Oct 28, 2009

ಹನಿಗಳು - 7


-1-
ಮುಂಗಾರಿನ
ನಡೆ ಏಕೋ
ಮುಖ್ಯಮಂತ್ರಿಗಳ
ನುಡಿಯಂತೆ
ತೋರುತ್ತಿದೆ
ಅಲ್ಲವೆ?

-2-
ರೈತರ
ಉಚಿತ ವಿದ್ಯುತ್
ಕಡಿತ
ಇಂಧನ ಸಚಿವರ
ಶಾಕ್ ಟ್ರೀಟ್ಮೆಂಟ್
ಖಚಿತ

-3-
ಆರೋಗ್ಯ ಸಚಿವರಿಗೆ
ಸತತ ಅನಾರೋಗ್ಯ
ಪ್ರಚಾರ ಕಾರ್ಯಕ್ಕೆ
ಮಾತ್ರ ತಪ್ಪದವರ
ಆಗಮನದ ಭಾಗ್ಯ

-4-
ಸಚಿವೆಯ ಮನೆಯಲ್ಲಿ
ಕುಡಿತ, ಕುಣಿತ,
ಪಟಾಕಿ ಸಿಡಿತ
ಆಡಳಿತ ಪಕ್ಷದಲ್ಲಿ
ತೀವ್ರ ಭಿನ್ನಮತ

-5-
ಗೃಹಲಕ್ಷ್ಮಿ,
ಭಾಗ್ಯಲಕ್ಷ್ಮಿ,
ಆರೋಗ್ಯಲಕ್ಷ್ಮಿ
ಸದ್ಯ
ಸಂತಾನಲಕ್ಷ್ಮಿ
ವರ ನೀಡಲಿಲ್ಲ
ಮಾನ್ಯ
ಮುಖ್ಯ ಮಂತ್ರಿಗಳು

-6-
ಮಠಮಾನ್ಯರಿಗೆ
ಯಥೇಚ್ಛ
ಅನುದಾನ
ನೆರೆಪೀಡಿತರಿಗೆ
ಕೇವಲ
ಸಾಂತ್ವನ

-7-
ಚುನಾವಣಾ ಸಮರ
ಜಾತಿ, ಮತದ ಲೆಕ್ಕಾಚಾರ
ಹಣದ ಅಹಃಕಾರ
ಮದ, ಮತ್ಸರ,
ಮದ್ಯಸಾರದ
ವಿಕೃತ ಸಾಗರ

-8-
ಗೃಹ ಸಚಿವರಿಗೆ
ಭಾರೀ ಗಂಢಾಂತರ
ಆದರೂ ಅಂತಾರೆ
ಮಧ್ಯೆ ನಿಮ್ಮದೇನ್ರಿ
ಅವಾಂತರ

-9-
ಬಂತು ಬಂತು
ಕರೆಂಟು ಬಂತು
ಕೇವಲ
ಇಂಧನ ಸಚಿವರ
ಕನಸಲ್ಲಿ...

-10-
ರಾಜ್ಯದ ಬೊಕ್ಕಸ
ಖಾಲಿ ಖಾಲಿ
ದಿವಾಳಿ...
ಸಚಿವ ಸಂಪುಟಕ್ಕೆ
ಜಾಲಿ ಜಾಲಿ
ದೀಪಾವಳಿ.

Oct 25, 2009

ಮತ್ತೆ ಬರುವನು ಚಂದಿರ - 38


ಕೀರ್ತಿ, ಪ್ರತಿಷ್ಠೆಗಳ ಹಂಬಲಕೆ
ವಾದಿ-ಸಂವಾದಿಯ ಸಂಹಾರ
ಅಡ್ಡದಾರಿಗೆ ಅನುಮೋದಿಸುತ
ಅಡ್ಡಗತ್ತರಿಗೆ ಸಿಕ್ಕಿದ ಚಂದಿರ

