ನಿರ್ಣಯಗಳೆಲ್ಲವೂ ವೈಜ್ಞಾನಿಕ
ದೃಷ್ಟಿಯಿಂದ ನಿರ್ಧರಿಸಿದಾಗ
ಕೃತಕ ಜಗದ ನಿರ್ಮಾಣವಷ್ಟೆ
ಸಾಧಿಸುವುದಲ್ಲವೆ ಚಂದಿರ
ಅಗಾಧತೆಯ ಅನುಭಾವದಿಂದ
ಅನನ್ಯ ಅನುಭೂತಿ ಸಿದ್ಧಿಸುತ್ತದೆ
ಸೃಷ್ಟಿಸಿದ ಅಮೂರ್ತ ಸಂಕೋಲೆ
ಕಡಿದು ಹೊರನುಗ್ಗಿಲು ಚಂದಿರ
ಇಡೀ ಜಗತ್ತೇ ನಮ್ಮದಾಗುವ
ಸಾಧ್ಯತೆಗಳು ಅಗಾಧವಾಗಿರೆ
ಪುಟ್ಟ ಮನೆಗೇಕೆ ಸೆರೆಯಾಗಲು
ಹಾತೊರೆಯುವೆ ಚಂದಿರ
ಬದುಕೊಂದು ನಿರಂತರ ಜೂಜಾಟ
ಎಲ್ಲರೂ ಆಡಲೇಬೇಕಾದ ಸನ್ನಿವೇಶ
ಆಯ್ಕೆಗಳಿಲ್ಲದ ಅನಿವಾರ್ಯ ಪರಿಸ್ಧಿತಿ
ಆತ್ಮಸ್ಥೈರ್ಯದಿಂದ ಮುನ್ನಡೆ ಚಂದಿರ
ಸದಾ ಅಮಲಿನಲ್ಲಿರು ಆಪ್ತನೆ
ಕಾವ್ಯ, ಸಂಗೀತ ಇಲ್ಲಾ ಸಖಿ
ಯಾವುದರ ಸಂಗವಾದರು ಸರಿ
ಪಾನಮತ್ತನಾದರೂ ಸರಿ ಚಂದಿರ
ಜ್ಞಾನವಂತ ತನ್ನ ಪರಿಜ್ಞಾನವನ್ನು
ಶ್ರೀಸಾಮಾನ್ಯರಿಗೆ ತಲುಪಿಸದೆ
ಸ್ವಾರ್ಥಸಾಧನೆಗೆ ಬಳಸಿಕೊಂಡರೆ
ಆತ ಮೂರ್ಖನಿಗೆ ಭಿನ್ನವೆ ಚಂದಿರ
ಬುದ್ಧಿವಂತಿಕೆ, ಬಲವಾದ ಭಾಷೆ
ಬಳಸುತ್ತಾ ತಮ್ಮ ಶ್ರೇಷ್ಠತೆಯ
ಮೆರೆಯುವವ ಕ್ರಮೇಣ ಜನರಿಂದ
ದೂರಾಗಿ ಏಕಾಂಗಿ ನರಳುವ ಚಂದಿರ
ಸ್ವಧರ್ಮವನ್ನು ನಿಂಧಿಸುತ್ತಾ
ಕೇವಲ ಅನ್ಯಧರ್ಮದೊಲಿತನ್ನು
ಹೊಗಳುವ ಚನ್ನಿಗ ಮನುಕುಲದ
ಹಿತಚಿಂತಕನೆ ಹೇಳೊ ಚಂದಿರ
ಅನ್ಯಧರ್ಮಗಳ ಸತತ ನಿಂಧಿಸುತ್ತ
ಸ್ವಧರ್ಮ ಲೋಪದೋಷಗಳೆಡೆಗೆ
ನಿರ್ಲಿಪ್ತ ನೋಟದಿ ಹುಸಿನಗೆ ಬೀರುವವ
ಮನುಕಲ ವಿರೋಧಿಯಲ್ಲವೆ ಚಂದಿರ
ಯಾವದೇ ನಿಬಂಧನೆ, ನಿರ್ಬಂಧಗಳು
ಇಲ್ಲದೆಯೆ ಎಲ್ಲರನ್ನೂ ಒಪ್ಪಿಕೊಳ್ಳುವುದು
ನಿಜವಾದ ಮುಕ್ತ, ಆಪ್ತ, ಅನನ್ಯ ಪ್ರೀತಿ
ಮಾನವತ್ವದ ಜಗಜ್ಯೋತಿಯಲ್ಲವೆ ಚಂದಿರ
2 comments:
tumba chennagide sir, ella saalugaLalli eno visheshate ide
ಧನ್ಯವಾದಗಳು ಮೇಡಮ್...
Post a Comment