Jul 11, 2008

ಟಗರು

ಊರಬ್ಬದ ಸಲುವಾಗಿ
ಬೆಳೆಸಿದ್ದ ಸಿದ್ದ
ಕೊಬ್ಬಿದ ಐನಾತಿ
ಟಗರೊಂದ

ಬೆಳಗಿಂದ ಸಂಜೆ
ಅದರದೇ ಖದರು
ಸ್ನಾನ, ಮಸಾಜು ,
ಹಸಿ ಹಸಿ ಮೇವು

ಸಿದ್ದನೆಂಡತಿ ಸುಬ್ಬಿ
ಇದರ ಕಂಡಾಗವಳ
ಕಣ್ಣು, ಮೂಗು, ಮಖವೆಲ್ಲ
ಕೆಂಪು ಕೆಂಪು

ಇವಯ್ಯಂಗೆ ಹೊಟ್ಟೆಗಿಟ್ಟಿಲ್ಲ
ಜುಟ್ಟಿಗೆ ಮಲ್ಲಿಗಿ ಹೂ
ಹೆಂಡ್ತಿ ಯ್ಯಾಕ
ಟಗರನ್ನೆ ಆಗಬೇಕಿತ್ತು

ಉರಿದು ಬೀಳುವಳು
ಲಬ ಲಬ ಲಬ ಲಬ
ಕಿವಿಮುಚ್ಚಿ ಕುಂತ ಸಿದ್ದ
ಬೀಡಿ ಹಚ್ಚುವಾಸೆ ತೊರೆದು

ಟಗರಿನ ಇಚಾರ
ಊರ ಮಂದೀಗೆ ಕರೆದೇಳ್ತಾನ
ನನ್ನ ಇಸ್ಯ ಇವನ
ಬಾಯಿಗ್ಬರಂಗೇಯಿಲ್ಲ

ಹಬ್ಬ ಹತ್ತಿರವಾದಂತೆ
ಸಿದ್ದ ಸಪ್ಪಗಿದ್ದ
ಅಂದು ಟಗರೆಳೆದೊಯ್ದಾಗ
ಅಂವ ಬಿಕ್ಕಿ ಬಿಕ್ಕಿ ಅತ್ತಿದ್ದ

ಸುಬ್ಬಿ ಕಣ್ಣಂಚು ಒದ್ದೆ ಒದ್ದೆ
ಕೈಹಿಡಿದು ಒಳಗೊಯ್ದು
ಮಮತೆ ಮಾಗಿದ ಕ್ಷಣ
ಎದೆಗೊತ್ತಿ ಮಲಗಿ ಸಮಾಧಾನ

No comments: