Jul 26, 2008

ನಿತ್ಯ ಪಯಣವ ಕಟ್ಟಿ ಕಾಣೆಯಾದವಳು*

ಕಣ್ಸನ್ನೆಯಲೇ ಕುಶಲವ ಕೇಳಿ
ತುಟಿಯಂಚಿನಲಿ ಪ್ರಶ್ನೆಗಳ ಸೆರೆಹಿಡಿದು ,
ಬಿರುಗಾಳಿ ಎಬ್ಬಿಸಿ ,
ಮಿಂಚಂತೆ ಮಾಯವಾದಳು ಎಲ್ಲಿಗೆ ?

ಪಾರದರ್ಷಕ ಪ್ರತಿಬಿಂಬ ,
ನಿಶ್ಚಲ ನೀರಿನಂತಿದ್ದ ಮನಕೆ ,
ಹಿತವಾದ ಅನುಭವ ,
ಕಂಪಿಸುವ ಕಂಪನಗಳ ರೋಮಾಂಚನ !

ಅಸ್ಪಷ್ಟದ ಅಲೆಗಳ ಅಬ್ಬರಕೆ
ಲೀನವಾಗಿ, ಮರೆಯಾಗಿ ಜೊತೆಗೆ ,
ಹಿಡಿದಿಟ್ಟ ಪ್ರಶ್ನೆಗಳ ಎಸೆಯಲಿಲ್ಲವೇಕೆ ?

ಅಂತರಂಗದಾಳದಲಿ, ಅವಳ
ಮನದ ತಳಮಳಗಳಲಿ ತುಂಟ ಕಚಗುಳಿ
ಇಟ್ಟವನು ನಾನೇನು ?

ಕ್ಷಣಕೆ ಸೆರೆಸಿಕ್ಕ ಅದ್ಭುತ ಕಲಾಕೃತಿ ,
ಸ್ಥಿರವಾಗಿ ಮನಸ್ಪುಟದಲ್ಲಿ ನೆಲೆಸಿ
ಮರೆಯುವ ಯತ್ನ ಮತ್ತೆ ಮತ್ತೆ ಸೋತಿದೆಯೆ ?
ಊಹೆಗಳು ದುಂಬಿಗಳಾಗಿ ಗಿರಕಿ ಹೊಡಿಯುತ್ತಿವೆಯೆ ?

ಕಾಣದ ನದಿಯಲ್ಲಿ ಮುಳುಗಿರುವೆನೇಕೆ ?
ಬೇರೆಡೆಗೆ ಮನವ ಸೆಳೆಯಲಾರೆನೇಕೆ ?
ಹೊರ ಜಗವು ಬತ್ತಿ ಬರಿದಾಯಿತೇಕೆ ?
ಇವಳ ಜೊತೆಗಿರುವ ಬಯಕೆ ನನಗೇಕೆ ?
ಹೇಗಿರುವಳೋ, ಎಲ್ಲಿರುವಳೋ,
ಮಾತಿಲ್ಲ, ಸುಳಿವಿಲ್ಲ, ಹೆಸರು ಗೊತ್ತಿಲ್ಲ ?
ನನ್ನ ನಿತ್ಯ ಪಯಣವ ಕಟ್ಟಿ ಕಾಣೆಯಾದವಳು;
ಈ ಒಗಟು ಬಿಡಿಸಳು ಅವಳೆಂದು ಬರುವಳು ?

No comments: