ್ಳಿ ಹರಡಿದೆ
ಯಾವುದೊ ಜೀವಜಂತುವಲ್ಲಿ
ಹೊಂಚು ಹಾಕಿ ಕೂತಿದೆ

ಒಣಗಿ ನಿಂತ ಮರದ ಮೇಲೆ
ಯಾವದೊ ಸಸಿ ಚಿಗುರಿದೆ
ಸರ್ಪವೊಂದು ಅಂದಿನಿಂದ
ಯಾರಿಗಾಗೊ ಕಾದಿದೆ

ಬರಗಾಲದಿ ಮರಳುಗಾಡು
ಬೆಂಕಿಯುಗುಳಿ ನರ್ತಿಸಲು
ಯಾವುದೊ ಜೀವವಲ್ಲಿ
ವಿಷಾದ ರಾಗ ನುಡಿಸುತಿದೆ

ಹಾಡು ಅದೇ ಮತ್ತೆ ಮತ್ತೆ
ಹೊಮ್ಮುತಿದೆ ಸುತ್ತಿಸುತ್ತಿ
ಎಲ್ಲಿ ಅಡಗಿ ಕೂಡಲಿ
ಯಾವ ಕಡೆಗೆ ಓಡಲಿ

Aug 20, 2009

ಮತ್ತೆ ಬರುವನು ಚಂದಿರ - 31


ಹಾಡು ಹಕ್ಕಿಯೆ ಹಾರುತ
ಹಾದಿ ಸನಿಹಕೆ ಜಾರಿದೆ
ನಲಿವ ನವಿಲಿನ ಮಾಯೆ
ನಯನಮನೋಹರ ಚಂದಿರ
***
ನವ ದಿಗಂತದ ಆಗಮನಕೆ
ರವಿಯು ಆರತಿ ಬೆಳಗುವ
ಮಸ್ಸಂಚೆ ಪರದೆ ಸರಿಯಲು
ನಗುನಗುತ ಬರುವ ಚಂದಿರ
***
ಚೆಲುವ ಚತುರ ಚಕೋರನು
ಚದುರಂಗದಾಟವನಾಡುವ
ಯಾವ ಮಾಯಾ ಮೋಡಿಗೆ
ತಲೆತೂಗುತಿರುವ ಚಂದಿರ
***
ಮೋಡ ಕವಿಯುವ ಮಾತ್ರಕೆ
ಮಂದಹಾಸವು ಮಸುಕಾವುದೆ
ಶೃಂಗಾರ ಲಹರಿಯ ಹರಿಸುತ
ಪ್ರೇಮಿಗಳ ಹರಸುವ ಚಂದಿರ
***
ಬಾನಿನಂಚಿನ ಬೆಳ್ಳಿ ಬೆಳಗು
ಯಾವ ರಾಗದ ಆರೋಹಣ
ಇದ್ಯಾವ ತಾಳದ ದಿಂದಿಂನ
ತಾರೆಗಳ ರಿಂಗಣ ಚಂದಿರ
***
ಯಾವ ಚುಕ್ಕಿಯ ಸೆಳೆತಕೆ
ಹಾರುವ ಹಕ್ಕಿ ಮಿಡಿದಿದೆ
ಗಮ್ಯವ ಸೇರೊ ತುಡಿತಕೆ
ಸಕಲ ತೊರೆದಿದೆ ಚಂದಿರ
***
ಸಹಜ ರೀತಿಯ ಸೌಂದರ್ಯ
ಸವಿಯುವ ಕ್ರಮ ಸ್ವಾಭಾವಿಕ
ಅಸಹಜ ರೀತಿಯ ಆಸ್ವಾಧ
ಅಪರಾಧ ಅಲ್ಲವೆ ಚಂದಿರ?
***
ಮಾನ್ಯ ಶಿಷ್ಟ ಸಜ್ಜನರು
ಮದ್ಯಪಾನ ಬಲಹೀನತೆ
ಎಂದು ಬಿಂಬಿಸುವ ಪರಿ
ಸಭ್ಯತೆಯೆ ಹೇಳು ಚಂದಿರ?
***
ಪ್ರಾಮಾಣಿಕವಾಗಿ ಬಯಸುವ
ನಿಸ್ವಾರ್ಥದಿಂದ ಅಪ್ಪಿಕೊಳ್ಳುವ
ನಿತ್ಯ ಮುತ್ತಿಟ್ಟು ಮತ್ತೇರಿಸುವ
ಸಾಧನ ಮದ್ಯ ಅಲ್ಲವೆ ಚಂದಿರ?
***
ಪ್ರಾಮಾಣಿಕತೆ, ಸತ್ಯ, ನಿಷ್ಠೆಗಳು,
ನಂಬಿಕೆ, ನೈತಿಕತೆ, ಮೌಲ್ಯಗಳು
ಕೇಳಲು ಮತ್ತು ಹೇಳಲು ಬಹಳ
ಸೊಗಸಾಗಿದೆಯಲ್ಲವೆ ಚಂದಿರ?

Aug 12, 2009

ರಣ ಹದ್ದುಗಳು

ಹೊಂಚುತ್ತಿವೆ ರಣ ಹದ್ದುಗಳು
ಉರಿಬಿಸಿಲು ಒಡಲ ಸುಡುತಿರೆ
ದಿಗ್ಗನೆ ಉಮ್ಮಳಿಸಿದೆ ಬೆಂಕಿ ಮುಗಿಲುದ್ದ
ಬಿರುಕಿಟ್ಟ ಧರೆಗೆ ಸಾಂತ್ವನದ ಹಗಲುಗನಸು

ಹೆಣಗಳ ಹಿಂಡು ಹಿಂಡು
ಹಸಿದ ಹದ್ದುಗಳ ಆಕ್ರಂದನ
ಸ್ಮಶಾನ ಮೌನದ ಶೋಕಗೀತೆಗೆ
ನಗ್ನ ನೀಲಾಕಾಶದ ನೀರವಮೌನ ಸಾಥ್

ಹಸಿವು, ಬಡತನ, ಅಸಾಹಯಕತೆ
ಜಗದ ಉದ್ದಗಲಕೂ ಅವರದೇ ಸಂತೆ
ಜಗದೋದ್ಧಾರಕೊನೊಬ್ಬ ಅಬ್ಬರಿಸುತಿರುವ
ಸಾವರಸಿ, ತಡವರಿಸಿದ ಮೂಕವೀಕ್ಷಕರ ಅಳಲು

ನೀಲಿ ನಕಾಶೆ ಎಂದೋ ರೆಡಿ
ಕಾಲ್ತುಲಿತಕೆ ಸಾವಿರಾರು ಜನರ ಆಹುತಿ
ಬೆಪ್ಪನಿಗೆ ಇದ್ಯಾವುದೂ ತೋಚದ ಅಗೋಚರ
ಜಗದೊಡೆಯನ ಆಥಿತ್ಯಕೆ ಸಕಲವು ಸಮರ್ಪಣೆ

ಸೂಕ್ಷ್ಮಾತಿಸೂಕ್ಷ್ಮಗಳ ತಿರುಳಿದು
ಬಟಾಬಯಲಾಗುವುದು ಭಂಡತನ
ಬೇಟೆಯಾಡುವರೊ ಅನಾಯಾಸವಾಗಿ
ಮರುಳ, ತಿಳಿಗೇಡಿ ಎಚ್ಚೆತ್ತು ಜೀವವುಳಿಸಿಕೊ

Aug 7, 2009

ಮತ್ತೆ ಬರುವನು ಚಂದಿರ - 30

ಅಸ್ಪಷ್ಟ ಹಾದಿಯ ಹಕ್ಕಿಗೆ
ಹಲವಾರು ಹಂಬಲದ ತೇರು
ಕಲಹ, ಕದನ, ಕೋಲಾಹಲ
ಉನ್ಮತ್ತ ಚಿತ್ತ ಚಂದಿರ

ವೇಗ, ಉದ್ವೇಗದ ಸವಾರಿ
ಹಗಲು ವೇಶದ ಅನಾಮಧೇಯ
ಹರಹರ ಅರ್ಧನಾರೀಶ್ವರಿನಿಗೆ
ಸಂಯಮ ಪರಾರಿ ಚಂದಿರ

ಮಾತಿಗಿಲ್ಲ ಪುರಸೊತ್ತು
ಮತಿಗೆ ಎಲ್ಲಿಲ್ಲದ ಕಸರತ್ತು
ನುಸುಳುವ ಸ್ಮಶಾನ ಮೌನ
ಉರಿವ ಅಂತಃರಾತ್ಮ ಚಂದಿರ

ಏನೇನೋ ಲೆಕ್ಕಾಚಾರ
ಇಲ್ಲಿ ಎಲ್ಲವೂ ಅಗೋಚರ
ಪಿಸುಮಾತು, ಗುಸುಗುಸು
ಸಂಚಿಗೆ ಮದ್ಯಸಾರ ಚಂದಿರ

ಬಡಪಾಯಿ ಶಂಭುವಿಗೇಕೋ
ರಿಂಗಣಿಸುವ ತವಕ ತಲ್ಲಣ
ಅತಂತ್ರತೆ, ಅಸಹಾಯಕತೆ
ನಿತ್ಯನೂತನ ಸಿದ್ಧಿ ಚಂದಿರ

ಮನೆಯ ಹಿತ್ತಲಲ್ಲಿ ಗುಲಾಬಿ ಮೊಗ್ಗು
ಆ ಬದಿ ಮನೆಯೊಡತಿಗೆ ಏಕೋ
ಎಲ್ಲಿಲ್ಲದ ಉರುಪು, ಉಮ್ಮಸ್ಸು
ಯಾವ ವಿಸ್ಮಯಕೋ ಚಂದಿರ

ಪಂಚರಂಗಿ ಪರಮಾತ್ಮ ಮನೆಯೊಡೆಯ
ಸದಾ ಅಲೆಯುವ ಪರದೇಸಿ ಪುಣ್ಯಾತ್ಮ
ಹಸಿದಾಗ ಅಪ್ಪಣೆಯ ಬೇಡುವುದೆ ಧರ್ಮ
ಕಾದ ಕಾವಲಿಗೆ ತೀವ್ರ ಕಳವಳ ಚಂದಿರ

ಆ ಮರದಲ್ಲಿ ಮಿಡಿಗಾಯಿ
ಇಲ್ಲಿ ಸಂಯಮವು ಬತ್ತಿರಲು
ರುಚಿ ನೋಡುವ ಅತಿಯಾಸೆಗೆ
ಆಗ ನೋಟ ಮಂಪರು ಚಂದಿರ

ತರ್ಕಕ್ಕೆ ನಿಲುಕದ ಆ ಪುಳಕ
ಅದೇ ಸಂಗ್ರಾಮ, ಸಂಭ್ರಮ
ಮಂದಹಾಸದಿ ಮತ್ತೆ ಮರಳಿ
ವಾಸ್ತವಕ್ಕೆ ಪ್ರವೇಶ ಚಂದಿರ

ಮರದಿಂದ ಜಾರಿದ ಮಂಜು
ಹೃದಯಕ್ಕೆ ರೋಮಾಂಚನ
ಬೇಸರ ತುಂಬಿದ ದಿನದಿಂದ
ಕ್ಷಣದಲಿ ಮುಕ್ತಿ ಚಂದಿರ

ಒಂದೇ ಕಾಲು

ಒಂದು ವೇಳೆ ನಮಗೇನಾದರೂ...
ಒಂದೇ ಒಂದು ಕಾಲು
ಇದ್ದಿದ್ದರೆ:

ನಾವೇಗೆ –
ನಿಲ್ಲುವುದು
ನಡೆಯುವುದು
ಓಡುವುದು
ಮತ್ತೆ ಕೂರುವುದು

ಕೇಳಿ!
ಮತ್ತೆ ಹೇಗೆ –
ಮರ ಹತ್ತುವುದು
ಬೆಟ್ಟದ ತುದಿ ಮುಟ್ಟುವುದು
ನದಿಗಳ ದಾಟುವುದು
ಕಣಿವೆಗೆ ಜಾರುವುದು

ನಾವೇಗೆ –
ಈಜುವುದು
ಜಾಗಿಂಗ್
ಸೈಕ್ಲಿಂಗ್
ಸ್ಕೇಟಿಂಗ್ ಮಾಡೋದು

ಮರೆತು ಬಿಡಿ –
ಕುದುರೆ ಸವಾರಿ
ರಿವರ್ ರಾಫ್ಟಿಂಗ್
ಟ್ರೆಕ್ಕಿಂಗ್
ಮತ್ತೆ ಸ್ಕೀಯಿಂಗ್

ಅಯ್ಯೋ ದೇವರೆ!
ನಾವೇಗೆ –
ಕ್ರಿಕೆಟ್ ಆಡೋದು,
ಟೆನ್ನಿಸ್, ಷಟಲ್,
ಕಬಡ್ಡಿ, ಕೋ ಕೋ
ಪುಟ್ಬಾಲ್, ವಾಲಿಬಾಲ್
ಬೇಸ್ಬಾಲ್, ಬಾಸ್ಕೆಟ್ಬಾಲ್
ಇವೆಲ್ಲ ಹಾಳಾಗೋಗಲಿ...

ದುರಂತವೆಂದರೆ... ಹೇಗೆ –
ಮಕ್ಕಳೊಂದಿಗೆ ಆಡೋದು
ಗೆಳೆಯರೊಂದಿಗೆ ಕುಣಿಯೋದು
ಗೆಳತಿಯೊಂದಿಗೆ ಸುತ್ತೋದು
ಮತ್ತೆ ಅವಳನ್ನು ರಮಿಸೋದು...

ಈಗ,
ಇಂಥಹ ಸನ್ನಿವೇಶವನ್ನು ಬಗೆಹರಿಸುವ
ಬಗ್ಗೆ ಯೋಚಿಸೋಣ,
ನಾವು ಬಹುಶಃ ಇವುಗಳ ನೆರವು
ಪಡೆಯಬಹುದು –
ಊರುಗೋಲು
ಅಥವಾ ವಾಸ್ತವವನ್ನೊಪ್ಪಿ ಬದುಕೋದು ಕಲಿಯಲೂಬಹುದು
ಅಥವಾ ಕೃತಕ ಕಾಲನ್ನು ಜೋಡಿಸಬಹುದು
ರಬ್ಬರಿಂದ ತಯಾರಿಸಿರುವುದಾಗಲಿ,
ಉಕ್ಕಿಂದ, ಬೆಳ್ಳಿ ಅಥವಾ ಚಿನ್ನದ ಕಾಲು

ದಯವಿಟ್ಟು ನನ್ನ ಶಪಿಸದಿರಿ
ಸ್ವಲ್ಪ ಹುಚ್ಚುತನದ ಜೊತೆಗೆ
ಕಲ್ಪನೆಯೂ ಜಾಸ್ತಿಯಾಗೇ ಚಿಗುರಿತ್ತು
ಕಳೆದ ರಾತ್ರಿ ಹೀಗೇ.....

ಕೊನೆಯದಾಗಿ,
ದೆವರೇ ನಿನಗೆ ತಲೆಬಾಗುವೆ
ನಮಗೆರಡು ಕಾಲುಗಳ ನೀಡಿರುವೆ!

Aug 6, 2009

ಹಾಡು ಹಕ್ಕಿ

ಹಾಡು ಹಕ್ಕಿಯೆ ಹಾರುತ
ಹಾದಿಯ ಸನಿಹಕೆ ಜಾರದೆ
ನಲಿವ ನವಿಲಿನ ಮಾಯೆಗೆ
ನಯನ ಮನೋಹರವಾಗಿದೆ

ನವ ದಿಂಗತದ ಆಗಮನಕೆ
ರವಿಯು ಆರತಿ ಬೆಳಗುವ
ಮುಸ್ಸಂಜೆ ಪರದೆಯನೆಳೆದು
ಮುತ್ತಿನ ತೋರಣ ಕಟ್ಟುವ

ಚೆಲುವ, ಚತುರನು ಚಂದಿರ
ಚದುರಂಗದಾಟವನಾಡುವ
ಇವನ ಮಾಯಾ ಮೋಡಿಗೆ
ಮರುಳಾಗಿ ಮೈಮನ ಪುಳಕ

ಮೋಡ ಕವಿಯುವ ಮಾತ್ರಕೆ
ಮಂದಹಾಸವು ಮಸುಕಾಯಿತೆ
ಶೃಂಗಾರ ಲಹರಿಯು ಹರಿವ
ಕ್ಷಣದಲಿ ಮೂಕವಿಸ್ಮಿತರಲ್ಲವೆ

ಬಾನಿನಂಚಿನ ಬೆಳ್ಳಿ ಬೆಳಗು
ಯಾವ ರಾಗದ ಆರೋಹಣ
ಯಾವ ತಾಳದ ದಿಂ ದಿಂನ
ತಾರೆಗಳ ತೇರಿನ ರಿಂಗಣ

ಯಾವ ಚುಕ್ಕಿಯ ಸೆಳೆತಕೆ
ಹಾರುವ ಹಕ್ಕಿಯು ಮಿಡಿದಿದೆ
ಗಮ್ಯವ ಸೇರುವ ತುಡಿತಕೆ
ಸಕಲವ ತೊರೆದು ನಿಂತಿದೆ