Sep 25, 2009

ಮತ್ತೆ ಬರುವನು ಚಂದಿರ - 35


ದೂರ ದೂರ ದೂರ ತೀರ
ಹೊತ್ತು ಹೊತ್ತು ತಂದ ಭಾರ
ತತ್ತರಿಸಿದೆ ತನು ತಡವರಸಿ
ತುಸುವಿರಾಮ ನೀಡು ಚಂದಿರ

ತಿರುವುಗಳಿಗೆ ತಿರುಳು ಮರುಳು
ಏರಿಳಿತಕೆ ಎದೆಯುಸಿರು ಕಟ್ಟಿದೆ
ಕಾರ್ಮೋಡದ ಕಗ್ಗತ್ತಲಲ್ಲಿ ತಡಕಿ
ಕಾಡ್ಗಿಚ್ಚಿಗೆ ಸಿಕ್ಕಿಕೊಂಡೆ ಚಂದಿರ

ಎಳೆಬಿಸಿಲಿಗೆ ಮೈಯೊಡ್ಡಿದಾಗ
ಇಬ್ಬನಿಯಲಿ ಸುಳಿದಾಡುವಾಗ
ಎಳೆಗಳಲ್ಲಿ ಹೊಳೆವ ಮುತ್ತುಗಳ
ಕಾಣೊ ಅದೃಷ್ಟ ನೀಡು ಚಂದಿರ

ಸುರಿವ ಮಳೆಯ ರಾಗದಲ್ಲಿ
ತೊಟ್ಟಿಕ್ಕುವ ಹನಿಗಳಿಂಚರ
ಮಾಳಿಗೆ ಮೃದಂಗವಾದನಕೆ
ತೇಲಿತೆನ್ನ ಮನವು ಚಂದಿರ

ಹಸಿರನೊತ್ತ ಮರದ ತುದಿಗೆ
ಹಳದಿ ಚಿಟ್ಟೆಯಿಡಲು ಚುಂಬನ
ನಾಚಿ ನಡೆದಳೇಕೊ ಯುವತಿ
ಇನಿಯನ ನೆನಪಾಗಿ ಚಂದಿರ

ರಂಗೋಲೆಯಿಡುವ ಚಿಟ್ಟೆಗೆಳು
ಯೌವನದಿ ಮೈ ಮರೆತಂತಿವೆ
ದುಂಬಿ ಕುಣಿದು ಬರಲು ಅತ್ತ
ತಳಮಳಗೊಂಡವೇಕೊ ಚಂದಿರ

ಹಕ್ಕಿಯೊಂದು ಆಗಿನಿಂದ
ವಿಷಾದಗೀತೆ ಹಾಡುತಿರಲು
ಸಂಗೀತಗಾರನಿಗೇಕೊ ಚಿಂತೆ
ಅದ್ಯಾವ ರಾಗವೆಂದು ಚಂದಿರ

ಹಬ್ಬರದ ಹಬ್ಬಗಳೆಲ್ಲವೂ
ಹಣದುಬ್ಬರಕೆ ತತ್ತರಿಸಿವೆ
ಸರಳ ಪಥದ ಮಂತ್ರವನ್ನು
ಬಿಡದೆ ಜಪಿಸುತಿವೆ ಚಂದಿರ

ದಿನದ ಮೂರು ಹೊತ್ತಿನಲ್ಲೂ
ಧಾರಾವಹಿಗಳ ಗುಂಗಿನಲ್ಲಿ
ಗಂಗೆ ಗಂಡ ತೊರೆದನವಳ
ಕುರುಡಿಯನರಸಿ ಚಂದಿರ

ಪ್ರತಿಭಾನ್ವೇಷಣೆಯೆಂಬ ಹೆಸರಿನಲ್ಲಿ
ಒತ್ತಡದ ಅಬ್ಬರಕೆ ಮಣಿದ ಮುಗ್ಧರು
ಕಮರಿಹೋದವು ಎಳೆ ಹೂಗಳಲ್ಲೆ
ತುಸು ಬೆಳಕು ತೋರೊ ಚಂದಿರ

Sep 24, 2009

ಮತ್ತೆ ಬರುವನು ಚಂದಿರ - 34


ನಿರ್ಣಯಗಳೆಲ್ಲವೂ ವೈಜ್ಞಾನಿಕ
ದೃಷ್ಟಿಯಿಂದ ನಿರ್ಧರಿಸಿದಾಗ
ಕೃತಕ ಜಗದ ನಿರ್ಮಾಣವಷ್ಟೆ
ಸಾಧಿಸುವುದಲ್ಲವೆ ಚಂದಿರ

ಅಗಾಧತೆಯ ಅನುಭಾವದಿಂದ
ಅನನ್ಯ ಅನುಭೂತಿ ಸಿದ್ಧಿಸುತ್ತದೆ
ಸೃಷ್ಟಿಸಿದ ಅಮೂರ್ತ ಸಂಕೋಲೆ
ಕಡಿದು ಹೊರನುಗ್ಗಿಲು ಚಂದಿರ

ಇಡೀ ಜಗತ್ತೇ ನಮ್ಮದಾಗುವ
ಸಾಧ್ಯತೆಗಳು ಅಗಾಧವಾಗಿರೆ
ಪುಟ್ಟ ಮನೆಗೇಕೆ ಸೆರೆಯಾಗಲು
ಹಾತೊರೆಯುವೆ ಚಂದಿರ

ಬದುಕೊಂದು ನಿರಂತರ ಜೂಜಾಟ
ಎಲ್ಲರೂ ಆಡಲೇಬೇಕಾದ ಸನ್ನಿವೇಶ
ಆಯ್ಕೆಗಳಿಲ್ಲದ ಅನಿವಾರ್ಯ ಪರಿಸ್ಧಿತಿ
ಆತ್ಮಸ್ಥೈರ್ಯದಿಂದ ಮುನ್ನಡೆ ಚಂದಿರ

ಸದಾ ಅಮಲಿನಲ್ಲಿರು ಆಪ್ತನೆ
ಕಾವ್ಯ, ಸಂಗೀತ ಇಲ್ಲಾ ಸಖಿ
ಯಾವುದರ ಸಂಗವಾದರು ಸರಿ
ಪಾನಮತ್ತನಾದರೂ ಸರಿ ಚಂದಿರ

ಜ್ಞಾನವಂತ ತನ್ನ ಪರಿಜ್ಞಾನವನ್ನು
ಶ್ರೀಸಾಮಾನ್ಯರಿಗೆ ತಲುಪಿಸದೆ
ಸ್ವಾರ್ಥಸಾಧನೆಗೆ ಬಳಸಿಕೊಂಡರೆ
ಆತ ಮೂರ್ಖನಿಗೆ ಭಿನ್ನವೆ ಚಂದಿರ

ಬುದ್ಧಿವಂತಿಕೆ, ಬಲವಾದ ಭಾಷೆ
ಬಳಸುತ್ತಾ ತಮ್ಮ ಶ್ರೇಷ್ಠತೆಯ
ಮೆರೆಯುವವ ಕ್ರಮೇಣ ಜನರಿಂದ
ದೂರಾಗಿ ಏಕಾಂಗಿ ನರಳುವ ಚಂದಿರ

ಸ್ವಧರ್ಮವನ್ನು ನಿಂಧಿಸುತ್ತಾ
ಕೇವಲ ಅನ್ಯಧರ್ಮದೊಲಿತನ್ನು
ಹೊಗಳುವ ಚನ್ನಿಗ ಮನುಕುಲದ
ಹಿತಚಿಂತಕನೆ ಹೇಳೊ ಚಂದಿರ

ಅನ್ಯಧರ್ಮಗಳ ಸತತ ನಿಂಧಿಸುತ್ತ
ಸ್ವಧರ್ಮ ಲೋಪದೋಷಗಳೆಡೆಗೆ
ನಿರ್ಲಿಪ್ತ ನೋಟದಿ ಹುಸಿನಗೆ ಬೀರುವವ
ಮನುಕಲ ವಿರೋಧಿಯಲ್ಲವೆ ಚಂದಿರ

ಯಾವದೇ ನಿಬಂಧನೆ, ನಿರ್ಬಂಧಗಳು
ಇಲ್ಲದೆಯೆ ಎಲ್ಲರನ್ನೂ ಒಪ್ಪಿಕೊಳ್ಳುವುದು
ನಿಜವಾದ ಮುಕ್ತ, ಆಪ್ತ, ಅನನ್ಯ ಪ್ರೀತಿ
ಮಾನವತ್ವದ ಜಗಜ್ಯೋತಿಯಲ್ಲವೆ ಚಂದಿರ

Sep 21, 2009

ಒಂದೆರಡು ಮಾತು

ನಾ ನಡೆದ ಹಾದಿಯಲಿ
ತಿರುವುಗಳು, ಏರಿಳಿತಗಳು
ಬೆಟ್ಟಗುಡ್ಡಗಳು, ದಟ್ಟಕಾಡುಗಳು,

ಪಚ್ಚೆಪೈರುಗಳು, ನದಿತೀರಗಳು
ಬಯಲುಸೀಮೆ, ಬಾಯ್ಬಿಟ್ಟ ನೆಲ
ಕಲ್ಲು-ಮುಳ್ಳುಗಳೂ ಸಹ
ಚುಚ್ಚಿದ್ದು, ಸವರಿದ್ದು, ತಾಗಿದ್ದು, ಎಡವಿ ಮುಗ್ಗರಿಸಿದ್ದು
ಎಷ್ಟೋ ಲೆಕ್ಕವಿಲ್ಲದಷ್ಟು...

ಹಾದೀಲಿ ಎದುರುಗೊಂಡವರು
ಹುಸಿನಗೆ ಬೀರಿ ಪಕ್ಕ ಸರಿದವರು
ಎತ್ತರದಿಂದ ಕೂಗಿ ಆಬ್ಬರಿಸಿದವರು
ಆಳದಲೆಲ್ಲೋ ಕೈ ಹಿಡಿದೆಬ್ಬಿಸಿ
ಸಾಂತ್ವನ ನುಡಿದವರು
ಜೊತೆಜೊತೆಗೆ ಹೆಜ್ಜೆಯಿಟ್ಟವರು
ಹಾದಿ ಕ್ರಮಿಸಿದ ಹಾಗೆ
ಜೊತೆಗಾರರಾದವರು...

ಹಾದಿಯ ಎರಡೂಬದಿ
ಬಣ್ಣ ಬಣ್ಣಗಳ ಕಡೆಗೆಣಿಸಿ
ಪಯಣದಲಿ ಸಂಯಮದಿ
ಅಡ್ಡದಾರಿಯ ದಿಕ್ಕರಿಸಿ ಮುನ್ನಡೆದು
ಸಾಧಿಸಿದ್ದೇನೊ ನಾನರಿಯೆ
ಆದರೂ, ಸಂತೃಪ್ತಿ
ಸಿದ್ಧಿಸಿದ್ದಂತೂ ಸರ್ವಸತ್ಯ

ಎಲ್ಲವೂ ನೆನಪಿಲ್ಲ ಕ್ಷಮಿಸಿ
ವಯಸ್ಸಾಯಿತೆಂದು ನೆಪವಲ್ಲ
ಕೆಲವು ಮರೆಯ ಬೇಕೆಂದಿರುವೆ
ಆದರೂ ಸೋತಿರುವೆ
ಮತ್ತೆ ಕೆಲವನ್ನು ಮರೆಯಲೇಕೊ
ನನಗೆ ಖಂಡಿತ ಇಷ್ಟವಿಲ್ಲ
ಉಳಿದೆರಡು ದಿನಗಳಿಗೆ ಜೊತೆಯಾಗಿ
ಆ ಸವಿ ನೆನಪುಗಳಾದರೂ
ಬೇಕಲ್ಲ...

Sep 15, 2009

ಹಾಯ್ಕು - 7

ಗೆರೆಗಳು –
ಕಟ್ಟಬಹುದು, ಇಲ್ಲಾ ಕಡಿಯಲೂಬಹುದು
ತಮ್ಮ ಭವಿಷ್ಯವನ್ನು...

ಹಾಯ್ಕು - 6

ನೋವು, ನಲಿವುಗಳೊಂದಿದ
ರಾಗಗಳು –
ಆಲಿಸಿದವರು ಅತಿವಿರಳ...

Sep 14, 2009

ಹಾಯ್ಕು - 5

ಬೆಲೆಯುಬ್ಬರ –
ಅಬ್ಬರದ ಹೇಳಿಕೆಗಳು ಉರಿಯುತ್ತಿವೆ
ಕಾಡ್ಗಿಚ್ಚಿನಂತೆ...

ಹಾಯ್ಕು - 4

ವಸಂತ –
ಹೊಂಬಿಸಿಲಿಂದ ಸೂರ್ಯ ಕರಗಿಸುತ್ತಾನೆ
ಎಲ್ಲರ ನೋವನ್ನು...

Sep 13, 2009

ಹಾಯ್ಕು - 3

ಹಾವು,
ಚುರುಕಾಗಿದೆ ತನ್ನ ಪೊರೆ ಕಳಚಿ.
ಮುಖವಾಡ ಹೊತ್ತವರು ಕಂಡು ಬೆಚ್ಚಿಬಿದ್ದರು...

ಹಾಯ್ಕು - 2

ಮಾಗಿಯಲ್ಲಿ,
ಬೆತ್ತಲಾದ ಮರಗಳು ಸಂಕೋಚ ತೊರೆದು,
ಸಂತಾಪ ಸೂಚಿಸುತ್ತಿವೆ...

Sep 11, 2009

ಹಾಯ್ಕು - 1

ಸುದೀರ್ಘ ಮಾಗಿ –
ಮರಗಳು ಎಲೆಗಳನ್ನು ಕಳಚುತ್ತಿವೆ
ಶುಭಯಾತ್ರೆ ಕೋರುತ್ತಾ...

Sep 10, 2009

ಕಾಡು...


ಕಾಡು...
ಅದರೂ ಇಲ್ಲಿ,
ಕಂಗೊಳಿಸುವ ಹಸಿರಿಲ್ಲ,
ವಗರಾದ ಚಿಗುರಿಲ್ಲ
ಮಾದಕ ಹೂವುಗಳಿಲ್ಲ,
ರುಚಿಯಾದ ಹಣ್ಣಿಲ್ಲ

ಕಾಡು...
ಆದರೂ ಇಲ್ಲಿ
ನಿರ್ಮಲ ನೀರಿಲ್ಲ,
ತಂಪಾದ ನೆರಳಿಲ್ಲ
ತಂಗಾಳಿ ಬೀಸುವುದಿಲ್ಲ
ಜಲಧಾರೆಗಳ ಸದ್ದಿಲ್ಲ

ಕಾಡು...
ಆದರೂ ಇಲ್ಲಿ
ಹಕ್ಕಿಗಳಿಂಚರವಿಲ್ಲ
ವನ್ಯಮೃಗಗಳು ಕಾಣುವುದಿಲ್ಲ
ಹುಳ-ಹುಪ್ಪಟೆಗಳು ಹಾಡುವುದಿಲ್ಲ
ರಂಗಿನ ಚಿಟ್ಟೆಗಳ ಸಡಗರವಿಲ್ಲ

ಕಾಡು...
ಆದರೂ ಇಲ್ಲಿ
ಮುಂಜಾವಿನ ಮಂಜಿಲ್ಲ
ಮುಸ್ಸಂಜೆ ಬೆಳಕಿನ ಸವಿಯಿಲ್ಲ
ಮೋಡಗಳ ಮೆರವಣಿಗೆಯಿಲ್ಲ
ಮಳೆಯ ಸುಳಿವಿಲ್ಲ

ಕಾಡು...
ಆದರೂ ಇಲ್ಲಿ
ಬೆಟ್ಟಗುಡ್ಡಗಳಿಲ್ಲ
ಆಳದ ಕಣಿವೆಗಳಿಲ್ಲ
ಹೆಮ್ಮರಗಳ ಗುರುತಿಲ್ಲ
ನಲಿದಾಡುವ ನವಿಲುಗಳಿಲ್ಲ



Sep 9, 2009

ಮತ್ತೆ ಬರುವನು ಚಂದಿರ - 33


ಆಸೆ, ಆಶಯಗಳಿಗೆ ಪೂರಕವಾಗಿ
ಅರ್ಹತೆ, ಸಾಮರ್ಥ್ಯ, ಸಂಯಮಗಳ
ಸಿದ್ಧಿಸಿಕೊಂಡರೆ ಅನನ್ಯ ಅವಕಾಶಗಳು
ತಡವಾದರೂ ತಾಗುವವು ಚಂದಿರ

ವೃತ್ತಿಯೊಳಗೆ ಮೇಲು-ಕೀಳೆಂದು
ಭಾವಿಸುತ್ತಾ, ಬಿಂಬಿಸಿಕೊಳ್ಳುವವ
ವಿಕೃತ ಮನಸಿನ ಮತಿಹೀನನಷ್ಟೆ
ಜಗದ ಮಾನದಂಡವಲ್ಲ ಚಂದಿರ

ಮಹತ್ತರ ಮಹತ್ವಾಕಾಂಕ್ಷೆಯಿಂದ
ಪೂರಕ ಪರಿಶ್ರಮದೊಂದಿಗೆ ಕಾರ್ಯ
ಪ್ರವೃತ್ತರಾದಾಗ ಸಾಧಿಸುವ ಸಾಧ್ಯತೆಗೆ
ಹತ್ತಿರವಾಗುವುದು ನಿಶ್ಚಿತ ಚಂದಿರ

ನಂಬಿಕೆಯೆಂಬುದು ಅಸಹಾಯಕರಿಗೆ
ಅಂಧಃಕಾರದಲ್ಲಿರುವಾಗ ಸಂತೈಸುವ,
ಹಣತೆ ಹಿಡಿದು ಹಾದಿ ತೋರುವ
ಏಕೈಕ ಆಪ್ತ ಗೆಳೆಯನಲ್ಲವೆ ಚಂದಿರ

ದೇಶ ಕಾಲದ ಸಿಡಿಲು ಮಿಂಚಿಗೆ
ಪರಿಶುದ್ಧ ಪ್ರಾಮಾಣಿಕತೆ ಬಳಲಿ
ಮೂರ್ಖತನದ ಪರಮಾವಧಿಗೇರಿ
ಅಬ್ಬರದಿಂದ ನರ್ತಿಸುತ್ತಿದೆ ಚಂದಿರ

ಅಮೂರ್ತ ನರಕದ, ಮೂರ್ತ ಪ್ರತಿರೂಪಗಳ
ಕಡೆಗೆಣಿಸಿ ಕೇಡಿನ ಕಾರ್ಯದಲ್ಲಿ ಮೈಮರೆತು
ಮಗ್ನರಾದ ಸನ್ನಿವೇಶದಲ್ಲಿ ಪ್ರಕೃತಿಯ ವಿಕೋಪ
ರುದ್ರತಾಂಡವವಾಡುವುದು ಖಚಿತ ಚಂದಿರ

ಸುಭದ್ರ, ಸುಖಕರ ಮತ್ತು ಸಂತಸದ
ಭವಿಷ್ಯಕ್ಕಾಗಿ ಸುಂದರ ವರ್ತಮಾನ
ವ್ಯರ್ಥಮಾಡುವುದು ಶುದ್ಥ ಮೂರ್ಖತನ
ಎಂದು ಕಿವಿಮಾತು ಹೇಳೊ ಚಂದಿರ

ಹಣವೆಂಬುದು ಎಲ್ಲರಿಗೂ ಅತ್ಯಗತ್ಯ
ಆದರೆ, ಅದೆಷ್ಟು ಎಂಬುದಾಗಿ ಸ್ಪಷ್ಟ
ತಿಳುವಳಿಕೆಯಿಂದ ಬದ್ಧನಾಗಿರದಿದ್ದರೆ
ಬದುಕು ಜಾರುವುದು ನಿಶ್ಚಿತ ಚಂದಿರ

ತಂತ್ರಜ್ಞಾನದ ಅಗತ್ಯತೆ ನಿಯಮಿತ,
ಯಾವುದು, ಏಕೆ, ಹೇಗೆ, ಯಾವಾಗ
ಎಂಬುದರ ಸ್ಪಷ್ಟ ಅರಿವು ಇರದಿದ್ದರೆ
ಮನುಕುಲಕ್ಕೆ ಕೇಡು ಖಚಿತ ಚಂದಿರ

ಅಸಹಾಯಕರಿಗೆ, ಅಸಮರ್ಥರಿಗೆ
ನೆರವಾಗುವ ಸಾಮರ್ಥ್ಯವಿದ್ದರೂ
ಸ್ವಾರ್ಥ ಸಾಧನೆಗೆ ಮಾಡದಿರವುದು
ವಿಕೃತ ನಡವಳಿಕೆ ಅಲ್ಲವೆ ಚಂದಿರ

