Jan 24, 2010

ಹಾಯ್ಕು - 11

ಮಂಜು ಮುಸುಕಿದ ನಸುಕಿನಲ್ಲಿ
ನುಗ್ಗುವ ಬೆಚ್ಚಗಿನ ರವಿಕಿರಣ
ಅವಳ ಕಿರುನಗು ...

Jan 21, 2010

ಶ್ರೇಷ್ಠತೆಯ ಹುಡುಕಾಟದಲ್ಲಿ...

ಓ ನನ್ನ ಗೆಳೆಯನೆ!
ಆ ಅತ್ಯದ್ಭುತ ಕಾವ್ಯವೇ
ನನ್ನ ಏಕೈಕ ಸ್ವರ್ಗ
ಮತ್ತೆ ಆ ಮಾದಕ ಸೌಂದರ್ಯ
ಅದೇ ಈ ಜಗದ ಚಿರಂತನ ಸತ್ಯ...
ಅಲ್ಲಿರುವುದು ನನ್ನ ಶ್ರೇಷ್ಠತೆಯ ಹುಡುಕಾಟದ
ಐಕ್ಯ ಮಂಟಪ.

ಓ ನನ್ನ ಆಪ್ತನೆ!
ಇಲ್ಲಿ ನೋಡು ಮನಮೋಹಕ ಸಂಗೀತ
ನನಗೆ ದೈವವಿತ್ತ ಅತಿದೊಡ್ಡ ಕೊಡುಗೆ
ಮತ್ತೆ ಆ ನಿಶಬ್ಧ ಮೀಟುವ ಅನನ್ಯ ರಾಗಗಳು
ಮೂಕವಿಸ್ಮಿತನನ್ನಾಗಿಸುತ್ತವೆ
ಅದರಲ್ಲಡಗಿದೆ ನನ್ನ ನೆಚ್ಚಿನ ನೆಲೆ
ಆ ಭಾವಲಹರಿಯ ನರ್ತನದಲ್ಲಿ...

ಓ ನನ್ನ ಸ್ನೇಹಿತನೆ!
ಇನ್ನೂ ಇದೆ, ಅದೇ ಆ ನಿಸರ್ಗದ ಹಸಿರಿನ ಸಿರಿ
ನನ್ನ ಮತ್ತೊಂದು ಸುಂದರ ಸಂಗಾತಿ
ಮತ್ತಲ್ಲಿ ಕೇಳುವ ದುಂಬಿಗಳ ನಿನಾದ,
ಹಕ್ಕಿಗಳಿಂಚರ ವಾಹ್...ಏನದ್ಭುತ!
ಆ ಪ್ರಕ್ರಿಯೆಯಲ್ಲಿದೆ ನನ್ನ ಉತ್ಸಾಹದ ಚಿಲುಮೆ
ಆತ್ಮರತಿ ಸಿದ್ಧಿಸುವ ಕ್ಷಣದ ಸನಿಹದಲ್ಲಿ...

Jan 14, 2010

ಇಂದು ವಿವೇಚನೆ ಮಸುಕಾಗಿದೆ...

ಕಾಮ,
ಐಷಾರಾಮಿತನ,
ಜನಪ್ರಿಯತೆಯ ಬೆನ್ನತ್ತಿ
ತಮ್ಮ ಸಭ್ಯತೆಯನ್ನು ತೊರೆದಿದ್ದೇವೆ.

ಅಧಿಕಾರ,
ಅಭಿವೃದ್ಧಿ,
ಐಶ್ವರ್ಯದ ಹುಚ್ಚಿಂದ
ತಮ್ಮ ಅತಃಕರಣವನ್ನು ಕಡಿದಿದ್ದೇವೆ.

ಗಡಿ,
ಧರ್ಮ,
ಭಾಷೆಯ ಹೆಸರಲ್ಲಿ
ತಮ್ಮ ವ್ಯಕ್ತಿತ್ವಗಳನ್ನು ಹೂತಿದ್ದೇವೆ.

ಜಾತಿ,
ಬಣ್ಣ,
ಧಾರ್ಮಿಕ ನಂಬಿಕೆಗಳ ಹೆಸರಲ್ಲಿ
ನಾವು ಮನುಷ್ಯತ್ವವನ್ನೇ ಕೊಂದಿದ್ದೇವೆ.

Jan 8, 2010

ಹಾಯ್ಕು - 10

ಮುಸ್ಸಂಜೆಯ ನಂತರ
ಹೊಳೆವ ತಾರೆಗಳು,
ಅವಳ ಕಣ್ಣುಗಳು...

Jan 6, 2010

ಹಾಯ್ಕು – 9

ತುಂತುರು ಮಳೆಯಲ್ಲಿ
ನಶೆಯೇರಿಸುವ ಮಣ್ಣಿನ ಸುಗಂಧ,
ಅವಳ ಬೆವರು.

ಹಾಯ್ಕು – 8

ನಲ್ಲೆ, ನನ್ನ ಯೌವನ
ಮುಳುಗಿ ಹೋಯಿತು ನಿನ್ನಲ್ಲಿ
ಮುಗಿಲೆತ್ತರದ ಕಡಲಲ್ಲಿ ಮುರಿದ ದೋಣಿಯಂತೆ...