Apr 15, 2009

ಮೌನ ಗೀತೆ

ಮೆಲ್ಲನೆ ಮುಂಜಾವು ಕಣ್ತೆರೆದಿದೆ,
ಪಾರದರ್ಶಕ ತಿಳಿಗೆಂಪು ಗುಲಾಬಿ ಮೊಗ್ಗುಗಳಲಿ,
ತಂಗಾಳಿ ತನ್ನ ಮೃದು ಸ್ಪರ್ಶದಿಂದ ಹಕ್ಕಿ, ದುಂಬಿಗಳನ್ನೆಚ್ಚರಿಸುತ್ತದೆ.
ಹಾಗೇ ಮದ್ಯಾಹ್ನದ ಆಗಮನವಾಗುತ್ತದೆ,
ತನ್ನ ಲೆಕ್ಕವಿಲ್ಲದ ಚಿನ್ನದ ಮಿಂಚುಗಳ ಹೊಮ್ಮಿಸಿ ಹಸಿರೆಳೆಗಳಲ್ಲಿ,
ಮಲಗಿದ್ದ ನನ್ನ ಮುದ್ದಿನ ಮೊಗ್ಗುಗಳೆಲ್ಲಾ ಆಗ ಸಂಪೂರ್ಣ ತೆರೆದು ಕಂಗೊಳಿಸುತ್ತವೆ.

ಕಲ್ಪನಾ ಲಹರಿ ಮಂಕಾಗುವಂತೆ ತೋರುತ್ತಿದೆ,
ಪ್ರಕಾಶಮಾನ ರವಿ ಮಂದಗತಿಯಲ್ಲಿ ಜಾರುತ್ತಿದ್ದಾನೆ
ಅದನ್ನು ಕಂಡ ಚೋರ ಚಂದಿರ ಎಚ್ಚರಗೊಂಡು
ಮೆಲ್ಲಗೆ ಇಣಕಿ ನೋಡುತ್ತಿದ್ದಾನೆ,
ಹಾಗೇ ಹೊಳೆವ ತಾರೆಗಳು ಸಾಲುಗಟ್ಟಿ ಹೊರಹೊಮ್ಮುತ್ತಿವೆ.

ಆಲಿಸಿಕೊ,
ಹಕ್ಕಿಗಳು ಪಿಸುಗುಡುತ್ತಾ, ಹಾಡುತ್ತಾ ಕಲರವ ಮೂಡಿಸಿ
ತಮ್ಮ ಗೂಡುಗಳೆಡೆಗೆ ಮರಳುವುದನ್ನು,
ಕೇಳಿಸಿಕೊ,
ತದೇಕಚಿತ್ತದಿಂದ ಸಣ್ಣಗೆ ಇಳಿಜಾರಿನಲಿ ಹರಿಯುತ್ತಿರುವ
ನೀರು ತಿರುತಿರುಗಿ ತಿರುತಿರುಗಿ ನರ್ತಿಸುತ್ತಿರುವುದನ್ನು.

ನಂತರ,
ಕ್ರಮೇಣ ಕರಗುತ್ತಿರುವ ಬೆಳಕು
ತನ್ನ ಅದ್ಭುತ ಚಿತ್ರಕಲೆಗೆ ಹಾಗೇ ತೆರೆಯೆಳೆಯುತ್ತದೆ,
ತನ್ನ ನಿಶ್ಚಲ, ಪ್ರಶಾಂತ ಮೌನ ಗೀತೆಯೊಂದಿಗೆ.

ಮೂಲ : ಅಂಜಲಿ ಸಿನ್ಹಾ
ಕನ್ನಡಕ್ಕೆ : ಚಂದಿನ

No comments: