Apr 29, 2009

"ಮುಸ್ಸಂಜೆ ಮುಖಾಮುಖಿ" ಬಿಡುಗಡೆಗೆ - ನಿಮ್ಮ ಆಗಮನದ ನಿರೀಕ್ಷೆ..


ಆತ್ಮೀಯರೇ,
ಹೈದರಾಬಾದಿನಲ್ಲಿರುವ ಕಾರಣ ನಿಮ್ಮನ್ನು ಇದುವರೆಗೂ ಪ್ರತ್ಯಕ್ಷವಾಗಿ ಭೇಟಿಯಾಗುವ
ಅವಕಾಶ ಕೂಡಿ ಬರಲಿಲ್ಲ.
ಆದರೆ, ಇದೇ ಸೋಮವಾರ ಮೇ 04, 2009 ರ ಸಂಜೆ 5.30 ರಿಂದ 7.30 ರವರೆಗೆ ಯವನಿಕಾ, II ಮಹಡಿ, ಕಾನ್ಪರೆನ್ಸ್ ಹಾಲ್,
ನೃಪತುಂಗ ರಸ್ತೆ, ಬೆಂಗಳೂರು ಇಲ್ಲಿ ಒಂದು ಸಣ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನಿಮ್ಮನ್ನು ಭೇಟಿಯಾಗಲು ಇದೊಂದು
ಉತ್ತಮ ಅವಕಾಶವೆಂದು ಭಾವಿಸುತ್ತೇನೆ.
ಯಾವುದೇ ಕೆಲಸವಿದ್ದರೂ ದಯವಿಟ್ಟು ಈ ಕಾರ್ಯಕ್ರಮಕ್ಕೆ ಆಗಮಿಸಿ, ನಿಮ್ಮನ್ನು ಭೇಟಿಯಾಗುವ
ಅವಕಾಶವನ್ನು ತಪ್ಪದೇ ಕಲ್ಪಿಸಿಕೊಡುವಿರೆಂಬ ಒತ್ತಾಸೆಯೊಂದಿಗೆ ನಿಮಗಾಗಿ ಕಾತುರ ಹಾಗು ಕೂತೂಹಲದಿಂದ ಕಾದಿರುತ್ತೇನೆ.
ಅದೇ ಸಮಯದಲ್ಲಿ ನನ್ನ ಚೊಚ್ಚಲ ಕವನ ಸಂಕಲನ “ಮುಸ್ಸಂಜೆಯ ಮುಖಾಮುಖಿ” ಯನ್ನು
ಖ್ಯಾತ ಸಾಹಿತಿ ಹಾಗು ನಾಟಕಕಾರರಾದ ಡಾ.ಎಚ್. ಎಸ್.ವೆಂಕಟೇಶಮೂರ್ತಿಯವರು
ಬಿಡುಗಡೆ ಮಾಡಲಿದ್ದಾರೆ
ಹಾಗು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರೊ.ಬರಗೂರು ರಾಮಚಂದ್ರಪ್ಪ, ಖ್ಯಾತ ಚಿಂತಕರು ಹಾಗು ಚಲನಚಿತ್ರ
ನಿರ್ದೇಶಕರು, ವಿಶೇಷ ಅತಿಥಿಗಳಾಗಿ ಡಾ.ನಟರಾಜ್ ಹುಳಿಯಾರ್, ಹೆಸರಾಂತ ವಿಮರ್ಶಕರು ಹಾಗು ಲೇಖಕರು ಬರಲಿದ್ದಾರೆ.
ಅಧ್ಯಕ್ಷತೆಯನ್ನು ಡಾ.ನಲ್ಲೂರು ಪ್ರಸಾದ್, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಅವರು ವಹಿಸಿಕೊಳ್ಳಲಿದ್ದಾರೆ.
ಈ ಸಮಯದಲ್ಲಿ ನೀವು ಜೊತೆಯಾದರೆ ನನಗೆ ಬಹಳ ಸಂತೋಷವಾಗುತ್ತದೆ
ನಿಮ್ಮ ಆಗಮನದ ನಿರೀಕ್ಷೆಯಲ್ಲಿ,
ಧನ್ಯವಾದಗಳೊಂದಿಗೆ,
- ಚಂದಿನ
( ಚಂದ್ರಶೇಖರ್, ಈಟೀವಿ ಕನ್ನಡ, ಹೈದರಾಬಾದ್ )
09391041932
email:chandinais@gmail.com

Apr 27, 2009

ಮತ್ತೆ ಬರುವನು ಚಂದಿರ - 21

ಹೆಣ್ಣು, ಹೊನ್ನು, ಮಣ್ಣು ಮಿಥ್ಯೆ
ಮಾಯಾಜಾಲದ ಮರ್ಮವಿದು
ನಿಯಂತ್ರಣ ತೊರೆದ ಕ್ಷಣವೆ
ಲೀನವಾಗಿಬಿಡುವೆ ಚಂದಿರ

ಇತಿಮಿತಿಗಳ ಹಿಡಿತದೊಳಗೆ
ಪಕ್ವವಾಗಿ ನೀನು ಮಾಗಬೇಕು
ಅನುಭವಿಸಿದ ಅದೃಷ್ಟ ಸಾಕು
ಹೊರಗೆ ಬಾರೊ ಚಂದಿರ

ಧರ್ಮ, ಅರ್ಥ, ಕಾಮ, ಮೋಕ್ಷ
ಇವು ಯಾವ ಪರಿಯ ಪುರುಷಾರ್ಥ
ನಿಯಂತ್ರಣವೆ ಮೂಲ ಮಂತ್ರ
ಬದುಕು ಬೆಳಕಿನತ್ತ ಚಂದಿರ

ಪ್ರಕೃತಿಯ ಆರಾಧಕನಾಗು
ನಿತ್ಯ ಸಂತಸ ಸವಿಸಿ ಸವಿಯುತ
ಆಧ್ಯಾತ್ಮಿಕ ಮಾರ್ಗದಿಂದ
ಧರೆಯೆ ಸ್ವರ್ಗ ಚಂದಿರ

ಮನದಲಿ ಮನೆಮಾಡಿ ಕಾಡುವ
ದ್ವಂದ್ವ ದುಂಬಿಗಳ ಹೊರಗಟ್ಟು
ಕರ್ಮ ಧರ್ಮ ಇದುವೆ ಮರ್ಮ
ಸವಿಜೇನಿನಂತೆ ಚಂದಿರ

ನವರಸಗಳ ಮಿತ ಬಳಕೆಯಿಂದ
ಸಿಗುವ ಸುಖ, ಶಾಂತಿ ಸುಂದರ
ಸರಳ ಹಾದಿ ಸಂಕೀರ್ಣವಾಗಿದೆ
ಸುರುಳಿಗಳ ಕಡಿದು ಬಾರೊ ಚಂದಿರ

ಸಮಾನಾಂತರ ರೇಖೆಗಳ ಪಯಣ
ಎಂದಾದರು ಒಂದಾಗಲು ಸಾಧ್ಯವೆ
ಸಮತೋಲನದಿಂದ ಸರಿದೂಗುವ
ಸೂಕ್ಷ್ಮತೆಯ ಅಗತ್ಯವಿದೆ ಚಂದಿರ

ಲೋಲುಪತೆಯ ನಡುವೆ ಸಾಕ್ಷಿಪ್ರಜ್ಞೆ
ಉನ್ಮಾದ, ಉದ್ವೇಗವರಿವ ಸೂಕ್ಷಜ್ಞತೆ
ಸದಾ ಎಚ್ಚರದ ಮನೋಭಾವವಿರಲು
ಸನ್ನಿವೇಶ ಸರಳವಾಗ ಚಂದಿರ

ಆಳದ ತಳಪಾಯದಿಂದ
ರೀತಿ, ನೀತಿ, ತತ್ವ, ತರ್ಕ
ವಿಸ್ತಾರವಾಗಿರಲು ನೋಟ
ನಿಲುವು ಸ್ಪಷ್ಟವಾಗ ಚಂದಿರ

ಸತ್ವವಿರದ ನಿತ್ಯ ಕಲಹಕೆ
ಬಲಿಯಾಗಬೇಡ ಗೆಳೆಯನೆ
ಸುಂದರವೊ ಜಗದ ಹರವು
ಒಮ್ಮೆ ಇಣುಕಿ ನೋಡು ಚಂದಿರ

ಮುಸ್ಸಂಜೆಯ ಮುಖಾಮುಖಿ - ನನ್ನ ಮೊದಲ ಕವನ ಸಂಕಲನ ಶೀಘ್ರದಲ್ಲಿ...


Apr 21, 2009

ಮತ್ತೆ ಬರುವನು ಚಂದಿರ - 20

ಮನವ ಕಾಡುವ ಕೆಣಕುವ ಸಂಗತಿಗಳೆ
ಕರುಣೆಯಿರಲಿ ಕಾಲ ಕಲುಷಿತಗೊಂಡಿದೆ
ಮನೆಯೊಡಯನಿಗೇ ಮತಿಗೆಟ್ಟಿರಲು
ಮತ ನೀಡುವುದು ಯಾರಿಗೊ ಚಂದಿರ

ಪರಧಿಯಾಚೆಗೂ ಹರಹು ಚಾಚಿದೆ
ಯಾರ ಪಾತ್ರವೂ ಪೂರ್ಣವಾಗದೆ
ಸುಳಿವು ಸರಳವಾಗಿ ದೊರೆಯದಾಗ
ಸರಿಪಡಿಸುವುದೇಗೆ ಹೋಳೊ ಚಂದಿರ

ಗೋಜಲುಗಳನು ಗುಡಿಸಬೇಕೆ
ನೋವುಗಳನು ಮರೆಯಬೇಕೆ
ಸುತ್ತಿರುವ ಸುರಳಿ ಬಿಡಿಸಬೇಕೆ
ಜೊತೆಗಿರುವನು ಚಂದಿರ

ಬಿಸಿಲುಗುದುರೆ ಏರಿ ಬಂದೆ
ಬತ್ತಲಾರದ ಬಯಕೆಯಿಂದ
ಭಾರವಾಗಿವೆ ಭಾವನೆಗಳು
ಭರಿಸಲಾರೆನೊ ಚಂದಿರ

ಭಾವ ಸ್ತರದ ಮೂಲ ಸೆಳೆವಿದು
ಆಪ್ತವಾಗಿದೆ ಸುಪ್ತ ಆಕರ್ಷಣೆ
ಸವಿಯುವಷ್ಟು ಸಿಹಿಯನಿತ್ತು
ಸುಖವ ನೀಡಿತೊ ಚಂದಿರ

ಭವಬಂಧನದಲಿ ಸಿಲುಕಿತಾನು
ಭಾವಲೋಕದಿ ತಡಕುತಿರುವೆ
ಬಿಡಿಸಲಾಗದ ಒಗಟು ಗೆಳೆಯ
ಹುಸಿನಗುವ ಬೀರುವ ಚಂದಿರ

ಯಾಂತ್ರಿಕ ಬದುಕಿಗೆ ಬಡವನಾಗದೆ
ಪ್ರಕೃತಿ ಮಡಿಲಿಗೆ ಮರಳಿ ಬಾರೊ
ಗುಡುಗು ಮಿಂಚು ಸಿಡಿಲ ಸಾಲು
ಕೂಗಿ ಕರೆಯುತಿದೆ ಚಂದಿರ

ಸಂದಿಗ್ಧ ಸನ್ನಿವೇಶ ಎಚ್ಚರವಿರಲಿ
ಸಂಯಮವಿರಲು ಗೆಲುವು ಖಚಿತ
ಸಮಯಪ್ರಜ್ಞೆ ಸೂಕ್ತ ಮದ್ದು
ಎಂದು ಸಳಹೆ ಕೊಟ್ಟು ಚಂದಿರ

ಅತಿಯಾಸೆಗೆ ಬಲಿಯಾಗ ಬೇಡ
ಸರಳವಿಹುದು ಬದುಕು ಬಹಳ
ಎಲ್ಲೆಮೀರದೆ ಪಯಣ ಸಾಗಲಿ
ಸುಖವ ನೀಡುವ ಚಂದಿರ

ನಾಟಕೀಯ ವರ್ತನೆ ಅತಿರೇಕವಾಗಿದೆ
ಆತ್ಮವಂಚನೆ ದಿನವು ಸಾಮಾನ್ಯವಾಗಿದೆ
ಸಿಡಿಲು ಬಡಿಯುವ ಮುನ್ನ ಎಚ್ಚೆತ್ತುಕೊ
ಸಹಾಯ ಮಾಡುವ ಚಂದಿರ

Apr 20, 2009

ಪ್ರೀತಿ ಅಥವಾ ಕಾಮ

ಬರಗಾಲ ದಾಹವನ್ನು ಕೊಲ್ಲುತ್ತದೆ
ಫಸಲು ಸಿಗುವುದು ಬಹಳ ವಿರಳ
ಒಣಗಾಳಿಯು ನರ್ತಿಸುತ್ತಿದೆ ಮೈಸುಡುವ ಬಿಸಿಲಿನಲ್ಲಿ
ಎಳೆಗಳೆಲ್ಲಾ ಮರಗಳನ್ನು ತೊರೆಯುತ್ತಿವೆ
ಭೂಮಿ ಬಿರುಕು ಬಿಟ್ಟಿದೆ
ನಾನು ವಿಷಾದಿಂದ ನಡೆಯುತ್ತಿದ್ದೇನೆ
ಮುಳ್ಳು ಕಾಲನ್ನೇರಿದಾಗ
ಅಂಗಾಂಗಗಳು ನಡುಗುತ್ತವೆ ಬತ್ತಿಹೋಗಿ
ನನ್ನ ಹೃದಯ ಬಡಿತ ಡಂಗುರ ಬಾರಿಸಿದಂತಿದೆ
ಮಸುಕಾದ ಆಗಸದಡಿಯಲ್ಲೆಲ್ಲೋ ಮೃದುವಾಗಿ
ತೆಳುವಸ್ತ್ರವನ್ನಿಡಿದು ಮಹಿಳೆಯೋರ್ವಳು ನನ್ನತ್ತ ಬೀಸುತ್ತಿದ್ದಾಳೆ
ಅವಳ ಪಕ್ಷಕ್ಕೆ ಸೇರಿಸಿ ಕೊಳ್ಳುವುದಕ್ಕಾಗಿ
ಗುಣಿ ಅಗೆದು, ಮುಚ್ಚುತ್ತಿದ್ದಾರೆ
ಒಂದು ಭಯಾನಕ ಆಟದಂತೆ
ಸಾಕಷ್ಟು ಅಭದ್ರತೆ
ಆತಂಕ ಸೃಷ್ಟಿಸುವ ಅಪ್ರಬುದ್ಧತೆ
ನೀವು ಪರಿಶೀಲಿಸಿದಾಗ
ಗುಲಾಬಿ ಇನ್ನೂ ಉಸಿರಾಡುತ್ತಿತ್ತು
ಆದರೆ ನೀವು ಅವುಗಳ ಬೆಳೆಸಬೇಕಾದರೆ
ಆ ರುದ್ರಭೂಮಿಯಲ್ಲಿ
ಎಲ್ಲಿ ಪ್ರೀತಿ ಮತ್ತು ಕಾಮ
ಕದನಕ್ಕಿಳಿದಿರುವ ಸಂದರ್ಭದಲ್ಲಿ.

ಮೂಲ ಕವಿ : ಸುಲೈಮಾನ್ ಮೊಹಮ್ಮದ್ ಯುಸೋಫ್
ಕನ್ನಡಕ್ಕೆ : ಚಂದಿನ

ಪವಿತ್ರ ಕೋಣೆ

ಆ ಕೋಣೆಯು ಸಂಪೂರ್ಣವಾಗಿ ಅತೀವ
ಬೇಸರ, ನಿರಾಸೆ, ನೀರಸ, ಜಿಗುಪ್ಸೆಗಳಿಂದ ತುಂಬಿ ಹೋಗಿದೆ
ಮುಂದೆ ಏನೇನೂ ತೋಚದಂತಾಗಿದೆ
ಆ ನಾಲ್ಕೂ ಗೋಡೆಗಳು ಸಾಕ್ಷಿಯಾಗಿ ನಿಂತಿವೆ
ವೀರ್ಯ, ರಕ್ತ, ಬೆವರು ಮತ್ತು ಸುರಿಸಿದ ಕಣ್ಣೀರಿಗೆ
ನಡುವೆ ಉಸಿರುಗಟ್ಟಿಸುವ ಹೀನಸ್ಥಿತಿ
ಹಾಸಿಗೆ ಕಲೆಗಳಿಂದ ಕುಲಗೆಟ್ಟು ಸತ್ತೇ ಹೋಗಿದೆ
ಬಿರುಸು ನುಡಿ, ಪಿಸುನುಡಿಗಳೆಲ್ಲವೂ
ಭೂತಕಾಲದ ಐಶಾರಾಮಿ ವಸ್ತುಗಳಾಗಿವೆ
ಹೊರಗೆ ಹೋಗುವ ಬಾಗಿಲು ಇತಿಹಾಸವಾಗಿದೆ
ನಮ್ಮ ಸ್ಮಶಾನದೆಡೆಗೆ ಕರೆದೊಯ್ಯುತ್ತಿದೆ

ಬಂಧನದಿಂದ ಮುಕ್ತಿ ಪಡೆಯಲು
ಸ್ವಚ್ಛಂದವಾಗಿ ಹಾರುವ ಮೊದಲು
ಒಂದೇ ಒಂದು ಪದ ಸಾಕು
ಆ ಕೋಣೆಯನ್ನು
ಬುಡ ಸಮೇತ ಕಿತ್ತೆಸೆಯಲು
ಅದುವೇ ಭೂಕಂಪ

ಮೂಲ ಕವಿ : ಸುಲೈಮಾನ್ ಮೊಹಮ್ಮದ್ ಯುಸೋಫ್
ಕನ್ನಡಕ್ಕೆ : ಚಂದಿನ