Apr 27, 2009

ಮತ್ತೆ ಬರುವನು ಚಂದಿರ - 21

ಹೆಣ್ಣು, ಹೊನ್ನು, ಮಣ್ಣು ಮಿಥ್ಯೆ
ಮಾಯಾಜಾಲದ ಮರ್ಮವಿದು
ನಿಯಂತ್ರಣ ತೊರೆದ ಕ್ಷಣವೆ
ಲೀನವಾಗಿಬಿಡುವೆ ಚಂದಿರ

ಇತಿಮಿತಿಗಳ ಹಿಡಿತದೊಳಗೆ
ಪಕ್ವವಾಗಿ ನೀನು ಮಾಗಬೇಕು
ಅನುಭವಿಸಿದ ಅದೃಷ್ಟ ಸಾಕು
ಹೊರಗೆ ಬಾರೊ ಚಂದಿರ

ಧರ್ಮ, ಅರ್ಥ, ಕಾಮ, ಮೋಕ್ಷ
ಇವು ಯಾವ ಪರಿಯ ಪುರುಷಾರ್ಥ
ನಿಯಂತ್ರಣವೆ ಮೂಲ ಮಂತ್ರ
ಬದುಕು ಬೆಳಕಿನತ್ತ ಚಂದಿರ

ಪ್ರಕೃತಿಯ ಆರಾಧಕನಾಗು
ನಿತ್ಯ ಸಂತಸ ಸವಿಸಿ ಸವಿಯುತ
ಆಧ್ಯಾತ್ಮಿಕ ಮಾರ್ಗದಿಂದ
ಧರೆಯೆ ಸ್ವರ್ಗ ಚಂದಿರ

ಮನದಲಿ ಮನೆಮಾಡಿ ಕಾಡುವ
ದ್ವಂದ್ವ ದುಂಬಿಗಳ ಹೊರಗಟ್ಟು
ಕರ್ಮ ಧರ್ಮ ಇದುವೆ ಮರ್ಮ
ಸವಿಜೇನಿನಂತೆ ಚಂದಿರ

ನವರಸಗಳ ಮಿತ ಬಳಕೆಯಿಂದ
ಸಿಗುವ ಸುಖ, ಶಾಂತಿ ಸುಂದರ
ಸರಳ ಹಾದಿ ಸಂಕೀರ್ಣವಾಗಿದೆ
ಸುರುಳಿಗಳ ಕಡಿದು ಬಾರೊ ಚಂದಿರ

ಸಮಾನಾಂತರ ರೇಖೆಗಳ ಪಯಣ
ಎಂದಾದರು ಒಂದಾಗಲು ಸಾಧ್ಯವೆ
ಸಮತೋಲನದಿಂದ ಸರಿದೂಗುವ
ಸೂಕ್ಷ್ಮತೆಯ ಅಗತ್ಯವಿದೆ ಚಂದಿರ

ಲೋಲುಪತೆಯ ನಡುವೆ ಸಾಕ್ಷಿಪ್ರಜ್ಞೆ
ಉನ್ಮಾದ, ಉದ್ವೇಗವರಿವ ಸೂಕ್ಷಜ್ಞತೆ
ಸದಾ ಎಚ್ಚರದ ಮನೋಭಾವವಿರಲು
ಸನ್ನಿವೇಶ ಸರಳವಾಗ ಚಂದಿರ

ಆಳದ ತಳಪಾಯದಿಂದ
ರೀತಿ, ನೀತಿ, ತತ್ವ, ತರ್ಕ
ವಿಸ್ತಾರವಾಗಿರಲು ನೋಟ
ನಿಲುವು ಸ್ಪಷ್ಟವಾಗ ಚಂದಿರ

ಸತ್ವವಿರದ ನಿತ್ಯ ಕಲಹಕೆ
ಬಲಿಯಾಗಬೇಡ ಗೆಳೆಯನೆ
ಸುಂದರವೊ ಜಗದ ಹರವು
ಒಮ್ಮೆ ಇಣುಕಿ ನೋಡು ಚಂದಿರ

2 comments:

ಬಿಸಿಲ ಹನಿ said...

Quite interesting with all its music and rhythm!

chandina said...

thanks uday!!!!!!!