Sep 8, 2009

ಮತ್ತೆ ಬರುವನು ಚಂದಿರ - 32


ಸಾಧನೆಯ ತುದಿಗೇರುವುದು
ಕೆಲವು ಕ್ಷೇತ್ರಗಳಿಗೇ ಸೀಮಿತ
ಸರ್ವತೋಮುಖ ಸಾಧನೆಯು
ವ್ಯಕ್ತಗಳಿಗೆ ಸಾಧ್ಯವೆ ಚಂದಿರ

ಕೋಪವೆಂಬ ಧೂರ್ತನನ್ನು
ಹಿಡಿತದಲ್ಲಿಡು ಗೆಳೆಯನೆ
ಸಡಿಲಿಸಿದರೆ ಸಿಡಿಯುವನು
ಸಹಿಸಲಾರನು ಚಂದಿರ

ಪ್ರಾಮಾಣಿಕತೆಯ ಪಠಿಸುವ
ಪಡಪಡಿಸುತ ಮುಕ್ಕುತಿರುವ
ಬಡವ ಬಲ್ಲಿದರನೂ ಬಿಡದವ
ಬಲಿಯಾದನೊಮ್ಮೆಗೆ ಚಂದಿರ

ನ್ಯೂನತೆಗಳು ಮನುಜಗೆ
ಸಹಜವಾಗಿ ಸಿದ್ಧಿಸಿದ್ದರೂ
ನಿಯಂತ್ರಿಸುವ ಸಾಮರ್ಥ್ಯ
ಸಹ ನಮಗೇ ಬಿಟ್ಟ ಚಂದಿರ

ನಾವು ಮಾನವೀಯತೆಯೊಂದಿಗೆ
ಅತಿ ಸಾಮಾನ್ಯನಾಗಿ ಬದುಕುವುದು
ಸಹ ನಮ್ಮ ಅತಿ ಮಹತ್ತರ ಸಾಧನೆ
ಇದಕೆ ಮಾದರಿಯಾಗಿರುವ ಚಂದಿರ

ಬದುಕಿಗೆ ಅತಿಮುಖ್ಯವಾಗಿರುವುದು
ಎಲ್ಲರಿಗೂ ಅತ್ಯಗತ್ಯವಾಗಿರುವುದು
ನಿಷ್ಪಕ್ಷಪಾತವಾಗಿ, ಸಮಾನವಾಗಿ
ಎಲ್ಲರಿಗೂ ಲಭ್ಯವಿದೆಯಲ್ಲವೆ ಚಂದಿರ

ಬದುಕಿನ ಸೋಲು ಗೆಲುವಿಗೆ
ಸಿದ್ಧಮಾದರಿಗಳು, ಅರ್ಥಗಳಿಲ್ಲ
ಅದು ಅವರವರ ಸಾಮರ್ಥ್ಯಕ್ಕೆ
ಪರಿಕಲ್ಪನೆಗೆ ಸೀಮಿತ ಚಂದಿರ

ಪರಿಶುದ್ಧ ಪ್ರೀತಿಯೆಂಬುದು
ಒಂದು ಸುಂದರ ಪರಿಕಲ್ಪನೆ
ಸಾಧಿಸಿದಷ್ಟೂ ಸಿದ್ಧಿಸುವುದಿಲ್ಲ
ಸಿದ್ಧಿಸುವುದು ಪರಿಶುದ್ಧವೆ ಚಂದಿರ

ಶ್ರೇಷ್ಟತೆ ಎಂಬುದರ ಬೆನ್ನತ್ತಿದರೂ
ಎಂದಿಗೂ ತಲುಪಲಾಗದೆ ಸೋತು
ಖಿನ್ನತೆಯಿಂದ ಕೊರಗದಿರು ಗೆಳೆಯ
ಹತ್ತಿರವಿದ್ದೂ ಎತ್ತರದವನು ಚಂದಿರ

ಪರಿಶುದ್ಧತೆಯೆಂಬುದು
ಪರಿಶೋಧಿಸಲಾಗದೆ
ಪರಿಜ್ಞಾನಕೆ ನಿಲುಕದೆ
ಪರಧಿ ದಾಟಿದ ಚಂದಿರ

2 comments:

ಮನಸು said...

ಕವನದ ಸಾಲುಗಳು ತುಂಬಾ ಇಷ್ಟವಾಗಿದೆ ಮುಂದುವರಿಸಿ ಮತ್ತಷ್ಟು ಸಾಲುಗಳು ಮೂಡಿಬರಲಿ...

ಚಂದಿನ | Chandrashekar said...

ಧನ್ಯವಾದಗಳು ಮೇಡಮ್,

ನಿಮ್ಮ ಪದ್ಯಗಳೂ ಸಹ ಚೆನ್ನಾಗಿ ಮೂಡಿ ಬಂದಿವೆ, ಪ್ರತಿಕ್ರಿಯೆ ನೀಡುವ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ತಾಂತ್ರಿಕ ತೊಡಕಿರಬಹುದು, ನಿಮ್ಮ ಇಮೇಲ್ ವಿಳಾಸ ಕೊಟ್ಟರೆ ನನಗೆ ಪ್ರತಿಕ್ರಿಯಿಸಲು ಸಹಕಾರಿಯಾಗುವುದು.