Sep 8, 2009

ಮತ್ತೆ ಬರುವನು ಚಂದಿರ - 32


ಸಾಧನೆಯ ತುದಿಗೇರುವುದು
ಕೆಲವು ಕ್ಷೇತ್ರಗಳಿಗೇ ಸೀಮಿತ
ಸರ್ವತೋಮುಖ ಸಾಧನೆಯು
ವ್ಯಕ್ತಗಳಿಗೆ ಸಾಧ್ಯವೆ ಚಂದಿರ

ಕೋಪವೆಂಬ ಧೂರ್ತನನ್ನು
ಹಿಡಿತದಲ್ಲಿಡು ಗೆಳೆಯನೆ
ಸಡಿಲಿಸಿದರೆ ಸಿಡಿಯುವನು
ಸಹಿಸಲಾರನು ಚಂದಿರ

ಪ್ರಾಮಾಣಿಕತೆಯ ಪಠಿಸುವ
ಪಡಪಡಿಸುತ ಮುಕ್ಕುತಿರುವ
ಬಡವ ಬಲ್ಲಿದರನೂ ಬಿಡದವ
ಬಲಿಯಾದನೊಮ್ಮೆಗೆ ಚಂದಿರ

ನ್ಯೂನತೆಗಳು ಮನುಜಗೆ
ಸಹಜವಾಗಿ ಸಿದ್ಧಿಸಿದ್ದರೂ
ನಿಯಂತ್ರಿಸುವ ಸಾಮರ್ಥ್ಯ
ಸಹ ನಮಗೇ ಬಿಟ್ಟ ಚಂದಿರ

ನಾವು ಮಾನವೀಯತೆಯೊಂದಿಗೆ
ಅತಿ ಸಾಮಾನ್ಯನಾಗಿ ಬದುಕುವುದು
ಸಹ ನಮ್ಮ ಅತಿ ಮಹತ್ತರ ಸಾಧನೆ
ಇದಕೆ ಮಾದರಿಯಾಗಿರುವ ಚಂದಿರ

ಬದುಕಿಗೆ ಅತಿಮುಖ್ಯವಾಗಿರುವುದು
ಎಲ್ಲರಿಗೂ ಅತ್ಯಗತ್ಯವಾಗಿರುವುದು
ನಿಷ್ಪಕ್ಷಪಾತವಾಗಿ, ಸಮಾನವಾಗಿ
ಎಲ್ಲರಿಗೂ ಲಭ್ಯವಿದೆಯಲ್ಲವೆ ಚಂದಿರ

ಬದುಕಿನ ಸೋಲು ಗೆಲುವಿಗೆ
ಸಿದ್ಧಮಾದರಿಗಳು, ಅರ್ಥಗಳಿಲ್ಲ
ಅದು ಅವರವರ ಸಾಮರ್ಥ್ಯಕ್ಕೆ
ಪರಿಕಲ್ಪನೆಗೆ ಸೀಮಿತ ಚಂದಿರ

ಪರಿಶುದ್ಧ ಪ್ರೀತಿಯೆಂಬುದು
ಒಂದು ಸುಂದರ ಪರಿಕಲ್ಪನೆ
ಸಾಧಿಸಿದಷ್ಟೂ ಸಿದ್ಧಿಸುವುದಿಲ್ಲ
ಸಿದ್ಧಿಸುವುದು ಪರಿಶುದ್ಧವೆ ಚಂದಿರ

ಶ್ರೇಷ್ಟತೆ ಎಂಬುದರ ಬೆನ್ನತ್ತಿದರೂ
ಎಂದಿಗೂ ತಲುಪಲಾಗದೆ ಸೋತು
ಖಿನ್ನತೆಯಿಂದ ಕೊರಗದಿರು ಗೆಳೆಯ
ಹತ್ತಿರವಿದ್ದೂ ಎತ್ತರದವನು ಚಂದಿರ

ಪರಿಶುದ್ಧತೆಯೆಂಬುದು
ಪರಿಶೋಧಿಸಲಾಗದೆ
ಪರಿಜ್ಞಾನಕೆ ನಿಲುಕದೆ
ಪರಧಿ ದಾಟಿದ ಚಂದಿರ