ಸರಳ ಜೀವನದೃಷ್ಟಿಯ ಮರೆತು
ಸ್ವಾರ್ಥ ಆದ್ಯತೆಗಳ ಸೆರೆಯಿಂದ
ಸನಾತನ ಮೌಲ್ಯಗಳ ಪಸರಿಸುತ
ಪ್ರತಿಭೆಯ ಮೆರೆಯುವ ಚಂದಿರ

ನಡಾವಳಿಗಳ ಪರಿಶೀಲನೆ
ನಂಬುಗೆಗಳ ಪರಾಮಾರ್ಶೆ
ವಿದ್ಯಮಾನಗಳ ಅರಿವಿಂದ
ದೀವಟಿಗೆಯಾಗೊ ಚಂದಿರ

ಪಾಶ್ಚಾತ್ಯ ರಾಷ್ಟ್ರಗಳ ವಿಕೃತಿಗಳು
ಜಾಗತೀಕರಣದ ಹಪಹಪಿಕೆಗಳು
ಮೂಲಭೂತವಾದಿಗಳ ಹುನ್ನಾರ
ಹೆಡೆ ಬಿಚ್ಚಿರಲು ಎಚ್ಚರ ಚಂದಿರ

ಅಂತರಂಗದ ಅಳಲುಗಳ
ಚಿಂತನ ಮಂಥನಗಳಿಂದ
ಆತ್ಮಾನುಸಂಧಾನ ಹರಸುತ
ಆತ್ಮೋದ್ಧಾರವಾಗಲಿ ಚಂದಿರ

ವೇದ, ಉಪನಿಷತ್ತುಗಳಾಗಲಿ,
ಇಲ್ಲಾ ಬ್ರಹ್ಮಸೂತ್ರಗಳಾಗಲಿ
ಧಾರ್ಮಿಕ ಶಾಸ್ತ್ರಗಳಿದ್ದರೂ ಸರಿ
ದಾರ್ಶನಿಕನಾಗಿರೊ ಚಂದಿರ

ಬಡವರ ಬಾಳಿಗೆ ಕೊಳ್ಳಿಯನಿಟ್ಟು
ತೋರಿಕೆಯ ಆಚರಣೆಗಳು ಬೇಕೆ
ಆಡಂಬರದ ಪ್ರದರ್ಶನಗಳೆಂಬ
ವಿಕೃತಪೀಡೆ ತೊಲಗಿಸೊ ಚಂದಿರ

ಸಮಕಾಲೀನ ಪ್ರಜ್ಞೆಯೊಂದಿಗೆ
ಇತಿಹಾಸಗಳ ತಿರುವುಗಳಿಂದ
ತಾತ್ಕಾಲಿಕ ತಂತ್ರಗಳ ತೊರೆದು
ಪರಿಸರಪ್ರೇಮಿಯಾಗು ಚಂದಿರ

ಶತಮಾನಗಳ ನಿರ್ಲಕ್ಷದಿಂದಲೆ
ವಿಕೋಪಗಳು ತಾಂಡವವಾಡಿವೆ
ವಿಷಮಸ್ಥತಿಗೆ ತತ್ತರಿಸುವೆ ಬಹಳ
ತುರ್ತುಸುಧಾರಣೆ ಬೇಕು ಚಂದಿರ

ಅಧಿಕಾರದಾಸೆಗೆ ಮರುಳಾಗಿ
ಸಂಪತ್ತಿನ ಸಂಗ್ರಹ ಅನವರತ
ದ್ವೇಷ, ಸೇಡುಗಳು ಹಪಹಪಿಕೆ
ಇವ ದುಷ್ಟನಾಗಿಹನೊ ಚಂದಿರ

Oct 21, 2009

ಹನಿಗಳು - 6


-1-
ಗೆಳತಿ,
ಬಂದೇ ಬರುವೆ
ಎಂದು ಭರವಸೆ ನೀಡಿ.
ಹೀಗೆ ಭಾವಿ ಪತಿಯೊಂದಿಗೆ
ಬರುವುದು ನ್ಯಾಯವೆ?

-2-
ನನ್ನ
ಬಂಗಾರಿ
ಮುಂಗಾರಿನಂಥಾಗಲು
ಕಾರಣವೇನು
ಗುರುವೆ?

-3-
ಗೆಳತಿ
ಅಚ್ಚ ಕನ್ನಡದಾಕಿ
ಫೋರಮ್ ಮಾಲಿಗೆ
ಕಾಲಿಟ್ಟೊಡನೆ ಇವಳಿಗೇಕೊ
ಇಂಗ್ಲೀಷ್ ಶೋಕಿ?

-4-
ಗೆಳತಿ,
ನೀನೇ ನನ್ನ ಸರ್ವಸ್ವ
ಎಂದದ್ದು ನನಗೊ,
ಇಲ್ಲ ನನ್ನ ಸರ್ವಸ್ವಕ್ಕೊ...

-5-
ನಿನ್ನ
ಮಾದಕ ಕಣ್ಣು
ವರ್ಣಿಸಳಸದಳ
ಕ್ಷಮಿಸು ಪರಿಮಳ

-6-
ಮೊದಲ ವಾರ
ಹೊಮ್ಮಿಸುವೆ
ಸುಗಂಧ ಪರಿಮಳ!
ಕೊನೆಯ ವಾರ
ನಿಲ್ಲುವುದೇ ಇಲ್ಲ
ನಿನ್ನ ಜಗಳ

-7-
ನಲ್ಲೆ
ಈಗ ಸಲ್ಲದು
ಬಿಂಕ, ಬಿಗುಮಾನ
ಮತ್ತೆ ಬೇಡಿದರೂ ಸಿಗದು
ಈ ಸುಂದರ ಹವಾಮಾನ

-8-
ಚೆಲುವೆ,
ದೂರದ ಬೆಟ್ಟ ನುಣ್ಣಗೆ
ಎಂದು ಖಚಿತವಾಗಿದ್ದು
ನೀನು ಹತ್ತಿರ ಬಂದಾಗಲೆ...

-9-
ನಲ್ಲ,
ನೀನಿಲ್ಲದೆ
ನಾನಿರಲಾರೆ
ಎಂದು ಹೇಳಿದ್ದು
ಛೆ...ಸಿನಿಮಾ ಹೆಸರೆ?

-10-
ವಸಂತದಲ್ಲಿ
ಕಂಗೊಳಿಸುವ
ಹಸಿರು.
ನಿನ್ನ ಬೆಚ್ಚಗಿನ
ಉಸಿರು...

Oct 18, 2009

ಮನುಜರಾಗ ಬನ್ನಿರಿ

ಕುಲವ ಕಳಚಿ, ಮತವ ಮರೆತು,
ಮಾನವತ್ವ ಮೆರೆಯಿರಿ, ಮನುಜರಾಗ ಬನ್ನಿರಿ.
ನುಡಿಯೆ ತಾಯಿ, ನೆಲೆಯೆ ತಂದೆ,
ಜಗವೆ ನಮ್ಮದೆನ್ನಿರಿ, ಮನುಜರಾಗ ಬನ್ನಿರಿ

ಹಸಿರು ವನ, ಹರಿವ ನದಿ,
ಹಾರೊ ಹಕ್ಕಿ, ನಲಿವ ನವಿಲ ಜೊತೆಗೆ
ಗೆಳೆಯರಾಗಿ ಬನ್ನಿರಿ, ಮನುಜರಾಗ ಬನ್ನಿರಿ.

ಕಾಮ, ಕ್ರೋಧ, ಲೋಭ, ಮೋಹ
ರಾಗ, ದ್ವೇಷ, ಮದ, ಮತ್ಸರದ
ಎಲ್ಲೆಮೀರಿ ಬನ್ನಿರಿ, ಮನುಜರಾಗ ಬನ್ನಿರಿ.

ಕುಲವ ಕಳಚಿ, ಮತವ ಮರೆತು,
ಮಾನವತ್ವ ಮೆರೆಯಿರಿ, ಮನುಜರಾಗ ಬನ್ನಿರಿ.
ನುಡಿಯೆ ತಾಯಿ, ನೆಲೆಯೆ ತಂದೆ
ಜಗವೆ ನಮ್ಮದೆನ್ನಿರಿ, ಮನುಜರಾಗ ಬನ್ನಿರಿ

ಹಿಂಸೆ ನರಕ, ಅಹಿಂಸೆ ಸ್ವರ್ಗ,
ಒಲವೆ ಬದುಕು, ಅರಿವು ಬೆಳಕು
ಶಾಂತಿಧೂತರಾಗಿರಿ, ಮನುಜರಾಗ ಬನ್ನಿರಿ.

ಮೃಗ-ಖಗಗಳ, ಪಶು-ಪಕ್ಷಿಯ,
ಜಲಚರ, ಸಕಲ ಜೀವರಾಶಿಯ ಜೊತೆ
ಒಂದಾಗಿ ಬನ್ನಿರಿ, ಮನುಜರಾಗ ಬನ್ನಿರಿ.

ಕುಲವ ಕಳಚಿ, ಮತವ ಮರೆತು,
ಮಾನವತ್ವ ಮೆರೆಯಿರಿ, ಮನುಜರಾಗ ಬನ್ನಿರಿ.
ನುಡಿಯೆ ತಾಯಿ, ನೆಲೆಯೆ ತಂದೆ
ಜಗವೆ ನಮ್ಮದೆನ್ನಿರಿ, ಮನುಜರಾಗ ಬನ್ನಿರಿ

Oct 14, 2009

ಮತ್ತೆ ಬರುವನು ಚಂದಿರ – 37


ಅನಗತ್ಯ ಹೋಲಿಕೆಯಿಂದ
ಮಿತಿಮೀರಿದ ದುರಾಸೆಗಳು
ಅಸಮಧಾನ, ಅತಂತ್ರತೆ
ದುರಂತ ಬದುಕು ಚಂದಿರ

ರಾಜಕಾರಣದ ನೀಚ ನಡೆ
ಔದ್ಯಮೀಕರದ ದುಷ್ಟಮುಖ
ಭ್ರಷ್ಟಾಚಾರದ ರುದ್ರನರ್ತನ
ಸೊರಗಿದ ಸಮಾನ್ಯ ಚಂದಿರ

ಪವಾಡ ಪುರಾಣಗಳ ವಿವರ
ವಿಶಿಷ್ಟ ಹರಹಿನ ತಿರುವುಗಳ
ತರ್ಕಹೀನ ನಡೆ ನುಡಿಗಳ
ಕತ್ತಳೆಡೆಗೆ ಪಯಣ ಚಂದಿರ

ಸಮಸ್ಯೆಗಳ ಸುಳಿಯೊಳಗೆ
ತತ್ತರಿಸುತ ನರಳುತಿರುವ
ಸಾಧ್ಯತೆಗಳ ಅರಿವಿರದೆ
ಸಾಯುತಿರುವನು ಚಂದಿರ

ಹಗಲುವೇಶ ಹೇರಿಕೊಂಡು
ಹಲವು ಬಣ್ಣ ಲೇಪಿಸುತ್ತಲೇ
ಹಳ್ಳಕ್ಕೆ ತಳ್ಳಿ ಕಾಲ್ಕೀಳುವ
ಪಟಿಂಗನಿವನೊ ಚಂದಿರ

ಆಗಿರುವುದರ ನೆನಪುಗಳಿಲ್ಲ
ಆಗುತ್ತಿರುವುದೂ ಅರಿವಿಲ್ಲ
ಆಗಲಿರುವುದರ ಸುಳಿವಿಲ್ಲ
ಅಗಲುವನೀಗೇ ಚಂದಿರ

ಪ್ರಚಲಿತವಿರುವ ಪರಿಸರ
ವಿಕೋಪವಾದರು ವಿಮುಕ
ತೀರ್ಥಯಾತ್ರೆಗೆ ತಿರುಳಿಲ್ಲ
ತಿಳಿಸಿಕೊಡುವೆಯ ಚಂದಿರ

ಗ್ರಹಿಸುವ ಇಚ್ಛಾಸಕ್ತಿ ತ್ಯಜಿಸುತ
ನಿರೂಪಣೆಯ ಧಾಟಿ ದೂರುತ
ವಿಷಯಾಂತರಕೆ ಮಣೆ ಹಾಕುತ
ವಿಕೋಪಕ್ಕೆ ತುತ್ತಾದ ಚಂದಿರ

ನೀರಸ ಪಯಣಕೆ ಪಡಪಡಿಸಿ
ಪರಿಶ್ರಮದಿಂದಲೆ ಪಲಾಯನ
ಸಂಯಮ ತೊರೆದ ಪರದೇಸಿ
ವಿಲ ವಿಲ ಒದ್ದಾಡುವ ಚಂದಿರ

ಮಿತಿಮೀರಿದ ನಿರೀಕ್ಷೆಗಳಿಂದ
ಸತ್ಯ ಶೋಧನೆಗೆ ಶ್ರಮಪಡದೆ
ನಿರಾಸೆಗಳಿಂದ ವಿಚಲಿತನಾಗಿ
ನಿಶಾಚರನಾದನೊ ಚಂದಿರ

Oct 13, 2009

ಕವಿ ಮಹಾಶಯ


ನಿಜವಾಗಲೂ ಇವ ಅರೆಹುಚ್ಚನಿದ್ದಂತೆ,
ಏನೋ ಹೇಳಲು ಹೋಗಿ, ಏನೋ ಹೇಳುತ್ತಾ,
ಮತ್ತೇನೋ ಸೂಚಿಸುತ್ತಿರುತ್ತಾನೆ...
ಕೆಲವೂಮ್ಮೆ ಅಧಿಕಪ್ರಸಂಗಿಯಾಗುತ್ತಾನೆ.
ಕಿರುಚುತ್ತಾನೆ, ನಗುತ್ತಾನೆ, ಬೈಯುತ್ತಾನೆ,
ಮತ್ತೆ ಒಮ್ಮೆಗೇ ಮೌನವ್ರತ ಆಚರಿಸುತ್ತಾನೆ.
ಏಕಾಂಗಿಯಾಗಿರಲು ಬಯಸುತ್ತಾನೆ,
ಸೂರ್ಯ,ಚಂದ್ರ, ಋತುಗಳಂತೆ ಬದಲಾಗುತ್ತಿರುತ್ತಾನೆ.
ಖಂಡಿತ ಇವನು ಸಾಮಾನ್ಯನಲ್ಲ!
ತನ್ನತ್ತ ಮಕ್ಕಳಂತೆ ಗಮನ ಸೆಳೆಯಲು
ಪಡಪಡಿಸುತ್ತಿರುತ್ತಾನೆ.
ಮತ್ತೆ ಯಾವಾಗಲೂ ನಶೆಯಲ್ಲಿರುತ್ತಾನೆ,
ಕಾವ್ಯದ ನಶೆ, ಮದಿರೆಯ ನಶೆ,
ಮಹಿಳೆ, ಇಲ್ಲಾ ಪ್ರಕೃತಿಯ ನಶೆಯಲ್ಲಿ ಹೀಗೇ...
ಪ್ರೀತಿಯಲ್ಲಿ ಸೋತ ಪ್ರಿಯಕರನಾಗಿದ್ದರೆ
ಅಲ್ಲಿಗೆ ಮುಗಿದಂತೆ ಕತೆ.
ನೆಡೆ-ನುಡಿ, ಯೋಚಾನಾ ಕ್ರಮ
ಎಲ್ಲವೂ ತೀರಾ ಭಿನ್ನ-ವಿಭಿನ್ನ.
ಬಿಡಿ ಎಲ್ಲರಂತಿರಲು ಇವನಿಗೆ ಕಷ್ಟಸಾಧ್ಯ!
ಓ ದೇವರೆ!
ಎಲ್ಲದಕ್ಕೂ ಮೂಗು ತೂರಿಸುತ್ತಾನೆ,
ಆದರೂ, ಇವ ಸೂಕ್ಷಾತಿಸೂಕ್ಷ್ಮ ಪ್ರಾಣಿ.
ಕೆಲವೂಮ್ಮೆ ಯಾವುದಕ್ಕೂ ತಲೆಕೆಡಿಸಿಕೊಳ್ಳದಂತೆ
ಸುಮ್ಮನೆ ಗುಮ್ಮನಂತೆ ಇದ್ದುಬಿಡುತ್ತಾನೆ.
ಪ್ರಖರ ಪಂಡಿತನಂತೆ ಯಾವ ವಿಷಯವಾದರೂ ಸರಿಯೆ
ಭೂಮಿಯ ಮೇಲೆ, ಆಗಸದ ಕೆಳಗೆ, ತಿಳಿಯದ ಭ್ರಹ್ಮಾಂಡವಾದರೂ ಸರಿ
ಏನು ಬೇಕಾದರು ಬರೆಯಬಲ್ಲ ಭೂಪ!
ನೆನಪಿರಲಿ, ಇವ ಪುಂಡ, ಪುಢಾರಿಯೂ ಆಗಬಲ್ಲ ಚಾಣಾಕ್ಷ.
ಇವನು ವಿಪರೀತ ದ್ವೇಷಿಸುವವರೆಂದರೆ,
ಜಡ ಆಡಳಿತ ವರ್ಗದವರು, ಭ್ರಷ್ಟಾಚಾರಿಗಳು, ಅವಕಾಶವಾದಿಗಳು,
ಆಗರ್ಭ ಶ್ರೀಮಂತರು ಮತ್ತು ನೀಚ ರಾಜಕಾರಣಿಗಳು!
ಹಾಗೇ ಬಡತನವೆಂದರೆ ಇವನಿಗೆ ತುಂಬಾ ಆಪ್ಯಾಯಮಾನ
ಅಸಹಾಯಕರನ್ನು ಕಂಡರೆ ಎಲ್ಲಿಲ್ಲದ ಒಲವು.
ಇನ್ನು ಇವನನ್ನು ಸುಧಾರಿಸುವುದಂತೂ ಹಗಲುಗನಸು;
ಈ ಕ್ರಿಮಿಯನ್ನು ವರ್ಣಿಸಳಸದಳ!
ದಪ್ಪ ಅಕ್ಷರಗಳಲ್ಲಿ ಬರೆದಿಡಿ...
ಹೀಗಿರುವುದೆಂದರೆ,
ಇವನಿಗೆ ನಿಸ್ಸಂಶಯವಾಗಿ ತುಂಬಾ...ತುಂಬಾ ಇಷ್ಟ!

Oct 12, 2009

ಮತ್ತೆ ಬರುವನು ಚಂದಿರ - 36


ದಿವ್ಯಮಿಲನಕೆ ಸಕಲ ಸಿದ್ಧತೆಯಿಂದ
ಕಾತುರದಿ ಕಾಯುತ್ತಿರುವಾಗ
ತಡವಾಗುತ್ತೆಂದು ಪೋನಾಯಿಸಿ
ರಸಭಂಗ ಮಾಡಿದ ಚಂದಿರ

ತಡವಾದರೂ ಸರಿಯೆ
ಬಿಡದೆ ಕಾಡುವ ಮಡದಿಗೆ
ತಲೆನೋವಿನ ನೆಪವೂಡ್ಡಿ
ಪ್ರಸಿದ್ಧ ನಟನಾದ ಚಂದಿರ

ಸವಿಸವಿ ಮಾತಿಂದ
ಸೆಳೆಯಲೆತ್ನಿಸಿದಾಗ
ಮನೆ ಸ್ವಚ್ಛವಾಗಿಲ್ಲವೆಂದು
ಅಬ್ಬರಿಸುವನಲ್ಲಾ ಚಂದಿರ

ಸಂತೃಪ್ತಿಯ ಬಯಸುತ್ತ
ಇಷ್ಟದ ಅಡುಗೆ ಬಡಿಸಿದರೆ
ಆನಂದದಿಂದ ಆಸ್ವಾಧಿಸಿ
ಮಗುವಂತೆ ಮಲಗಿದ ಚಂದಿರ

ಸುಂದರವಾಗಿ ಅಲಂಕಾರಗೊಂಡು
ಆಕರ್ಷಿಸಲೆತ್ನಿಸಿದರೆ ಅಪಶಕುನವೆಂದು
ನಯವಾಗಿ ಜರಿದು ಜಾರಿಕೊಂಡ
ಚತುರ ಚೆಲುವಾಂಗ ಚಂದಿರ

ಇಳಿಸಂಜೆ ತಂಗಾಳಿಯಲ್ಲಿ
ಹಾಯಾಗಿ ಸುತ್ತೋಣವೆಂದರೆ
ಏಕೊ ಸುಸ್ತಾಗುತ್ತಿದೆ ಎಂದು
ಸುಮ್ಮನಾದನಲ್ಲಾ ಚಂದಿರ

ಬರುವ ಶನಿವಾರ ಸಿನಿಮಾ
ನೋಡಿ ಬರೋಣ ಎಂದರೆ
ಸಿಡಿಮಿಡಿಗೊಂಡು ಸಿಟ್ಟಾಗಿ
ಚೀರಿಕೊಂಡನೇಕೆ ಚಂದಿರ

ಭಾನುವಾರವಾದರೂ ವಿಶ್ರಾಂತಿ
ಪಡೆಯಿರೆಂದು ವಿನಂತಿಸಿಕೊಂಡರೆ
ಗೆಳೆಯರಿಗೆ ಕರೆಮಾಡಿ ಕೂಡಲೆ
ಕಾಲ್ತೆಗೆಯುತ್ತಾನಲ್ಲಾ ಚಂದಿರ

ನಕಾರಾತ್ಮಕ ಪ್ರತಿಕ್ರಿಯಿಂದ
ಬೇಸತ್ತು ತವರುಮನೆಗೋದರೆ
ತಬ್ಬಲಿಯಂತೆ ಗೋಗರೆದು
ಕೂಡಲೆ ಬರಹೇಳಿದ ಚಂದಿರ

ಕ್ಷಣದಲೆ ಅಪ್ಪಿಕೊಂಡು ಆತುರುದಿ
ಮಿಲನಕೆ ಹಾತೊರೆದು ನಿಂತಾಗ
ತಿಂಗಳಾಯಿತೆಂದರೆ ತಬ್ಬಿಬ್ಬಾಗಿ
ತಣ್ಣಗಾದ ಬಡಪಾಯಿ ಚಂದಿರ

Oct 9, 2009

ಸಾಲು - 8

- 1 -
ತೆರಿಗೆ ಕಟ್ಟಿ, ಓಟೂ ಒತ್ತಿ
ಸುತ್ತಿ ಸುತ್ತಿ ಸಲಾಂ ಹೊಡೆದೂ
ಲಂಚ ಕೊಡೊ ಗುಗ್ಗೂಸ್ ಎಂದು ಗುದ್ದಿಸಿಕೊಂಡ್ರೂ...
ತೆಪ್ಪಗಿರೊ ಅಸಹಾಯಕ ಪ್ರಜೆಗಳ ದುಸ್ಥಿತಿ,
ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಮಾನ!

- 2 -
ಜನಸೇವೆಯ ಹೆಸರಲ್ಲಿ
ನಲವತ್ತೆಂಟು ಕೋಟಿ ರೂಗಳ
ಸುಂದರ ವಜ್ರದ ಸುವರ್ಣ ಕಿರೀಟ
ದೂರದ ತಿರುಪತಿ ತಿಮ್ಮಪ್ಪನಿಗೆ!
ಊರಲ್ಲೇ ಭೀಕರ ನೆರೆಯಿಂದ ತತ್ತರಿಸಿ,
ಕೂಳಿಗೂ, ಸೂರಿಗೂ ಪರದಾಡುವ ಜನರ
ಧಾರುಣ ಪರಿಸ್ಥಿತಿಯಲ್ಲೂ ಮನಕರಗದ
ಅಮಾನವೀಯ ಗಣ್ಯ ನಾಯಕರ ನಡೆ
ಬಹಳ ಅಸಹನೀಯವಾದುದು.

- 3 -
ಪ್ರಜಾಸೇವೆ ಪರಮಾತ್ಮನ ಸೇವೆಯೆಂದು
ಪಢಪಢಿಸಿ ತೊದಲುತ್ತಾ...ಬೊಗಳುತ್ತಾ...
ಅಸಹಾಯಕ ಪ್ರಜೆಗಳ ಪೀಡಿಸಿ, ಹಿಂಸಿಸಿ
ಪ್ರಭುಗಳಾಗುವ ವಿಕೃತ ಸಾಧನೆಯಿಂದ...
ಸಂತೃಪ್ತಿ ಸಿದ್ಧಿಸಿಕೊಳ್ಳಲು ಸಾಧ್ಯವೆ?

- 4 -
ಜಾತಿ, ಮತ, ನಾಡು, ನುಡಿ, ದೇಶ
ಇವೆಲ್ಲವನ್ನೂ ಮೀರಿದ ಪಯಣ...
ಪ್ರಕೃತಿಯೊಂದಿಗೆ ಸಕಲ ಜೀವರಾಶಿಗಳ ಸಂರಕ್ಷಣೆ,
ಸಂಕಷ್ಟದಲ್ಲಿ ಸಿಲುಕಿದ ಸಹಪಯಣಿಗರಿಗೆ
ಸೂಕ್ತ ಸ್ಪಂದನೆ, ಸಾಧ್ಯವಾದ ನೆರವಿಂದ
ಮಾನವತ್ವ ಮೆರೆಯುವುದೆ ಮಾನವನ
ಧ್ಯೇಯೋದ್ಧೇಶ, ಸಾಧನೆ, ಸಾರ್ಥಕ.

Oct 8, 2009

ಕರುಣೆಯಿರಲಿ


ಕೊಚ್ಚಿಹೋಗಿದ್ದು;
ಬರಿ ಮನೆಗಳಲ್ಲಾ, ಮನದ ಆಸೆಗಳು
ಹೂತುಹೋಗಿದ್ದು;
ಬರಿ ದವಸಧಾನ್ಯಗಳಲ್ಲ, ಪುಟಿದ ಕನಸುಗಳು
ಕರಗಿಹೋಗಿದ್ದು;
ಬರಿ ಉಪ್ಪುಸಕ್ಕರೆಯಲ್ಲ, ಸವಿ ನೆನಪುಗಳು
ಸಿಡಿದುಬಿದ್ದಿದ್ದು;
ಬರಿ ಮನೆಯ ಮಾಳಿಗೆಯಲ್ಲ, ನಂಬಿಕೆಗಳು
ಉರುಳಿಬಿದ್ದಿದ್ದು;
ಬರಿ ನಾಲ್ಕುಗೋಡೆಗಳಲ್ಲ, ದಶಕಗಳ ನೆರಳು
ಉಕ್ಕಿಹರಿದದ್ದು;
ಬರಿ ಕಣ್ಣೀರಲ್ಲ, ನಗುವುಂಡ ನೆನ್ನೆಗಳು
ಚದುರಿಬಿದ್ದಿದ್ದು;
ಬರಿ ಪಾತ್ರೆಗಳಲ್ಲ, ಸಂತಸದ ನಾಳೆಗಳು
ಅಳಿಸಿಹೋಗಿದ್ದು;
ಬರಿ ರಂಗೋಲೆಗಳಲ್ಲ, ರಂಗಿನ ಹಬ್ಬಗಳು
ತೋಯ್ದುಹೋಗಿದ್ದು;
ಬರಿ ತೊಟ್ಟವಸ್ತ್ರಗಳಲ್ಲ, ಎಲ್ಲ ಶುಭಕಾರ್ಯಗಳು
ಮಾಯವಾಗಿದ್ದು;
ಬರಿ ಅಂಕಿಅಂಶಗಳಲ್ಲ, ಬದುಕಿನ ಭದ್ರತೆಗಳು