Oct 13, 2009

ಕವಿ ಮಹಾಶಯ


ನಿಜವಾಗಲೂ ಇವ ಅರೆಹುಚ್ಚನಿದ್ದಂತೆ,
ಏನೋ ಹೇಳಲು ಹೋಗಿ, ಏನೋ ಹೇಳುತ್ತಾ,
ಮತ್ತೇನೋ ಸೂಚಿಸುತ್ತಿರುತ್ತಾನೆ...
ಕೆಲವೂಮ್ಮೆ ಅಧಿಕಪ್ರಸಂಗಿಯಾಗುತ್ತಾನೆ.
ಕಿರುಚುತ್ತಾನೆ, ನಗುತ್ತಾನೆ, ಬೈಯುತ್ತಾನೆ,
ಮತ್ತೆ ಒಮ್ಮೆಗೇ ಮೌನವ್ರತ ಆಚರಿಸುತ್ತಾನೆ.
ಏಕಾಂಗಿಯಾಗಿರಲು ಬಯಸುತ್ತಾನೆ,
ಸೂರ್ಯ,ಚಂದ್ರ, ಋತುಗಳಂತೆ ಬದಲಾಗುತ್ತಿರುತ್ತಾನೆ.
ಖಂಡಿತ ಇವನು ಸಾಮಾನ್ಯನಲ್ಲ!
ತನ್ನತ್ತ ಮಕ್ಕಳಂತೆ ಗಮನ ಸೆಳೆಯಲು
ಪಡಪಡಿಸುತ್ತಿರುತ್ತಾನೆ.
ಮತ್ತೆ ಯಾವಾಗಲೂ ನಶೆಯಲ್ಲಿರುತ್ತಾನೆ,
ಕಾವ್ಯದ ನಶೆ, ಮದಿರೆಯ ನಶೆ,
ಮಹಿಳೆ, ಇಲ್ಲಾ ಪ್ರಕೃತಿಯ ನಶೆಯಲ್ಲಿ ಹೀಗೇ...
ಪ್ರೀತಿಯಲ್ಲಿ ಸೋತ ಪ್ರಿಯಕರನಾಗಿದ್ದರೆ
ಅಲ್ಲಿಗೆ ಮುಗಿದಂತೆ ಕತೆ.
ನೆಡೆ-ನುಡಿ, ಯೋಚಾನಾ ಕ್ರಮ
ಎಲ್ಲವೂ ತೀರಾ ಭಿನ್ನ-ವಿಭಿನ್ನ.
ಬಿಡಿ ಎಲ್ಲರಂತಿರಲು ಇವನಿಗೆ ಕಷ್ಟಸಾಧ್ಯ!
ಓ ದೇವರೆ!
ಎಲ್ಲದಕ್ಕೂ ಮೂಗು ತೂರಿಸುತ್ತಾನೆ,
ಆದರೂ, ಇವ ಸೂಕ್ಷಾತಿಸೂಕ್ಷ್ಮ ಪ್ರಾಣಿ.
ಕೆಲವೂಮ್ಮೆ ಯಾವುದಕ್ಕೂ ತಲೆಕೆಡಿಸಿಕೊಳ್ಳದಂತೆ
ಸುಮ್ಮನೆ ಗುಮ್ಮನಂತೆ ಇದ್ದುಬಿಡುತ್ತಾನೆ.
ಪ್ರಖರ ಪಂಡಿತನಂತೆ ಯಾವ ವಿಷಯವಾದರೂ ಸರಿಯೆ
ಭೂಮಿಯ ಮೇಲೆ, ಆಗಸದ ಕೆಳಗೆ, ತಿಳಿಯದ ಭ್ರಹ್ಮಾಂಡವಾದರೂ ಸರಿ
ಏನು ಬೇಕಾದರು ಬರೆಯಬಲ್ಲ ಭೂಪ!
ನೆನಪಿರಲಿ, ಇವ ಪುಂಡ, ಪುಢಾರಿಯೂ ಆಗಬಲ್ಲ ಚಾಣಾಕ್ಷ.
ಇವನು ವಿಪರೀತ ದ್ವೇಷಿಸುವವರೆಂದರೆ,
ಜಡ ಆಡಳಿತ ವರ್ಗದವರು, ಭ್ರಷ್ಟಾಚಾರಿಗಳು, ಅವಕಾಶವಾದಿಗಳು,
ಆಗರ್ಭ ಶ್ರೀಮಂತರು ಮತ್ತು ನೀಚ ರಾಜಕಾರಣಿಗಳು!
ಹಾಗೇ ಬಡತನವೆಂದರೆ ಇವನಿಗೆ ತುಂಬಾ ಆಪ್ಯಾಯಮಾನ
ಅಸಹಾಯಕರನ್ನು ಕಂಡರೆ ಎಲ್ಲಿಲ್ಲದ ಒಲವು.
ಇನ್ನು ಇವನನ್ನು ಸುಧಾರಿಸುವುದಂತೂ ಹಗಲುಗನಸು;
ಈ ಕ್ರಿಮಿಯನ್ನು ವರ್ಣಿಸಳಸದಳ!
ದಪ್ಪ ಅಕ್ಷರಗಳಲ್ಲಿ ಬರೆದಿಡಿ...
ಹೀಗಿರುವುದೆಂದರೆ,
ಇವನಿಗೆ ನಿಸ್ಸಂಶಯವಾಗಿ ತುಂಬಾ...ತುಂಬಾ ಇಷ್ಟ!

2 comments:

Jyoti Hebbar said...

ಯಾರವನು ’ಮಹಾಶಯ’?

ಚಂದಿನ | Chandrashekar said...

ಯಾರೆಂದು ಹೇಗೆ ಹೇಳಲಿ?