Jun 28, 2009

ಮತ್ತೆ ಬರುವನು ಚಂದಿರ - 28

ಒಂಟಿ ಬದುಕಿನ ನಿರಂತರ ಓಟ
ಸಂಜೆಗಣ್ಣಿನ ಅಸ್ಪಷ್ಟ ನೋಟಕೆ
ಸ್ಥಾಯೀಭಾವದ ಸ್ಥಿರ ಹಿನ್ನಲೆಗೆ
ಹಿಮ್ಮೇಳ ನುಡಿಸುವನೊ ಚಂದಿರ

ನಡೆದ ಹಾದಿಯ ಪರಮಾವಧಿ
ಪಾಪ, ಪುಣ್ಯದ ಪರಮಾರ್ಥಕ
ಸಂಸರ್ಗ, ಸಂಸಾರ, ಸಂಸೃತಿ
ಸಂಸ್ಕರಿಸುವವನೆ ಚಂದಿರ

ಸಹನೆಯಿಂದೋಡಿಸುತ್ತಾ ಬೇಸರ
ಕ್ಷಮೆಯಿಂದ ನಿಯಂತ್ರಿಸು ಕೋಪ
ಬಲಹೀನತೆ ಜಯಿಸು ಪ್ರೇಮದಿಂದ
ತಪ್ಪನ್ನು ನಗುವಿಂದ ಉತ್ತರಿಸೊ ಚಂದಿರ

ಮುತ್ತಿರುವ ಪರದೆಗಳನ್ನು ಕಿತ್ತೆಸೆದು
ಅಡಗಿದ್ದ ವಿಕೃತಿ ಅನಾವರಣಗೊಳಿಸಿ
ಮುಕ್ತಿಮಾರ್ಗದಲಿ ನಡೆಯಲಿಚ್ಛಿಸಿದರೆ
ಆರ್ದ ಸಂತೃಪ್ತಿ ಸಿದ್ಧಿಸುವುದು ಚಂದಿರ

ಅವತರಿಪ ವಿಶಿಷ್ಟ ತುಮುಳಗಳಿಗೆ
ಕದಡದಿರಲಿ ಸ್ಥಿರಚಿತ್ತ, ಸಂಯಮ
ಕಾಲಾತೀತದಲ್ಲಿ ಲೀನವಾಗುವುದು
ಮತ್ತೆ ಮರುಕಳಿಸದಂತೆ ಚಂದಿರ

ನೆನಪುಗಳ ಹೊಳೆಯಲ್ಲಿ ಮಿಂದು
ಆಶಯಗಳಿಗೆ ವಾಸ್ತವದ ನೋಟ
ಪರಿಚಯಿಸುವ ಸ್ಥೈರ್ಯವಿರದಿದ್ದರೆ
ಗಾಳಿಗೋಪುರ ಖಚಿತ ಚಂದಿರ

ಭೂತ, ವರ್ತಮಾನದ ಬಿಡಿಚಿತ್ರಗಳು
ಅಗಾಧವಾಗಿ ಕಲಕುತಿವೆ ಮನವನ್ನು
ಏಕಾಗ್ರತೆಯ ಸಾಧಿಸುವ ಹಾದಿಯಲಿ
ಮತ್ತೆ ಸೋತಿರುವೆನೊ ಚಂದಿರ

ಬದುಕು ಕಾಣಿಸಿದ ಚಿತ್ರಗಳೆಲ್ಲವು
ಸ್ಥಾನಪಲ್ಲಟಗೊಂಡಿವೆ ಬಲುಬೇಗ
ಅದರ ವೇಗ, ಅವೇಗದ ಬಿರುಸಿಗೆ
ಬಲಿಪಶುವಾಗಿರುವೆನೊ ಚಂದಿರ

ಪ್ರತಿರೂಪಗಳ ಗುರುತಿಸಲಾಗದೆ
ಪರಿಕಲ್ಪನೆಗಳಿಗೆ ರೆಕ್ಕೆಗಳನ್ನಿಡದೆ
ಕಾರ್ಯಪ್ರವೃತ್ತಿಗೆ ಸಜ್ಜುಗೊಳ್ಳದೆ
ನುಚ್ಚುನೂರಾಗಿರುವೆನೊ ಚಂದಿರ

ಚಿಂತನೆಗಳಿಗೆ ಚಾಲನೆ ನೀಡದೆ
ಮಂಥನಗಳಿಗೂ ಮನಗೊಡದೆ
ಅಂತರಾತ್ಮವನೆಂದೂ ಪ್ರಶ್ನಿಸದೆ
ಅಸ್ಪಷ್ಟಗಳಿಗೆ ಬಲಿಯಾದೆ ಚಂದಿರ

Jun 27, 2009

ಅಡಗಿದ್ದ ಶಿಷ್ಟ ಕರೆಗಳು

ಅಂತಃರಂಗದೊಳಗಿನ ಪುಟ್ಟ ದನಿ
ನನ್ನ ಕರೆದು ಹೇಳುತ್ತಿದೆ---
“ಸತ್ಯವೆಂಬ ಉಡುಗೊರೆ ಹಂಚು,
ಅದವರ ನೋವು ನಿವಾರಣೆಗೆ ನೆರವಾಗುತ್ತದೆ.” ಎಂದು.
ಅಂತಃಸತ್ವದಿಂದ ಚೈತನ್ಯ ಹೊಮ್ಮುತ್ತಿದೆ,
ಅದರ ದೃಢವಾದ ಪಿಸುಮಾತುಗಳಿಂದ.
ನನ್ನನ್ನು ಒತ್ತಾಯಿಸುತ್ತದೆ, ಒಳಗಿನ ಬೆಳಕನ್ನು ಹರಡಿ,
ಅಂಧಕಾರದಲ್ಲಿರುವವರ ಬದುಕನ್ನು ಬೆಳಗಲು.
ಆತ್ಮಸಾಕ್ಷಿ ಮೌನ ಮುರಿದು,
ನನ್ನಾತ್ಮವನ್ನು ಎಚ್ಚರಿಸುತ್ತದೆ, ಸುಖನಿದ್ರೆಯಿಂದ.
ದೊಂಬಿಡುತ್ತದೆ, ಪ್ರಶಾಂತ ಸಂತಸವನ್ನು ಪಸರಿಸಲು,
ಏಕೆಂದರೆ, ಉಳಿದವರನ್ನು ಅದು ತೊಂದರೆಗಳಿಂದ ಸಂರಕ್ಷಿಸುತ್ತದೆ.
ದಿವ್ಯ ನ್ಯಾಯಾಲಯದಲ್ಲಿ, ಅಂತರಾಳವೆಂಬ ನ್ಯಾಯಾಧೀಶರು
ಸೂಚಿಸುತ್ತಾರೆ, ನ್ಯಾಯವೆಂಬ ಸುವರ್ಣ ನಿಯಮವನ್ನು ಪಾಲಿಸಲು.
ಮೂಲ ನಂಬಿಕೆಗಳನ್ನು ಆಚರಿಸುತ್ತಾ ಸಮಾಜಕ್ಕೆ ಮಾದರಿಯಗಲು,
ಅದು ಅನ್ಯರ ಸಕಲ ಕಷ್ಟ ನಿವಾರಣೆಗೆ ಬಹಳ ಉಪಯೋಗವಾಗುತ್ತದೆ.
ಪ್ರಜ್ವಲ ಆಧ್ಯಾತ್ಮದ ಕರೆ
ಮತ್ತೆ ಚಿಗುರೊಡೆಯುತ್ತದೆ
ಈ ಸಲ ನನ್ನನ್ನು ವಿಶಾಲ ದೂರದೃಷ್ಟಿಯನ್ನು ಹಂಚಿಕೊಳ್ಳಲು ತಿಳಿಸುತ್ತದೆ,
ಎಲ್ಲರೂ ಸರ್ವ ಋತುಗಳಲ್ಲಿ, ಸನ್ಮಾರ್ಗದಲ್ಲಿ ನಡೆಯಲು ಸಹಾಯವಾಗಲೆಂದು.
ಅಂತಃರಂಗದ ಅರ್ಚಕ ಹೇಳುತ್ತಾನೆ,
ನೋವು ನಿವಾರಕ ಶಕ್ತಿಯನ್ನು ಅನುಗ್ರಹಿಸಲು,
ಮತ್ತೆ ಆಜ್ಞಾಪಿಸುತ್ತಾನೆ, ಅದರ ಸದುಪಯೋಗವನ್ನು ಎಲ್ಲೆಡೆ ಹರಡಲು,
ಎಲ್ಲರೂ ತಮ್ಮ ಸುಂಗಧ ಪರಿಮಳವನ್ನು ಮತ್ತೆ ಹಿಂಪಡೆಯಲು.
ನನ್ನ ಏಕಾಂತತೆಯ ಗೂಡಿಂದ,
ನನಗೆ ಜ್ಞಾನ ಸಿದ್ಧಿಸುತ್ತದೆ, ದಿವ್ಯಸ್ಪೂರ್ತಿಯ ದೇವಕನ್ಯೆಯರಿಂದ,
ನಂತರ ಅದು ಎಲ್ಲಡೆಗೆ ಹಬ್ಬುತ್ತದೆ,
ಯಾರೊಬ್ಬರನ್ನೂ ಬಿಡದ ಹಾಗೆ, ಅವರ ದುಃಖಗಳನ್ನು ಸರ್ವನಾಶಮಾಡಲು.
ಅಡಗಿದ್ದ ಶಿಷ್ಟ ಕರೆಗಳ ಈ ಜ್ಯೋತಿ
ಜೀವಂತವಾಗಿ ಹೀಗೇ ಬೆಳಗುತ್ತಿರಲು,
ನಾನು ಮುಂದುವರೆಸುತ್ತೇನೆ, ಶಿಷ್ಟ ಸಲಹೆಗಳ ಸ್ವೀಕರಿಸುವುದನ್ನು,
ನಾನು ಹೀಗೆ ಹಂಚಿಕೊಳ್ಳುವುದನ್ನೂ ಸಹ ಮುಂದುವರೆಸುತ್ತೇನೆ,
ಸರ್ವ ಶ್ರೇಷ್ಠ ಜಗತ್ ಸತ್ಯಗಳ ಹರಡುವುದನ್ನು.

ಮೂಲ ಕವಿಯತ್ರಿ : ಚಿತ್ರ .ಜಿ. ಲೇಲೆ
ಕನ್ನಡಕ್ಕೆ : ಚಂದಿನ

Jun 26, 2009

ಪ್ರಸಕ್ತ ಚಿತ್ರಣಕ್ಕೊಂದು ಕನ್ನಡಿ

ಎಷ್ಟೋ ಕೊರತೆಗಳಿರುವುದು ಕಂಡಿದ್ದೇನೆ
ಅವನ್ನು ಪಡೆಯಲಿಕ್ಕೆ, ದುಬಾರಿ ಬೆಲೆ.
ಜನಸಾಮಾನ್ಯರು ಅತ್ತಿತ್ತ ಪರದಾಡುತ್ತಾರೆ
ಊಟ, ನೀರು ಮತ್ತೆ ನೆಲೆಗಾಗಿ.

ಪ್ರಾಮಾಣಿಕರಿಗೆ ಉಸಿರುಗಟ್ಟುವ ಸನ್ನಿವೇಶ
ನರಿಗಳಂಥವರು ತಮ್ಮ ತಿಜೋರಿ ತುಂಬಿಸುತ್ತಾರೆ
ಸುಳ್ಳು ಪ್ರಮಾಣ ಪತ್ರ ನೀಡಿ ಪ್ರಭಾವಿಗಳಾಗುತ್ತಾರೆ
ಮಧ್ಯರಾತ್ರಿ ನಿದ್ದೆಗೆಟ್ಟು ಓದುವವರಿಗೆ ಕೇವಲ ವಯಸ್ಸಾಗುತ್ತದೆ.

ಕುತಂತ್ರಿಗಳು ಪರರ ಪರಿಶ್ರಮವನ್ನು ದೋಚುತ್ತಾರೆ
ಅಳಿದುಳಿದದ್ದು ಮಾತ್ರ ಪ್ರತಿಭಾನ್ವಿತರಿಗೆ ನೀಡುತ್ತಾರೆ
ಪರಿಣಾಮಕಾರಿ ಕೆಲಸಗಾರರನ್ನು ಹೊರಹಾಕುತ್ತಾರೆ
ಸೋಮಾರಿಗಳನ್ನು ಶ್ರೇಷ್ಟರೆಂದು ಬಿಂಬಿಸುತ್ತಾರೆ.

ಭ್ರಷ್ಟಾಚಾರ, ಕುತಂತ್ರಗಳಿಂದು ಸಹಜ ಸ್ವಾಭಾವಿಕವಾಗಿವೆ
ಅವರಿಗೆ ತಿರುಗಿ ಬಿದ್ದವರನ್ನು ನಿರ್ಣಾಮ ಮಾಡುತ್ತಾರೆ
ಉದ್ಯೊಗವಕಾಶಗಳು ತಮ್ಮ ಹೊಗಳು ಭಟ್ಟರಿಗೆ ಮೀಸಲು
ಸಾಮರ್ಥ್ಯ ಹೊಂದಿರುವವರನ್ನು ಕಡೆಗೆಣಿಸುತ್ತಾರೆ.

ಪ್ರಶಸ್ತಿಗಳೇನಿದ್ದರೂ ತಮ್ಮ ಅನುಯಾಹಿಗಳಿಗೆ ಮಾತ್ರ
ಉಳಿದವರಿಗೆ ಶಿಸ್ತುಕ್ರಮ ಕೂಡಲೇ ಜಾರಿಗೊಳಿಸುತ್ತಾರೆ
ಉಳ್ಳವರು ಮಾತ್ರ ಮತ್ತೂ ಶ್ರೀಮಂತರಾಗುತ್ತಾರೆ
ನಿಸ್ವಾರ್ಥ ಶ್ರಮಿಕರು ಮತ್ತೂ ಬಡವರಾಗುತ್ತಾರೆ.

ಹೆಗ್ಗಣಗಳಂಥಹ ಲಂಚಕೋರರಿಗೆ ಉತ್ತಮ ಅವಕಾಶ ಲಭ್ಯ
ಪ್ರಾಮಾಣಿಕರತ್ತ ಒಮ್ಮೆ ತಿರುಗಿ ನೋಡಲೂ ಸಹ ಹೇಸುತ್ತಾರೆ
ಬಡ್ತಿಯೆಂಬುದು ಕೆಲವರ ಪಿತ್ರಾರ್ಜಿತ ಆಸ್ತಿಯಂತೆ ಅನುಭವಿಸುತ್ತಾರೆ
ನೀತಿವಂತರಿಗೆ ಮಾತ್ರ ಹಿಂಬಡ್ತಿಯ ಕೊಡುಗೆ ನೀಡುತ್ತಾರೆ.

ಮೌಲ್ಯ, ನೈತಿಕತೆ ಎಂಬುದೆಂದೋ ಕಳೆದು ಹೋಗಿವೆ
ಅವನೀತಿವಂತರನ್ನೇ ಅತ್ಯುತ್ತಮರೆಂದು ಕೊಂಡಾಡುತ್ತಾರೆ
ಆದರೂ, ಅಲ್ಲಲ್ಲಿ ಸತ್ಯದ ಹಣತೆಗಳು ಇನ್ನೂ ಕಂಡುಬರುತ್ತವೆ
ಅವುಗಳನ್ನು ಉಳಿಸಿಕೊಳ್ಳದಿದ್ದರೆ, ಕೊಳೆಯುವುದಂತೂ ನಿಶ್ಚಿತ.

ಮೂಲ ಕವಿಯತ್ರಿ : ಚಿತ್ರ .ಜಿ. ಲೇಲೆ
ಕನ್ನಡಕ್ಕೆ : ಚಂದಿನ

Jun 22, 2009

ಮತ್ತೆ ಬರುವನು ಚಂದಿರ - 27

ಗೆಳೆಯರ ಜೊತೆ ದೊಡ್ಡಕೆರೆಯಲಿ ಮಿಂದು
ಕಾದ ಮರಳ ದಂಡೆಯಲಿ ಅಂಗಾತ ಮಲಗಿ
ಹೊಂಗೆ ಮರದಡಿಯಲಿ ಸುಖನಿದ್ರೆ ಮುಗಿಸಿ
ಹಸಿವಾದಾಗ ಮನೆಗೆ ಮರಳಿದ ಚಂದಿರ

ರಂಗಮಂಟಪದಲ್ಲಿ ಜೋರು ಪ್ರದರ್ಶನ
ಊರೈಕಳ ಜೊತೆಗೆ ನೋಡವ ಸಿರಿತನ
ಮಸಾಲೆ ಉರಿಗಾಳು ಪುರಿ ಮೆಲ್ಲುವುದು
ಸ್ವರ್ಗ ಸಿದ್ಧಿಸಿದ ಸಂತಸ ಚಂದಿರ

ಊರ ಗುಡ್ಡಗಳಲ್ಲಿ ಓತಿಕ್ಯಾತವನ್ನಟ್ಟಿ
ಮುಳ್ಳು ಕಲ್ಲುಗಳ ತುಳಿದು ಹಿಮ್ಮೆಟ್ಟಿ
ತರಚಿ-ಪರಚಿದರು ಕಲ್ಲು ಬೀಸಿದಾಗ
ಏನೋ ಸಾಧಿಸಿದ ತೃಪ್ತಿ ಚಂದಿರ

ಘಮ ಘಮ ಮಲ್ಲಿಗೆ ಮುಂಜಾನೆ ಎದ್ದು
ಅಕ್ಕನಿಗೆ ಕೊಟ್ಟಾಗ ಸಿಕ್ಕ ಆಪ್ತ ಮುತ್ತು
ಕದ್ದ ಮಾವಿನ ಕಾಯಿಗಚ್ಚಿ ಉಪ್ಪುಖಾರ
ಮಂಡಕ್ಕಿ ಮುಕ್ಕಿದ್ದೇನು ಮಜ ಚಂದಿರ

ಮಳೆಗಾಲ ಬಂದಾಗ ಹಸಿರಾದ ಒಡಲು
ಬಣ್ಣಬಣ್ಣದ ಚಿಗುರು ಬಗೆಬಗೆಯ ನವಿರು
ಸಿರಿಕಾಣೊ ಕೆರೆಯಲ್ಲಿ ಕಿರಣಗಳ ತೇರು
ಹಕ್ಕಿಗಳ ಕಲರವಕೆ ಮನಸೋತ ಚಂದಿರ

ನೇರಳೆಕಾಯಿಗಳು ಕಡುನೀಲಿಯಾದಂತೆ
ಇತ್ತಲ ಪೇರಳೆಕಾಯಿ ದುಂಡಗೆ ಮೈದುಂಬಿ
ದೂರದ ನೆಲ್ಲೀಕಾಯಿ ನಳನಳಿಸಿ ಕರೆಯಲು
ಹಲಸಿನ ಹಣ್ಣಿನ ಘಮ ಸೆಳೆದು ಚಂದಿರ

ಊರ ಜಾತ್ರೆಗೆ ಹೊರಡುವ ಉಮ್ಮಸ್ಸು
ಕೂಡಿಟ್ಟ ದುಡ್ಡೆಲ್ಲ ಕಿಸೆಗಿಳಿಸಿದ ಪೋರರು
ನಲಿದಾಡಿ ಬಯಲಲ್ಲಿ ರಿಂಗಣಿಸಿ ಕುಣಿದು
ರಂಗಿನ ತರುಣಿಯರ ತೇರು ಚಂದಿರ

ಪಂಚಭೂತಗಳಲ್ಲಿ ಲೀನವಾದ ನಂತರ
ಮರುಜನ್ಮದ ಪರಿಕಲ್ಪನೆ ಅತಿಮಾನಸ
ಪ್ರಕೃತಿಯಿಂದ, ಪ್ರಕೃತಿಯೆಡೆಗೆ ಪಯಣ
ಈ ನಿಗೂಢ ಪ್ರಕ್ರಯೆ ವಿಸ್ಮಯ ಚಂದಿರ

ರಣರಣ ಬಿಸಿಲಿಗೆ ಮೈ ಸುಡುತ್ತಿರಲು
ಕಣ್ಣುಗಳು ಕಡುಗೆಂಪಾಗಿ ಉರಿದುರಿದು
ಕಾಣದಾಗಿದೆ ಸುತ್ತಮುತ್ತ ಮರದ ನೆರಳು
ಆಯಾಸಕೆ ತಳಮಳಿಸಿದೆ ಜೀವ ಚಂದಿರ

ಮೌನದೊಂದಿಗೆ ಸಂಯೋಜಿತ ಸಂಗೀತ
ಲಹರಿಗಳು ಹೊರಡಿಸುವ ನಾದ ಅದ್ಭುತ
ಹಗುರಾದ ಮೈಮನಗಳಿಗೆ ಚೈತನ್ಯದಿಂದ
ಹಾರುವ ಹಕ್ಕಿಯ ಹಾಗೆ ಚಂದಿರ

Jun 20, 2009

ನಿನ್ನ ಆಯ್ಕೆಗಳು

ನಿನಗಿರುವುದು
ಕೇವಲ ಎರಡೇ ಎರಡು
ಆಯ್ಕೆಗಳು:
ಬೇರುಗಳು,
ಇಲ್ಲಾ ರೆಕ್ಕೆಗಳು
ಇವೆರಡರಲ್ಲಿ
ಯಾವುದಾದರೂ ಒಂದನ್ನು
ಆರಿಸಿಕೊ.

ನೀನೇನಾದರೂ
ಬೇರುಗಳುನ್ನು
ಆರಿಸಿಕೊಂಡರೆ---
ಕೂಡಲೇ ಖಚಿತ ಪಡಿಸಿಕೊ
ಅವುಗಳು
ಉದ್ದವಾಗಿ, ಆಳವಾಗಿ ಬೆಳೆದು,
ಗಟ್ಟಿಯಾದ ತಳಪಾಯದೊಂದಿಗೆ
ನೆಲೆಯೂರಿವೆ ಎಂದು.
ನಂತರ ನೀನು ಅತ್ಯಗತ್ಯವಾಗಿ
ಸುಂದರ ಎಲೆಗಳಿಂದ ಸಜ್ಜಾಗಿ,
ಪರಿಮಳ ಭರಿತ ಹೂವುಗಳೊಂದಿಗೆ,
ರಸ ಭರಿತ ಹಣ್ಣುಗಳನ್ನು
ನೀಡಿದಾಗಲೇ
ಜಗವು ನಿನ್ನಲ್ಲಿಗೆ ಬರಲು
ಹಾತೊರೆಯುತ್ತದೆ.

ಇಲ್ಲವಾದರೆ ನೀನು
ರೆಕ್ಕೆಗಳನ್ನು
ಆರಿಸಿಕೊ---
ಸ್ವಚ್ಛಂದವಾಗಿ
ಹಾರುತ್ತಾ...
ಜಗದ ಬೆನ್ನಟ್ಟಲು.

Jun 18, 2009

ಹನಿಗಳು – 5

- 1 -

ಹೆಂಡ
ಮತ್ತು ಹೆಂಡತಿ
ಇವರಿಬ್ಬರೂ
ಭಾರೀ ಪ್ರಚಂಡರು.
ಯಾವಾಗಲೂ ನನ್ನ
ವಾಲಿಬಾಲಿನಂತೆ
ಆಡಿಕೊಳ್ಳುತ್ತಾರೆ.

- 2 -

ನಾನು
ತಣ್ಣಗೆ, ತೆಪ್ಪಗೆ
ಇದ್ದಿಲಿನಂತೆ ತೂಕಡಿಸುವಾಗ.
ಸುಲಭವಾಗಿ ಕಿಚ್ಚಿನ ಕೆಂಡ ಹಚ್ಚಿದ
ಪ್ರಚಂಡರು
ಮಹಿಳೆ ಮತ್ತು ಮದ್ಯ.

- 3 -

ಗೆಳತಿ
ನೀನೀಗ
ಯಾರನ್ನಾದರೂ
ಪ್ರೀತಿಸು ಅಡ್ಡಿಯಿಲ್ಲ.
ಏಕೆಂದರೆ,
ನಾನಲ್ಲ ಈಗ
ನಿನ್ನ ನಲ್ಲ.

- 4 -

ನಾನೂ
ಸಹ ಸಭ್ಯ.
ಮದ್ಯ ಮತ್ತು ಮಹಿಳೆ
ಕಣ್ಣಿಗೆ ಬೀಳದಿರುವ
ಕ್ಷಣದವರೆಗೆ.

- 5 -

ಕೆಲವರು
ಶೇರುಪೇಟೆ,ಚರ
ಮತ್ತು ಸ್ಥಿರಾಸ್ತಿಗಳಲ್ಲಿ,
ಹಣ ತೊಡಗಿಸಿ
ಸಂತೃಪ್ತಿ
ಹೊಂದುತ್ತಾರೆ.
ನಾನೂ ಸಂತೃಪ್ತ
ಮದ್ಯಪಾನದಿಂದ.

- 6 -

ಬದುಕಲ್ಲಿ
ಏಳು-ಬೀಳು
ಸಹಜವೆಂದು
ಒಪ್ಪಿಕೊಳ್ಳುವೆ.
ಆದರೆ,
ನಾನು ಕುಡಿದು
ಎದ್ದು-ಬಿದ್ದರೆ
ದಡ್ಡಳಂತೇಕೆ
ಅಳುವೆ.

- 7 -

ಕುಡಿತದಿಂದ
ಸಿದ್ಧಿಸುವ ಸುಖ
ಕುಡಿಯದೇ ಬೊಗಳುವ
ದಡ್ಡ ಶಿಖಾಮಣಿಗಳಿಗೆ
ಹೇಗೆ ವರ್ಣಿಸಲಿ
ಪ್ರಭುವೆ.

- 8 -

ಎಷ್ಟೇ
ಕುಡಿದಿದ್ದರೂ
ಕರೆಕ್ಟಾಗಿ ಬಿಲ್ಲು ಕೊಟ್ಟು,
ತಡವಾಗಿಯಾದರೂ ನನ್ನ ಮನೆಗೇ
ತಲುಪುವ ಸಜ್ಜನಿಕೆಯನ್ನು
ಕೇವಲವಾಗಿ
ಕಾಣದಿರಿ
ಆಪ್ತರೆ.

- 9 -

ಕುಡಿತ ಬಹಳ
ಅನಾರೋಗ್ಯಕರ ,
ದುರಭ್ಯಾಸ ಎಂದು
ಪದೇ ಪದೇ ಒತ್ತಿ ಹೇಳುವ
ಶಿಷ್ಟರಿಗೊಂದು ಪುಟ್ಟ ಸಲಹೆ
ವ್ಯರ್ಥವಾಗುವ ಮುನ್ನ
ಒಮ್ಮೆಯಾದರೂ ಕುಡಿದು
ಬದುಕು ಪಾವನವಾಗಿಸಿ.

- 10 -

ದಾರಿ
ತಪ್ಪುವುದಕ್ಕೆ
ನೂರಾರು ಮಾರ್ಗ.
ಮದ್ಯಪಾನವನ್ನೇ
ಎತ್ತಿ ತೋರುವ
ಸಜ್ಜನರ ಹುನ್ನಾರಕ್ಕೆ
ನನ್ನ ತೀವ್ರ ವಿರೋಧ.

ಬಿಂಬ – 40

ಸುಂದರಿಯೊಬ್ಬಳ
ಸೌಂದರ್ಯ ಸವಿಯುವುದು
ಮಾನವ ಸಹಜವಾದರೂ,
ಅಸಹಜ ರೀತಿಯಲ್ಲಿ
ಆಸ್ವಾಧಿಸುವುದು
ಅಪರಾಧ
ಅಲ್ಲವೆ?

ಬಿಂಬ – 39

ನಾನು ಸಹಜವಾಗಿ
ಸಭ್ಯನಾಗಿರುವುದು
ನಿಮ್ಮ ಪ್ರಾಮಾಣಿಕ
ಹೆಬ್ಬಯಕೆ, ಒತ್ತಾಸೆ
ಎಂಬುದು ನಿಜವಾಗಿದ್ದಲ್ಲಿ
ದಯವಿಟ್ಟು ಕುಡಿತವನ್ನೊಂದು
ಬಲಹೀನತೆಯೆಂಬುದಾಗಿ
ಬಿಂಬಿಸುವುದು ನೀವು
ಕೂಡಲೇ ನಿಲ್ಲಿಸಿ.

ಬಿಂಬ – 38

ನನ್ನನ್ನು
ನಿರ್ಲಿಪ್ತವಾಗಿ,
ಪ್ರಾಮಾಣಿಕವಾಗಿ,
ನಿಸ್ವಾರ್ಥದಿಂದ, ತೀವ್ರವಾಗಿ
ಬಯಸುವ, ಪ್ರೀತಿಸುವ, ಅಪ್ಪಿಕೊಳ್ಳುವ,
ಮುತ್ತಿಟ್ಟು ಮತ್ತೇರಿಸುವ
ಏಕೈಕ ಆಪ್ತ ಸಾಧನ
ಮದ್ಯಪಾನ.

ಬಿಂಬ – 37

ನಮ್ಮ
ಸಮಾಜದಲ್ಲಿ
ಕೆಟ್ಟವರ ಪ್ರಮಾಣ
ಹೆಚ್ಚಾಗಿರುವುದರಿಂದಲೇ
ಸಜ್ಜನರಿಗೆ ಸೂಕ್ತ
ಪ್ರಾಶಸ್ತ್ಯ.

ಬಿಂಬ – 36

ನಮ್ಮ
ಸ್ವತಂತ್ರವನ್ನು
ಸರಿಯಾದ ರೀತಿಯಲ್ಲಿ
ನಿಭಾಯಿಸುವುದೂ
ಸಹ ಅತಿದೊಡ್ಡ
ಜವಾಬ್ದಾರಿ
ಅಲ್ಲವೆ?

ಬಿಂಬ – 35

ಸಹಿಸಿಕೊಳ್ಳುವ
ಸದ್ಗುಣ ಯಥೇಚ್ಛವಾಗಿ
ನಮ್ಮಲ್ಲಿ ಅಡಗಿರುವುದು.
ಕೇಡು, ಕಿರುಕುಳ,
ಮತ್ತು ಶೋಷಣೆ
ನಿರಂತರವಾಗಿ,
ಹಾಗು ನಿರ್ಭೀತಿಯಿಂದ
ಮುಂದುವರೆಯಲು
ಪರೋಕ್ಷ ಪ್ರೇರಣೆ ನೀಡಲು
ಸಹಕಾರಿಯಾಗಿದೆ
ಅಲ್ಲವೆ?

ಬಿಂಬ – 34

ಭ್ರಷ್ಟಾಚಾರ
ಸಹಿಸಿಕೊಳ್ಳುವ
ಸಹನೆ, ಸಂಯಮಗಳು
ನಮ್ಮಲ್ಲಿ ನೆಲೆಯೂರಿರುವುದರಿಂದ,
ನಾವೂ ಸಹ ಭ್ರಷ್ಟಚಾರದ
ಪರೋಕ್ಷ ಬೆಳವಣಿಗೆಗೆ
ಕಾರಣರಾಗಿದ್ದೇವೆ, ಹಾಗಾಗಿ
ಭ್ರಷ್ಟರಾಗಿದ್ದೇವೆ.

ಬಿಂಬ – 33

ಬಹುತೇಕ
ಎಲ್ಲರೂ
ಪ್ರಮಾಣಿಕರೇ
ಅಪ್ರಮಾಣಿಕರಾಗುವ
ಸೂಕ್ತ ಅವಕಾಶಗಳು
ಸಿಗುವವರೆಗೆ.

ಬಿಂಬ – 32

ಪ್ರಮಾಣಿಕತೆ,
ಸತ್ಯ, ನಿಷ್ಠೆ,
ನಂಬಿಕೆ
ನೈತಿಕತೆ
ಮೌಲ್ಯಗಳು
ಕೇಳುವುದಕ್ಕೆ
ಮತ್ತು ಹೇಳುವುದಕ್ಕೆ
ತುಂಬಾ ಸೊಗಸಾಗಿರುತ್ತವೆ.

ಬಿಂಬ – 31

ನಾನೂ ಸಹ ಬಹಳ
ಅದೃಷ್ಟವಂತನೆಂದು
ಭಾವಿಸುತ್ತೇನೆ.
ಆತ್ಮಸಾಕ್ಷಿಯನ್ನು
ಕೊಂದ ಮೇಲೂ
ಸಿಕ್ಕಿಹಾಕಿಕೊಳ್ಳದೆ
ನಿರಪರಾಧಿಯಾಗಿ,
ಸ್ವಚ್ಛಂದವಾಗಿ,
ಬದುಕುವ ಸಾಮರ್ಥ್ಯ
ಸಿದ್ಧಿಸಿಕೊಂಡಿದ್ದೇನೆ.

Jun 16, 2009

ಮತ್ತೆ ಬರುವನು ಚಂದಿರ - 26

ನೆಟ್ಟ ನೋಟದಿಂದ ಕಾಣುವ ಕಾತುರ
ಸಿದ್ಧಿಸಿದ ಚಿತ್ರ ದಿಟ್ಟಿಸುವ ಕುತೂಹಲ
ಗೆರೆಗಳಾಚೀಚೆಗೆ ಇಣುಕುವ ಹಂಬಲ
ತಳಮಳದ ಹುಚ್ಚು ಮನವೊ ಚಂದಿರ

ಚಿತ್ತ ಭಿತ್ತಿಯ ಭ್ರೋಣ ಟಿಸಿಲೊಡೆದು
ನವಿರಾಗಿ ಚಿಗಿರೊಡೆದು ತೂಗಾಡುತ
ಉಲ್ಲಾಸ, ಉತ್ಸಾಹ ಉಮ್ಮಳಿಸುವ
ಪ್ರಕ್ರಿಯೆ ನಿಗೂಢ ವಿಸ್ಮಯ ಚಂದಿರ

ತವಕ ತಲ್ಲಣಗಳ ನಿಯಂತ್ರಿವ ಜಾಣತನ
ಸ್ಥಿರ ಮನಸ್ಥಿತಿ, ನಿರ್ಲಿಪ್ತ ಭಾವಸ್ತರದಿಂದ
ನಿಲುವು, ನಿರ್ಧಾರ ಮಂಡಿಸುವ ಸ್ಥೈರ್ಯ
ಸಾಪೇಕ್ಷ ಸಾಧನೆ ಅಗತ್ಯವೊ ಚಂದಿರ

ಊರುಕೇರಿಗಳ ಅಲೆಯುತ್ತ ಮುತ್ತ
ಸಂದ ತುತ್ತನ್ನು ಸವಿಯುತ್ತ ಮುಕ್ತ
ಲೋಕದರ್ಶನದಿಂದ ವೈರಾಗ್ಯ ಚಿತ್ತ
ಇವ ಅತ್ಯೋತ್ತಮನಲ್ಲವೆ ಚಂದಿರ

ಬೆಟ್ಟ ಗುಡ್ಡಗಳತ್ತಿ ಕಡಿದ ಕಟ್ಟಿಗೆ ಸುತ್ತಿ
ಹೊತ್ತು ಮಾರಿದಾಗಲೆ ದಿನದ ತುತ್ತು
ದಶಕಗಳ ದಾಟಿದ ದಣಿದ ದಾರ್ಶನಿಕ
ಯೋಗ್ಯನಲ್ಲವೆ ನಮಗೆ ಚಂದಿರ

ಮುಗ್ಧತೆಯ ಮೆಟ್ಟಿಲನು ಸತತ ಹತ್ತುತ್ತಾ
ಬಣ್ಣ ಬಣ್ಣಗಳ ಕಡೆಗೆಣಿಸುತ ಕದಡದಂತೆ
ಸರಳತೆಯ ಸನ್ಮಾರ್ಗದಲಿ ಸ್ವರ್ಗ ಕಂಡು
ಐಕ್ಯನಾದವನು ಶರಣನಲ್ಲವೆ ಚಂದಿರ

ಬೆಳ್ಳಿ, ಬಂಗಾರ, ನಗನಾಣ್ಯ, ಮಣ್ಣ,
ಮುಷ್ಟಾನ್ನ, ಮಧುಪಾನ ಸಿರಿಹೊತ್ತು
ಹೂತು ಹೋದ ಕೊನೆಗೆ ಕಡುಬಿಕ್ಷುಕನ
ಹಾಗೆ, ಸಾಧಿಸಿದ್ದೇನೊ ಚಂದಿರ

ಅತ್ತಿತ್ತ ನೋಡದೆ, ಹಿಂತಿರುಗಿ ಕಾಣದೆ
ಮತಿಗೆಟ್ಟು ಮುನ್ನುಗ್ಗಿ ಆಪ್ತರ ತೊರೆದು
ಮುಗ್ಗರಿಸಿ ಬಿದ್ದಾಗ ಎಬ್ಬಿಸುವವರಿಲ್ಲದೆ
ತತ್ತರಿಸಿ ಹೋದನೊ ಇವ ಚಂದಿರ

ಝಣ ಝಣ ಕಾಂಚಾಣ ಮೋಹವಿರಲಿ
ವ್ಯಾಮೋಹವಿರದಂತೆ ಎಚ್ಚರಿಕೆಯಿಂದ
ಸೂಕ್ಷ್ಮಗೆರೆಯನ್ನು ಎಳೆದಾಗಲೇ ಗೆಳೆಯ
ಸಂತೃಪ್ತಿ ಪ್ರಾಪ್ತಿ ಖಚಿತ ಚಂದಿರ

ಸಿಡುಕಿನ ಸಿಂಗಾರಿ ಸಿರಿ ಅವಳ ಕಾಣೊ
ತಿರುಗುತಿದೆ ಬುಗುರಿ ಬಿಂಕ ತೊರೆದು
ನಾಜೂಕು ನಡೆ-ನುಡಿಯಿಂದ ಸೆಳೆದು
ಮುಗ್ಧ ನಗು ಚೆಲ್ಲಿ ಮನ-ಮನೆಗೆ ಚಂದಿರ

Jun 13, 2009

ನಾನು ಬೆಳೆದು ದೊಡ್ಡವನಾದಂತೆ

ಅದು ಬಹಳ ದಿನಗಳ ಹಿಂದೆ.
ನಾನೀಗ ಬಹುತೇಕ ನನ್ನ ಕನಸ್ಸನ್ನು ಮರೆತಿದ್ದೇನೆ.
ಆದರೆ ಅದು ಆ ಸಮಯದಲ್ಲಿತ್ತು,
ನನ್ನ ಮುಂದೆ,
ಪ್ರಕಾಶಮಾನ ಸೂರ್ಯನಂತೆ---
ನನ್ನ ಕನಸು.
ನಂತರ ಗೋಡೆ ಬೆಳೆಯತೊಡಗಿತು,
ಮಂದಗತಿಯಲ್ಲಿ,
ನಿಧಾನವಾಗಿ,
ನನ್ನ ಮತ್ತು ನನ್ನ ಕನಸಿನ ನಡುವೆ.
ಅದು ಎಲ್ಲಿಯವರೆಗೂ ಬೆಳೆಯಿತೆಂದರೆ ಆಕಾಶ ಮುಟ್ಟುವವರೆಗೆ---
ಗೋಡೆ.
ನೆರಳು.
ನಾನು ಕಪ್ಪು ಬಣ್ಣದವನು.
ಆ ನೆರಳಲ್ಲಿ ನಾನು ಮಲಗುತ್ತೇನೆ.
ನನ್ನ ಕನಸಿನ ಬೆಳಕೆಂದಿಗೂ ಸುಳಿಯಲಿಲ್ಲ
ನನ್ನ ಮುಂದೆ,
ನನ್ನ ಮೇಲೆ.
ಕೇವಲ ಬಲಿಷ್ಟ ಗೋಡೆ.
ಕೇವಲ ನೆರಳು.
ನನ್ನ ಕೈಗಳು!
ನನ್ನ ಕಗ್ಗತ್ತಲ ಕೈಗಳು!
ನನ್ನ ಕನಸನ್ನು ಹುಡುಕಿ!
ನನಗೆ ನೆರವಾಗಿ ಈ ಕತ್ತಲನ್ನು ನಿರ್ನಾಮಗೊಳಿಸಲು,
ಈ ರಾತ್ರಿಯನ್ನು ನುಚ್ಚುನೂರಾಗಿಸಲು,
ಈ ನೆರಳನ್ನು ಹರಿದು ಹಾಕಲು
ಸಾವಿರ ದೀಪಗಳ ಸೂರ್ಯನೊಳಗೆ
ಬಿರುಸಾಗಿ ಸುತ್ತುವ ಸೂರ್ಯನ ಸಾವಿರ ಕನಸುಗಳೊಳಗೆ!

ಮೂಲಕವಿ : ಲ್ಯಾಂಗ್ಸ್ಟನ್ ಹ್ಯೂಗ್ಸ್
ಕನ್ನಡಕ್ಕೆ : ಚಂದಿನ

ಮುಂದೂಡಿದ ಕನಸು

ಮೂಂದೂಡಲ್ಪಟ್ಟ ಕನಸಿಗೆ
ಏನಾಗಬಹುದು?
ಅದೇನಾದರೂ ಬತ್ತಿಬಿಡಬಹುದೆ,
ಒಣದ್ರಾಕ್ಷಿಯಂತೆ ಉರಿಬಿಸಿಲಿಗೆ?
ಅಥವಾ ಕೀವು ತುಂಬಿದ ಗಾಯದಂತೆ ನೋವುಕೊಟ್ಟು---
ಮತ್ತೆ ಓಡಿ ಹೋಗಬಹುದೆ?
ಕೊಳೆತ ಮಾಂಸದಂತೆ ದುರ್ವಾಸನೆ ಹೊಮ್ಮಿಸಬಹುದೆ?
ಅಥವಾ ಸಕ್ಕರೆಯಿಂದ ಹೊರ ಮೈ ಗಡುಸಾಗಿರಿವುದೆ --
ರಸಭರಿತ ಸಿಹಿಯಂತೆ?
ಅದು ಭಾರೀ ಲಗ್ಗೇಜೊತ್ತಂತೆ ಬಾಗಿ ಎಳೆದಾಡಲೂ ಬಹುದು.
ಅಥವಾ ಅದೇನಾದರೂ ಒಮ್ಮೆಗೇ ಸಿಡಿಯಬಹುದೆ?

ಮೂಲಕವಿ : ಲ್ಯಾಂಗ್ಸ್ಟನ್ ಹ್ಯೂಗ್ಸ್
ಕನ್ನಡಕ್ಕೆ : ಚಂದಿನ

ಕನಸುಗಳು

ಕನಸುಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಿ
ಏಕೆಂದರೆ, ಕನಸುಗಳೇನಾದರೂ ಸತ್ತರೆ
ಬದುಕು ರೆಕ್ಕೆ ಮುರಿದ ಹಕ್ಕಿಯಂತೆ
ಹಾರಲು ಸಾಧ್ಯವಿಲ್ಲ.
ಕನಸುಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಿ
ಏಕೆಂದರೆ, ಕನಸುಗಳು ಮಾಯವಾದಾಗ
ಬದುಕು ಬಂಜರು ಬಯಲಿನಂತಾಗುತ್ತದೆ
ಮಂಜಿನಿಂದ ಹಿಮಗಟ್ಟಿ.

ಮೂಲಕವಿ : ಲ್ಯಾಂಗ್ಸ್ಟನ್ ಹ್ಯೂಗ್ಸ್

ಕನ್ನಡಕ್ಕೆ : ಚಂದಿನ

ಪ್ರಜಾತಂತ್ರ

ಪ್ರಜಾತಂತ್ರ ಬರಲು ಸಾಧ್ಯವಿಲ್ಲ
ಈ ದಿನ, ಈ ವರ್ಷ
ಅಥವಾ ಎಂದೆಂದಿಗೂ
ಭಯ ಮತ್ತು ಯಾವುದೇ ರಾಜಿಯ ಮೂಲಕ.

ನನಗೆ ಅವರಂತೆ ಸಂಪೂರ್ಣ ಹಕ್ಕಿದೆ
ನಿಂತುಕೊಳ್ಳಲು
ನನ್ನ ಸ್ವಂತ ಕಾಲುಗಳ ಮೇಲೆ
ಮತ್ತೆ ನೆಲ ನನ್ನ ಸ್ವಂತದ್ದಾಗಿಸಿಕೊಳ್ಳಲು.

ನನಗೆ ಜನ ಹೀಗೆ ಹೇಳುವುದು ಕೇಳಿದಾಗ ಬೇಸರವಾಗುತ್ತದೆ,
ಅದರ ಪಾಡಿಗೆ ಆದಾಗ ಆಗಲಿ ಬಿಡಿ ಎಂದು.
ನಾಳೆ ಮತ್ತೊಂದು ದಿನ.
ನನಗೆ ಸ್ವಾತಂತ್ರ್ಯ ಬೇಡ, ನಾನು ಸತ್ತಾಗ.
ನಾಳೆಯ ಊಟದಿಂದ ಇಂದು ಬದುಕಲು ನನಗೆ ಆಗುವುದಿಲ್ಲ.

ಸ್ವಾತಂತ್ರ್ಯ
ದೃಢವಾದ ಬೀಜ
ಭಿತ್ತಿರುವುದು
ಪ್ರಬಲ ಅಗತ್ಯದಿಂದಾಗಿ.

ನಾನೂ ಇಲ್ಲಿ ಬದುಕುತ್ತಿದ್ದೇನೆ.
ನನಗೆ ಸ್ವಾತಂತ್ರ್ಯ ಬೇಕು
ನಿಮ್ಮ ಹಾಗೆ.

ಮೂಲಕವಿ : ಲ್ಯಾಂಗ್ಸ್ಟನ್ ಹ್ಯೂಗ್ಸ್
ಕನ್ನಡಕ್ಕೆ : ಚಂದಿನ

Jun 11, 2009

ಮತ್ತೆ ಬರುವನು ಚಂದಿರ - 25

ಜೀವಸೃಷ್ಟಿಯ ಸಾಧ್ಯತೆ ವಿಸ್ಮಯ
ಬದುಕೆಂಬುದೊಂದು ಅತ್ಯದ್ಭುತ
ಈ ಆವಿಸ್ಮರಣೀಯ ಉಡುಗೊರೆ
ಸವಿಯುವುದೇ ಅದೃಷ್ಟ ಚಂದಿರ

ಬಾಲ್ಯ, ತಾರುಣ್ಯ, ಯೌವನ,
ಪ್ರಬುದ್ಧತೆ,ಬದ್ಧತೆ, ಮುದಿತನ
ಎಲ್ಲ ಘಟ್ಟಗಳನ್ನು ಆಸ್ವಾಧಿಸಿ
ಮುಕ್ತಿ ಪಡೆಯೊ ನೀ ಚಂದಿರ

ಬಚ್ಚಿಟ್ಟುಕೊಳ್ಳಲು ಹಾತೊರೆಯುವೆ
ಕೆಟ್ಟು ಕುಲಗೆಟ್ಟಾಗ ಆತಂಕಪಡುವೆ
ಇಷ್ಟಾನಿಷ್ಟಗಳ ಮಧ್ಯೆ ಗೆರೆ ಎಳೆದು
ಸ್ಪಷ್ಟತೆ ನೆರಳಲ್ಲಿ ಅರಳೊ ಚಂದಿರ

ಜಗದಗಲ ನಿನ್ನ ಆಸೆಗಳ ಚದುರಿವೆ
ನಿತ್ಯ ನರಳುವೆ ನಿರೀಕ್ಷೆ ಉಸಿಯಾದರೆ
ಆಸೆ, ನಿರೀಕ್ಷೆಗಳ ಎಲ್ಲೆ ಮೀರಿದಾಗಲೆ
ನೀನು ಹೂವಂತೆ ಅರಳುವೆ ಚಂದಿರ

ಅನನ್ಯ ಜಗದಲ್ಲಿ ಎದೆಯುಬ್ಬಿ ಉಸಿರಾಡು
ಆಗಾಧ ಆಗಸದೆಡೆಗೆ ಹಣೆಯೊಡ್ಡಿ ಹಾಡು
ಆರ್ದ ಆತ್ಮರತಿ ಅನುಭವಿಸಿ ಕುಣಿದಾಡು
ಅಸೂಯೆ ಪಡುವಂತೆ ಚೋರ ಚಂದಿರ

ನಿಮಿಷಗಳ ಲೆಕ್ಕಿಸದೆ ದಶಕಗಳ ಕಳೆದೆ
ಕೂಡಿ, ಕಳೆವ ಲೆಕ್ಕದ ಆಟದಲಿ ಮುಳುಗಿ
ಅತ್ತಿತ್ತ ನೋಡುವ ಅವಕಾಶಗಳು ಕೈಜಾರಿ
ಆತ್ಮ ಹಾರಿ ಹೋಗುವ ಹಕ್ಕಿ ಚಂದಿರ

ಸುಡು ಸುಡು ಬಿಸಿಲಲ್ಲಿ ಬೆವರು ಬತ್ತಿದೆ
ಬಿರುಕು ಬಿಟ್ಟ ನೆಲ ಬೆಂಕಿ ಉಗುಳುತ್ತಿದೆ
ಹಸಿರಿಗೆ ಉಸಿರಿಲ್ಲ ನಿಷ್ಕರುಣ ಧಾರುಣ
ಅಂಧಕಾರ ಮೊಳಗಿರಲು ಇಲ್ಲಿ ಚಂದಿರ

ಬಾಲ್ಯ ಸ್ಮೃತಿಗಳ ಸವಿನೆನಪಿನಿಂದ
ಕಣ್ಣಾಲಿಗಳು ತಂಬಿ ಹರಿಯುತ್ತಿವೆ
ಕಳಚಿರುವ ಕೊಂಡಿಯನು ಕೂಡಿಸುವ
ಬಯಕೆ ತೀರಿಸುವೆಯಾ ನೀ ಚಂದಿರ

ಹುಳಿ, ಒಗರು, ಸಿಹಿ, ಖಾರ ಬಾಳು
ನಡೆ-ನುಡಿಗಳಿಂದ ಸಿದ್ಧಿಸಿದ ಜ್ಞಾನ
ನಿರ್ಧಾರ, ನಿಯಂತ್ರಣ ನೆಪಮಾತ್ರ
ಆತ್ಮತೃಪ್ತಿಗೆ ಸಾಕು ನಗುವ ಚಂದಿರ

ನೆನಪಿನ ದೋಣಿಯಲಿ ತೇಲುವ ಸುಖ
ವಾಸ್ತವಕ್ಕಿಲಿಯಲು ಹಿಂಜರಿಕೆ, ದುಃಖ
ಕನಸು ಕನ್ನಡಿಯಲ್ಲ ಕದಡುವುದು ಬೇಗ
ನೈಜತೆಗೆ ಜೊತೆಯಾಗೊ ಚಂದಿರ

Jun 10, 2009

ಹೌದು ಹೌದು

ದೇವರು ಪ್ರೀತಿಯನ್ನು ಸೃಷ್ಟಿಸಿದಾಗ, ಅವನು ಎಷ್ಟೋ ಜನಕ್ಕೆ ಉಪಯೋಗವಾಗಲಿಲ್ಲ
ದೇವರು ನಾಯಿಗಳನ್ನು ಸೃಷ್ಟಿಸಿದಾಗ, ಅವನು ನಾಯಿಗಳಿಗೆ ಸಹಾಯ ಮಾಡಲಿಲ್ಲ
ದೇವರು ಸಸಿಗಳನ್ನು ಸೃಷ್ಟಿಸಿದಾಗ, ಅದು ಪರವಾಗಿಲ್ಲ ಎನ್ನಬಹುದು
ದೇವರು ದ್ವೇಷ ಸೃಷ್ಟಿಸಿದಾಗ, ನಮ್ಮೆಲ್ಲರಲ್ಲೂ ಅದು ಸದ್ಬಳಕೆಯಾಯಿತು
ದೇವರು ನನ್ನ ಸೃಷ್ಟಿಸಿದಾಗ, ನನ್ನ ಸೃಷ್ಟಿಸಿದ
ದೇವರು ಕೋತಿ ಸೃಷ್ಟಿಸಿದಾಗ, ಅವನು ಮಲಗಿದ್ದ
ಅವನು ಜಿರಾಫೆ ಸೃಷ್ಟಿಸಿದಾಗ, ಕುಡಿದಿದ್ದ
ಅವನು ಮಾದಕ ವಸ್ತುಗಳನ್ನು ಸೃಷ್ಟಿಸಿದಾಗ ಅಮಲಿನಲ್ಲಿದ್ದ
ಮತ್ತವನು ಆತ್ಮಹತ್ಯೆ ಸೃಷ್ಟಿಸಿದಾಗ ಬಹಳ ಬೇಸರದಲ್ಲಿದ್ದ

ಅವನು ಹಾಸಿಗೆಯಲ್ಲಿ ಮಲಗಿ ನಿನ್ನ ಸೃಷ್ಟಿಸಿದಾಗ
ಅವನಿಗೆ ಗೊತ್ತಿತ್ತು ಅವನೇನು ಮಾಡುತ್ತಿದ್ದಾನೆಂದು
ಅವನು ಕುಡಿದು, ಗಾಢ ಅಮಲಿನಲ್ಲಿದ್ದ
ಮತ್ತೆ ಅವನು ಬೆಟ್ಟ, ಸಾಗರ, ಬೆಂಕಿ ಇವೆಲ್ಲವನ್ನು ಒಂದೇ ಸಮಯದಲ್ಲಿ ಸೃಷ್ಟಿಸಿದ

ಅವನು ಕೆಲವು ತಪ್ಪುಗಳನ್ನು ಮಾಡಿದ
ಆದರೆ ಹಾಸಿಗೆಯಲ್ಲಿ ಮಲಗಿ ನಿನ್ನ ಸೃಷ್ಟಿಸಿದಾಗ
ಅವನು ಮತ್ತೊಮ್ಮೆ ಬಂದು, ಅವನ ವಿಶಾಲ ವಿಶ್ವವನ್ನು ಹರಸಿದ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಹಗ್ಗ ಎಳೆಯಿರಿ, ಬೊಂಬೆ ಆಡುತ್ತದೆ

ಪ್ರತಿಯೊಬ್ಬನೂ ತಿಳಿದುಕೊಳ್ಳಬೇಕು
ಎಲ್ಲವೂ ಮಾಯವಾಗಬಹುದೆಂದೂ
ಅತೀ ಶೀಘ್ರದಲ್ಲೇ:
ಆ ಬೆಕ್ಕು, ಮಹಿಳೆ, ಉದ್ಯೋಗ
ಮುಂದಿನ ಟೈರು,
ಹಾಸಿಗೆ, ಗೋಡೆಗಳು, ಕೋಣೆ;
ಹೀಗೇ ನಮಗೆ ಅಗತ್ಯವಿರುವುದೆಲ್ಲವೂ
ಪ್ರೀತಿಯೂ ಸೇರಿ,
ಮರಳಿನ ತಳಪಾಯದಲ್ಲಿ ವಿಶ್ರಮಿಸಬಹುದು –
ಯಾವುದೇ ಕಾರಣಕ್ಕೆ,
ಎಷ್ಟೇ ಅಪ್ರಸ್ತುತವಾದರೂ ಸರಿ:
ಹಾಂಕಾಂಗ್ ನಲ್ಲಿ ಹುಡುಗನ ಸಾವು
ಅಥವಾ ಹಿಮಗಡ್ಡೆಗಳ ಬಿರಗಾಳಿ ಒಮಹಾದಲ್ಲಿ...
ನೀವೇನನ್ನೂ ಮಾಡದಿರುವುದಕ್ಕೆ ನೆಪವಾಗಬಹುದು.
ನಿಮ್ಮ ಚೈನಾವೇರ್ ಎಲ್ಲವೂ ಅಪ್ಪಳಿಸಬಹುದು
ಅಡಿಗೆ ಮನೆಯಲ್ಲಿ, ನಿಮ್ಮ ಕೆಲಸದವಳು ಬರುತ್ತಾಳೆ
ಮತ್ತೆ ನೀವಲ್ಲಿ ನಿಂತಿದ್ದೀರಿ, ಕುಡಿದು,
ಅದರ ಮಧ್ಯದಲ್ಲಿ, ಅವಳು ಕೇಳುತ್ತಾಳೆ:
ಅಯ್ಯೋ ದೇವರೆ, ನಿಮಗೇನಾಯಿತೆಂದು?
ನೀವು ಹೇಳುತ್ತೀರಿ: ನನಗೇನೂ ಗೊತ್ತಿಲ್ಲ,
ನನಗೇನೂ ಗೊತ್ತಿಲ್ಲ...

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಕಲೆ ತರಗತಿಯಲ್ಲಿ ಹಸುಗಳು

ಸುಂದರ ಹವಾಮಾನ
ಸುಂದರ ಮಹಿಳೆಯಂತೆ---
ಇದು ಯಾವಾಗಲೂ ಉದ್ಭವಿಸುವುದಿಲ್ಲ
ಇದು ಜಾಸ್ತಿ ಹೊತ್ತಿರುವುದೂ ಇಲ್ಲ
ಗಂಡಸರೆ
ಹೆಚ್ಚು ಸ್ಥಿರವಾಗಿರುತ್ತಾರೆ:
ಅವನು ಕೆಟ್ಟವನಾಗಿದ್ದರೆ
ಅವನು ಹಾಗೇ ಮುಂದುವರೆಯುವ
ಸಾಧ್ಯತೆ ಹೆಚ್ಚಾಗಿರುತ್ತದೆ,
ಅವನು ಒಳ್ಳೆಯವನಾಗಿದ್ದರೆ
ಹಾಗೇ ಮುಂದುವರೆಯಬಹುದು
ಅದರೆ, ಹೆಣ್ಣು
ಬದಲಾಗುತ್ತಿರುತ್ತಾಳೆ
ಮಕ್ಕಳಿಂದ,
ವಯಸ್ಸಿಂದ,
ಆಹಾರ ವಿಧಾನದಿಂದ,
ಮಾತುಗಳಿಂದ,
ಸಂಭೋಗದಿಂದ,
ಚಂದ್ರನಿದ್ದಾಗ,
ಅವನಿಲ್ಲದಿದ್ದಾಗ, ಅಥವಾ
ಸೂರ್ಯನಿರುವಾಗ,
ಅಥವಾ ಮಧುರ ಕ್ಷಣಗಳಲ್ಲಿ.
ಹೆಣ್ಣನ್ನು ಚೆನ್ನಾಗಿ ಪೋಷಿಸಬೇಕು
ಜೀವಂತವಾಗಿರಲು
ಪ್ರೀತಿಯಿಂದ.
ಎಲ್ಲಿ ಗಂಡಸು
ಬಲಶಾಲಿಯಾಗಬಹುದೊ
ಅವನನ್ನು
ದ್ವೇಷಿಸುವುದರದಿಂದ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಮಳೆಯಿರಲಿ, ಬಿಸಿಲಿರಲಿ

ದಢೂತಿ ಹಕ್ಕಿಗಳು ಪ್ರಾಣಿ ಸಂಗ್ರಹಾಲಯದಲ್ಲಿ
( ಆ ಮೂರೂ ಹಕ್ಕಿಗಳು )
ಕುಳಿತಿವೆ ಮೌನವಾಗಿ
ಅವುಗಳ ಪಂಜರದ ಮರದಲ್ಲಿ
ಕೆಳಗೆ
ನೆಲದ ಮೇಲೆ
ಕೊಳೆತ ಮಾಂಸದ ತುಂಡುಗಳು
ಹಕ್ಕಿಗಳು ಗಂಟಲವರೆಗೆ ಗಡತ್ತಾಗಿ ಮುಕ್ಕಿವೆ.
ನಮ್ಮ ತೆರಿಗೆಗಳು ಅವುಗಳನ್ನು ಚೆನ್ನಾಗಿ
ಪೋಷಿಸುತ್ತಿವೆ.

ನಾವು ಬಂದಾಗ ಮುಂದಿನ
ಪಂಜರದೆಡೆಗೆ
ಅದರೊಳಗೆ ಒಬ್ಬ ವ್ಯಕ್ತಿಯಿದ್ದ
ನೆಲದಲ್ಲಿ ಕುಳಿತುಕೊಂಡು
ತಿನ್ನುತ್ತಿದ್ದ
ಅವನು ಹಾಕಿದನ್ನೇ.
ನಾನು ಅವನನ್ನು ಗುರುತಿಸಿದೆ
ನಮ್ಮ ಪುರಾತನ ಪೋಸ್ಟ್ಮೆನ್ ಎಂದು.
ಅವನ ನೆಚ್ಚಿನ ಹಾರೈಕೆ
ಮೊದಲಿನಿಂದಲೂ:
“ನಿಮ್ಮ ದಿನ ಶುಭಕರವಾಗಿರಲಿ.”

ಆ ದಿನ ಹಾಗೇ ಇತ್ತು.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಬರವಣಿಗೆ

ಎಷ್ಟೋ ಸಲ ಇದೊಂದೇ
ಒಂದು
ನಿನ್ನ ಹಾಗು ಅಸಾಧ್ಯತೆಯ
ನಡುವೆ ಇರುವುದು.
ಯಾವ ಮದ್ಯ,
ಯಾವ ಮಹಿಳೆಯ ಪ್ರೀತಿ,,
ಯಾವ ಸಂಪತ್ತೂ,
ಇದಕ್ಕೆ ಸರಿಸಮವಲ್ಲ

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ತಪ್ಪೊಪ್ಪಿಗೆ

ಕಾಯುತ್ತಿದ್ದೇನೆ ಸಾವಿಗಾಗಿ
ಆ ಬೆಕ್ಕೆನಂತೆ
ಅದು ಜಿಗಿಯುತ್ತಲ್ಲಾ
ಹಾಸಿಗೆ ಮೇಲೆ

ನಾನು ಬಹಳ ದುಃಖತಪ್ತನಾಗಿದ್ದೇನೆ
ಹೆಂಡತಿಗಾಗಿ

ಅವಳಿದನ್ನು ನೋಡುತ್ತಾಳೆ
ಬಿಗಿಯಾದ
ಬಿಳಿ
ದೇಹ
ಒಮ್ಮೆ ಕದಲಿಸುತ್ತಾಳೆ, ನಂತರ
ಇನ್ನೊಂದು ಸಲ
ಕದಲಿಸಬಹುದು

“ಶೇಖರ್”

ಶೇಖರ್ ಉತ್ತರ
ನೀಡಲಿಲ್ಲ.

ನನ್ನ ಸಾವಿನಿಂದಾಗಿ
ಚಿಂತಿಸುತ್ತಿಲ್ಲ, ನನ್ನ ಹೆಂಡತಿಗಾಗಿ,
ತೊರೆದಿದ್ದಾಳಲ್ಲಾ
ಖಾಲಿಯಿದ್ದ
ಈ ಹೊರೆಯನ್ನು.

ಅವಳಿಗೆ ಗೊತ್ತಾಗಬೇಕೆಂದು
ಬಯಸುವೆ
ಎಲ್ಲಾ ರಾತ್ರಿಗಳಲ್ಲಿ
ಅವಳ ಪಕ್ಕದಲ್ಲೇ
ಮಲಗಿದ್ದರೂ

ಕ್ಷುಲ್ಲಕ
ವಾದ-ವಿವಾದಗಳೂ
ಸಹ ಅಮೋಘವಾದ
ಕ್ಷಣಗಳಾಗಿದ್ದವು

ಆ ಕಠಿಣವಾದ
ಮಾತುಗಳು
ನನಗ್ಯಾವಾಗಲೂ
ಹೇಳಲು
ಭಯವಾಗುತ್ತಿತ್ತಲ್ಲಾ
ಅವುಗಳನ್ನು ಈಗ
ನಿರಾಳವಾಗಿ ಹೇಳಬಹುದು:

ನಾ ನಿನ್ನ ಪ್ರೀತಿಸುವೆ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ನೀಲಿಹಕ್ಕಿ

ನನ್ನ ಹೃದಯದಲ್ಲೊಂದು ನೀಲಿಹಕ್ಕಿಯಿದೆ
ಅದು ಹೊರ ಬಂದು ಸ್ವಚ್ಛಂದ ಹಾರಲು ಬಯಸುತ್ತದೆ
ಆದರೆ ನಾನವನಿಗೆ ಬಹಳ ಕಷ್ಟ ಕೊಡುತ್ತೇನೆ
ಹೇಳುತ್ತನೆ, ನೀನಲ್ಲೇ ಬಿದ್ದಿರು, ನಾನೆಂದಿಗೂ
ನಿನ್ನನ್ನು ಬೇರೆ ಯಾರೂ ನೋಡಲು
ಬಿಡುವುದಿಲ್ಲ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಒಳ್ಳೆಯವರಾಗಿರಿ

ನಮಗ್ಯಾವಾಗಲೂ ಹೇಳುತ್ತಾರೆ
ಬೇರೊಬ್ಬರ ಅಭಿಪ್ರಾಯಗಳನ್ನು
ಅರ್ಥಮಾಡಿ ಕೊಳ್ಳಬೇಕೆಂದು
ಅದು ಎಷ್ಟೇ ಹಳೆಯದಾಗಿ,
ಅಪ್ರಸ್ತುತವಾಗಿ, ತಿಳಿಗೇಡಿತನದ್ದಾಗಿ,
ಅಥವಾ ತೀವ್ರ ವಿರೋಧಿಸುವಂಥದ್ದಾಗಿದ್ದರೂ
ಸರಿಯೆ .

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಕವನಗಳ ಹಾದಿಯಲ್ಲಿ

ಕವನಗಳು ಸಾವಿರಗಳ ಗಡಿ ದಾಟುತ್ತಿರುವಂತೆಯೇ
ನಿಮಗನ್ನಿಸುತ್ತದೆ, ನೀವು ಸೃಷ್ಟಿಸಿದ್ದು
ಅತ್ಯಲ್ಪ ಎಂದು.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

Jun 9, 2009

ಚಂದ್ರ, ತಾರೆಗಳು ಮತ್ತು ಜಗತ್ತು

ದೀರ್ಘವಾಗಿ ನಡೆಯುವುದು ರಾತ್ರಿವೇಳೆಯಲ್ಲಿ---
ಬಹಳ ಒಳ್ಳೆಯದು ಜೀವಕ್ಕೆ:
ಕಿಟಕಿಗಳ ಮೂಲಕ ಅಸ್ಪಷ್ಟವಾಗಿ ಕಾಣುವ
ಆಯಾಸಗೊಂಡ ಗೃಹಿಣಿಯರು
ಜಗಳ ನಿಲ್ಲಿಸುವ ಪ್ರಯತ್ನವನ್ನು
ತಮ್ಮತಮ್ಮ ಪಾನಮತ್ತ ಗಂಡಂದಿರೊಂದಿಗೆ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಎಲ್ಲರೊಂದಿಗೂ ಒಬ್ಬಂಟಿ

ಮಾಂಸಖಂಡಗಳು ಎಲುಬುಗಳನ್ನಾವರಿಸುತ್ತವೆ
ಮೆದುಲನ್ನು
ಅಲ್ಲಿಡುತ್ತಾರೆ ಮತ್ತೆ
ಕೆಲವೊಮ್ಮೆ ಆತ್ಮವನ್ನು,
ಹೆಂಗಸರು
ಗೋಡೆಗಳಿಗೆ ಗಾಜಿನ ಗ್ಲಾಸುಗಳನ್ನೊಡೆಯುತ್ತಾರೆ
ಮತ್ತೆ ಗಂಡಸರು ಕುಡಿಯುತ್ತಾರೆ
ಹೇರಳವಾಗಿ
ಯಾರೂ ಕಾಣುವುದಿಲ್ಲ
ಅವನನ್ನು
ಆದರೂ
ನೋಡಲು ಹಾತೊರೆಯುತ್ತಾರೆ
ಮೇಲೆ, ಆಚೆ, ಅತ್ತಿತ್ತ ಒದ್ದಾಡುತ್ತಾ
ಹಾಸಿಗೆಯಿಂದ.
ಮಾಂಸ ಸುತ್ತುವರೆದಿದೆ
ಎಲುಬುಗಳನ್ನು, ಮಾಂಸವು
ಮಾಂಸಕಿಂತಲೂ ಮಿಗಿಲಾದುದಕ್ಕಾಗಿ
ಹುಡುಕುತ್ತಿರುತ್ತದೆ.

ಅಲ್ಲಿ ಅವಕಾಶವಿಲ್ಲ
ಖಂಡಿತ:
ನಾವೆಲ್ಲರೂ ಸೆರೆಯಾಗಿದ್ದೇವೆ
ಒಂದೇ
ವಿಧಿಯಲ್ಲಿ.

ಯಾರೂ ಎಂದಿಗೂ ಕಾಣಲಾರರು
ಅವನನ್ನು.

ನಗರದ ವ್ಯಸನಗಳು ತುಂಬುತ್ತವೆ
ತ್ಯಾಜ್ಯ ಬಯಲುಗಳು ತುಂಬುತ್ತವೆ
ಹುಚ್ಚಾಸ್ಪತ್ರೆಗಳು ತುಂಬುತ್ತವೆ
ವೈದ್ಯಶಾಲೆಗಳು ತುಂಬುತ್ತವೆ
ಸ್ಮಶಾನಗಳು ತುಂಬುತ್ತವೆ

ಬೇರೆ ಯಾವುದೂ
ತುಂಬುವುದಿಲ್ಲ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಹನಿಗಳು – 4

- 1 -

ದಿನಪೂರ ನಾನಿನ್ನ
ಸರದಾರ,
ಮುಸ್ಸಂಜೆಗೆ ನಲ್ಲೆ
ನಾ ಮದ್ಯದ
ಜೊತೆಗಾರ.

- 2 -

ಕೂರು ಕೂರು ಎಂದು
ಮತ್ತೆ ಒತ್ತಾಯಿಸದಿರು ನೀರೆ
ಬಾರೊ, ಬಾರೊ ಎಂದು
ಕರೆಯುತ್ತಿರುವುದು
ಹತ್ತಿರದ ಬಾರೆ.

- 3 -

ವಯಸ್ಸು 30 ಆಗಲಿ,
60 ಆಗಲಿ ಗೆಳೆಯ,
90 ಹಾಕದಿದ್ದರೆ
ಖಂಡಿತ ಪ್ರಳಯ.

- 4 -

ಗಂಡು, ಹೆಣ್ಣು
ನಿಜವಾಗಿ ಸರಿ-ಸಮಾನ,
ಜೊತೆಯಾಗಿ ಮಾಡಿದಾಗ
ಮದ್ಯಪಾನ.

- 5 -

Drink and Driveಗೆ
ಐನೂರು ದಂಡ,
Auto Driverಗೆ
ತಲೆ ದಂಡ.


- 6 -

ಅವನಿಗೆ
ಮೂರೂ ಬಿಟ್ಟಿರಲು
ಸಾಧ್ಯವಾಗಿದ್ದು
ರಾಜಕಾರಣ,
ಮತ್ತೆ
ಮದ್ಯ ಕಾರಣ.

- 7 -

ಕೋಪ ಬಂದಿದ್ದಕ್ಕೆ
ಕುಡಿದಿದ್ದಲ್ಲ
ಸಾರ್.
ಕುಡಿಯಲು
ಕೋಪಗೊಂಡಂತೆ
ನಟಿಸಿದ್ದು.

- 8 -

ನೀನೇನೇ ಮಾಡು
ಸಹಿಸಿಕೊಳ್ಳುವೆ ಸುಮಿತ್ರ.
ಪ್ರತಿಸಂಜೆ ಕುಡಿಯಲು
ನೂರು ರುಪಾಯಿ
ಕೊಟ್ಟಾಗ ಮಾತ್ರ.

- 9 -

ಕುಡಿದಿರುವಾಗ
ಮಡದಿ, ಮಕ್ಕಳ
ಸೌಕ್ಯ.
ಇಲ್ಲದಿದ್ದಾಗ
ನಾನೂ ಒಬ್ಬ
ಅಯೋಗ್ಯ.

- 10 -

ಹಗಲಿಗೇ
ಸೀಮಿತ ನಮ್ಮ
ಸಮಾಗಮ.
ಇರುಳೇರಿದ ಕ್ಷಣ
ಮದ್ಯಕ್ಕಿಲ್ಲ
ವಿರಾಮ.

Jun 8, 2009

ಸಾಲು – 7

- 1 -
ಜೀವಸೃಷ್ಟಿಯು ಆರೋಗ್ಯಕರವಾಗಿ,
ನಿರಂತರವಾಗಿ ಮುನ್ನಡೆಯಲು ಸಾಧ್ಯವಾಗುವುದು,
ಋತುಮಾನಗಳು ಸಹಜವಾಗಿ, ಸ್ವಾಭಾವಿಕವಾಗಿ
ಸಂಭವಿಸುವಾಗ ಮಾತ್ರ.
ಎಂದು ಹೇಳುತ್ತಿದ್ದ ಅದ್ಯಾಪಕ
ದಿಢೀರನೆ ಭಾವುಕನಾಗಿ, ಮೌನವಾಗಿ ಕುಸಿದಿದ್ದೇಕೆಂದು
ಇದುವರೆಗೂ ತಿಳಿಯಲಿಲ್ಲ.


- 2 -
ಸರ್ವಸ್ವವೂ ನಿನ್ನದೇ ಎಂದು ಆರ್ದವಾಗಿ
ಪದೇ ಪದೇ ಹೇಳುತ್ತಿದ್ದ ಚಂಚಲ ಗೆಳತಿ
ಸರ್ವಸ್ವವನ್ನೂ ದೋಚಿ ಪರಾರಿಯಾದ
ನಂತರವೇ ಅದರ ನಿಗೂಢ ಹಿನ್ನಲೆಯ ಪರಿಚಯ
ನನಗೆ ನಿಧಾನವಾಗಿ ಅರ್ಥವಾಗಲಾರಂಬಿಸಿದ್ದು
ಇನ್ನೂ ಅಚ್ಚರಿಯಾಗೇನೂ ಉಳಿದಿಲ್ಲ.

- 3 -
ಪೆಕರು ಪೇದೆಯೊಬ್ಬ,
ಬಡಪಾಯಿ ತರಕಾರಿ ಗಾಡಿಯವನ ಬಳಿ
ಹತ್ತು ರುಪಾಯಿ ಲಂಚ, ಬಿಟ್ಟಿ ತರಕಾರಿಗಾಗಿ
ಜೋರುಮಾಡುತ್ತಾ, ಪೀಡಿಸುತ್ತಾ, ತಾಜಾ ಬಿಕ್ಷುಕನಂತೆ
ಗೋಗರೆಯುತ್ತಿದ್ದದ್ದು ಅವನ ಅನುಭವದ ಕೊರೆತೆಯಿಂದಲೊ,
ಇಲ್ಲಾ ಯಾರಾದರೂ ನೋಡುತ್ತಾರೆಂಬ ಭಯದಿಂದಲೊ?

ಹಾಗೇ,
ಇನ್ನೊಬ್ಬ ಪುಡಾರಿ ಪೇದೆ ಅದೃಷ್ಟ ಕೆಟ್ಟು
ಸಬಲ ಮಹಿಳೆಯ ಮಾಂಗಲ್ಯ ದೋಚಲೆತ್ನಿಸಿದಾಗ,
ಸಿಕ್ಕಿಹಾಕಿಕೊಂಡು, ಧರ್ಮದೇಟಿನ ಪ್ರಸಾದ ಸವಿದ ನಂತರ
ಅಸಹಾಯಕನಂತೆ ನಾನೊಬ್ಬ ಬಡಪೇದೆಯೆಂದು ಮೂದಲಿಸಿದ್ದು
ಅವನ ದಡ್ಡತನವೊ, ಇಲ್ಲಾ ಭಂಡತನವೊ?

- 4 –
ವಿನಾಃಕಾರಣ ಕೋಪಗೊಂಡು,
ಪದೇ ಪದೇ ಮಾತು ಬಿಡುವ ಗೆಳತಿಯೊಬ್ಬಳು
ಯಾವುದಕ್ಕೂ ಪ್ರತಿಕ್ರಿಯಿಸದೆ ನಿರ್ಭಾವುಕನಾಗಿದ್ದಾಗ,
ಒಮ್ಮೆಗೇ ಮೇಲೆರಗಿ ಎದೆಗೆ ಬಲವಾಗಿ ಮುಷ್ಟಿಯಿಂದಾ ಹೊಡೆದೊಡೆದು,
ಗಟ್ಟಿಯಾಗಿ ಅಪ್ಪಿಕೊಂಡು ಗಳಗಳ ಕಣ್ಣೀರಿಟ್ಟಾಗ,
ನನಗೀಗಾಗಲೇ ಮದುವೆಯಾಗಿದೆ ಎಂದು ಹೇಳಲು
ನನ್ನ ಮನಸೇಕೊ ತಡವರಿಸಿದ್ದು ಸುಳ್ಳಲ್ಲ.

ಬಿಂಬ – 30

ಎಲ್ಲಾ ನಿರ್ಣಯಗಳು
ಕೇವಲ ವೈಜ್ಞಾನಿಕ
ದೃಷ್ಟಿಯಿಂದ ನಿರ್ಧರಿಸಿದಾಗ
ಸಾಧಿಸುವುದೇನೆಂದರೆ
ಕ್ರಮೇಣವಾಗಿ
ಮೌಲ್ಯಗಳು ಕರಗಿ,
ಭಾವ, ಬಂಧಗಳು ಮುರಿದು,
ಕೃತಕ ಜಗತ್ತೊಂದು
ನಿರ್ಮಾಣವಾಗುವ
ಸಾಧ್ಯತೆ.

ಬಿಂಬ – 29

ಅಗಾಧತೆಯ
ಅನುಭಾವದಿಂದ
ಅನನ್ಯ ಅನುಭೂತಿ
ಸಿದ್ಧಿಸುತ್ತದೆ.
ಸೃಷ್ಟಿಸಿದ ಅಮೂರ್ತ
ಸಂಕೋಲೆಗಳ
ಕಡಿದು
ಹೊರನುಗ್ಗಿದಾಗ
ಮಾತ್ರ.

ಬಿಂಬ – 28

ಇಡೀ ಜಗತ್ತೇ
ನಮ್ಮದಾಗುವ
ಸಾಧ್ಯತೆಯಿದ್ದಾಗ
ಪುಟ್ಟ ಮನೆಯಲ್ಲಿ
ಸೆರೆಯಾಗಬೇಕೆಂದು
ಹಾತೊರೆಯುವುದು
ದೊಡ್ಡ ವಿಪರ್ಯಾಸ.

ಬಿಂಬ – 27

ಬದುಕೊಂದು
ನಿರಂತರ
ಜೂಜಾಟ
ಇಲ್ಲಿ ಎಲ್ಲರೂ
ಆಡಲೇ ಬೇಕಾದ
ಅನಿವಾರ್ಯ
ಪರಿಸ್ಥಿತಿ.

ಬಿಂಬ – 26

ಸದಾ ಅಮಲಿನಲ್ಲಿರು
ಕಾವ್ಯ, ಸಂಗೀತ
ಅಥವಾ ಸಕಿಯ
ಸಂಗದಲ್ಲಿ,
ಇದ್ಯಾವುದೂ
ಸಾಧ್ಯವಾಗದಿದ್ದರೆ
ಕನಿಷ್ಟ ಮದ್ಯಪಾನದ
ಸಹಾಯದಿಂದಾದರೂ ಸರಿ.

Jun 7, 2009

ಮತ್ತೆ ಬರುವನು ಚಂದಿರ - 24

ವಿನೀತನಾಗಿ ಬೇಡಿ ಪರಿತಪಿಸುವೆ
ಆರ್ದ್ರನಾಗಿ ನಿನ್ನ ಮುಡಿಗೇರುವೆ
ದಿಗ್ಬಂಧನ ತೊರೆದು ಬಳಿ ಬರುವೆ
ಸಾಕ್ಷಿಗಿರುವನು ನಗುವ ಚಂದಿರ

ಒಣ ಜ್ಞಾನದರ್ಪದ ಠೇಂಕಾರ
ಪಾಂಡಿತ್ಯ ಪ್ರದರ್ಶನ ಇಲ್ಲದೆ
ವಿನಯಶೀಲ ಮುಗ್ಧತೆಯೊಂದಿಗೆ
ಮಾದರಿಯಾಗಿರುವನು ಚಂದಿರ

ಮತ್ತೆ ಮತ್ತೆ ಮರು ಪ್ರವೇಶದಿಂದ
ಸಿಕ್ಕುವ ನೋಟ, ದಕ್ಕಿದ ಭಾವ
ವ್ಯಾಪಕ ಆಳ ಅಗಲದ ವಿಸ್ತಾರ
ಮಹತ್ವ ಮನಸಿಗೆ ಚಂದಿರ

ಪರಿಮಳಭರಿತ ಹೂವುಗಳು
ರಸಭರಿತವಾದ ಸಿಹಿ ಹಣ್ಣುಗಳು
ಮಾಗಿ ಉದುರುವವರೆಗೂ
ಯಾರೂ ಕಾಯವುದಿಲ್ಲ ಚಂದಿರ

ಉಪದೇಶಾತ್ಮಕತೆಯ ತೊರೆದು,
ಮಾಹಿತಿಗಳನ್ನು ಮೀರಿದ ಸತ್ವದಿ
ವಾದ ವಿವಾದ ದಾಟಿ ಸಂವಾದದ
ಕಡೆಗೆ ಚಲಿಸೊ ಚಂದಿರ

ಭಾವ, ವಿಚಾರಗಳ ವಿನ್ಯಾಸದಿಂದ
ಆಲಾಪಗಳ ಹೊಸ ತಿರುವುಗಳಿಂದ
ಒಳತೋಟಿಯೊಡನೆ ನಿತ್ಯ ಸರಸ
ಅದ್ಭುತ ಅನುಭವವೊ ಚಂದಿರ

ಮೀಟಿದಾಗ ವಿಪುಲವಾದ ಪ್ರವಾಹ
ವಿಭಿನ್ನ ಸ್ತರದೆತ್ತರದಿ ರಿಂಗಣಿಸುತ
ಹಾಲುಕ್ಕಿಸಿ, ನೊರೆಯೆಬ್ಬಿಸಿ ನಲಿವ
ವಿಶಿಷ್ಟ ಜಲಪಾತ ಜ್ಞಾನ ಚಂದಿರ

ಕೌಶಲ್ಯಗಳ ಸಾತತ್ಯದಿಂದ ಸತತ
ಜ್ಞಾನದಸಿವನ್ನು ಇಂಗಿಸುವ ಪ್ರಯತ್ನ
ಸಾಪೇಕ್ಷಣೀಯವಾದ ಪ್ರೇರಣೆಗೆ
ಆಶ್ರಯ ನೀಡುತಿರುವ ಚಂದಿರ

ಯಜಮಾನಿಕೆಯ ಗತ್ತು ಗತಕಾಲಕಿರಲಿ
ಬೀಸುತನದ ದರ್ಪ ಇತಿಹಾಸವಾಗಲಿ
ಶಿಸ್ತುಬದ್ಧ ಸರಳ ಬದುಕಿನ ಪರಂಪರೆ
ನಿನ್ನ ಇಂದಿನ ಉಸಿರಾಗಲಿ ಚಂದಿರ

Jun 6, 2009

ಬಿಂಬ – 25


ಜ್ಞಾನವಂತರು
ತಮ್ಮ ಅರಿವನ್ನೂ
ಸಾಮಾನ್ಯರಿಗೆ,
ಸಮುದಾಯಕ್ಕೆ
ತಲುಪಿಸದೇ
ಕೇವಲ
ಸ್ವಾರ್ಥ ಸಾಧನೆಗೆ
ಬಳಸಿಕೊಂಡರೆ
ಅವರು ಸಮಾಜದಲ್ಲಿ
ಶತಃಮೂರ್ಖರಿಗಿಂತ
ಭಿನ್ನರಾಗುವುದಿಲ್ಲ.

ಬಿಂಬ – 24


ಬುದ್ಧಿವಂತಿಕೆ,
ಬಲವಾದ ಭಾಷೆ
ಬಳಸುತ್ತಾ
ಶ್ರೇಷ್ಠತೆಯನ್ನು
ಮೆರೆಯುವವರು.
ಕ್ರಮೇಣ
ಸಮುದಾಯದಿಂದ
ಹೊರಗುಳಿದು
ಏಕಾಂಗಿಯಾಗಿ
ನರಳುತ್ತಾರೆ.

ಬಿಂಬ – 23


ಸ್ವಧರ್ಮವನ್ನು
ಬೀಸು ಹೇಳಿಕೆಗಳಿಂದ
ಸತತವಾಗಿ
ನಿಂಧಿಸುತ್ತಾ
ಅನ್ಯ ಧರ್ಮಗಳ
ಒಲಿತನ್ನು ಮಾತ್ರ
ಹೊಗಳುವವರೂ
ಸಹ ಮನುಕುಲಕ್ಕೆ
ಕಳಂಕವನ್ನುಂಟು
ಮಾಡುವವರೆ.

ಬಿಂಬ – 22


ಅನ್ಯ ಧರ್ಮಗಳ
ನಿಂದಿಸುತ್ತಲೇ
ಸ್ವಧರ್ಮದ
ಲೋಪದೋಷಗಳ
ನಿರ್ಲಿಪ್ತ ಮನಸ್ಥಿತಿಯಿಂದ
ಅವಲೋಕಿಸದೆ
ನಿರ್ಣಯಗಳ
ನೀಡುವವರು
ಮಾನವ ಧರ್ಮದ
ವಿರೋಧಿಗಳು.

ಬಿಂಬ – 21


ಯಾವುದೇ
ನಿಬಂಧನೆ,
ನಿರ್ಬಂಧಗಳು
ಇಲ್ಲದೆಯೆ
ವ್ಯಕ್ತಿಗಳನ್ನು
ಒಪ್ಪಿಕೊಳ್ಳುವುದೇ
ಮುಕ್ತ, ಆಪ್ತ
ಮತ್ತು ನಿಜವಾದ
ಪ್ರೀತಿ.

ಬಿಂಬ – 20


ಆಸೆಗಳಿಗೆ,
ಆಶಯಗಳಿಗೆ
ಪೂರಕವಾಗಿ
ಅರ್ಹತೆ,
ಸಾಮರ್ಥ್ಯ,
ಸಂಯಮ
ಸಿದ್ಧಿಸಿಕೊಂಡರೆ
ಅವಕಾಶಗಳ
ಕೊರತೆ
ತೀವ್ರವಾಗಿ
ಕಾಡುವುದಿಲ್ಲ.

ಬಿಂಬ – 19


ಯಾವುದೇ
ವೃತ್ತಿಯಲ್ಲಿ
ಮೇಲು-ಕೀಳೆಂದು
ಭಾವಿಸುವುದು
ಕೇವಲ ಕೀಳು
ಮನಃಸ್ಥಿತಿಯವರ
ಮತಿಹೀನ,
ವಿಕೃತ
ಗ್ರಹಿಕೆಯಷ್ಟೆ
ಹೊರತು,
ಮಾನದಂಡ
ಅಲ್ಲ.

ಬಿಂಬ – 18

ಮಹತ್ತರ
ಮಹತ್ವಾಕಾಂಕ್ಷೆ
ಪೂರಕ
ಪರಿಶ್ರಮದಿಂದ
ಕಾರ್ಯಪ್ರವೃತ್ತರಾಗಿ,
ಸಿದ್ಧಿಸದಿದ್ದರೂ
ಸಾಧನೆಯ
ಸನಿಹ ಸೇರುವ
ಅವಕಾಶ
ಖಂಡಿತ
ಸಾಧ್ಯ.

ಬಿಂಬ – 17

ನಂಬಿಕೆಯೆಂಬುದು
ಅಸಹಾಯಕರಿಗೆ
ಅಂಧಕಾರದಲ್ಲಿ
ಸಂತೈಸುತ್ತಾ
ಹಣತೆ ಹಿಡಿದು
ಹಾದಿ ತೋರುವ
ಆಪ್ತ ಗೆಳೆಯ.

Jun 4, 2009

ಹನಿಗಳು – 3

- 1 -
ಗುಡುಗು, ಮಿಂಚು,
ಸಿಡಿಲು,
ಗೆಳತಿ
ನಿನ್ನ ಮೊಬೈಲ್
ಬಿಲ್ಲು.

- 2 -
ಸೀರೆಯಲ್ಲಿ
ಸೆರೆಯಾದರೆ
ನೀ ಸಕ್ಕರೆ,
ಸೆರೆಯೇರಿಸಿ
ಬಳಿ ಬಂದರೆ
ನಿನ್ನ ತಕರಾರೆ?

- 3 -
ನೊರೆಯುಕ್ಕಿದ
ತಂಪು ಬಿಯರಿನಂತೆ
ಒಗರು,
ನೀನ್ನುಕ್ಕಿಸುವ ಬೆಚ್ಚಗಿನ
ಬೆವರು.

- 4 -
ಕಾದ ಕಾವಲಿ
ಮೇಲೆ ಬೆಣ್ಣೆಯಷ್ಟೇ
ವೇಗವಾಗಿ,
ನಿನ್ನಲ್ಲಿ ಕರಗಿ ಹೋಯಿತಲ್ಲೇ
ನನ್ನ ಯೌವನ.

- 5 -
ನಶೆ ಏರಿದ ನಂತರ
ನೀ ಕಾಣುವೆ ಸುಂದರ,
ಇಲ್ಲದಿದ್ದರೆ ನಮ್ಮ ನಡುವೆ
ಭಾರಿ ಕಂದರ.

- 6 -
ಕುಡಿಯುವುದು
ಬಿಡಲೇ ಬೇಕೆಂದು
ನೀನು ಹಂಬಲಿಸುವೆ,
ನಿನ್ನ ಬಿಡಲೇ ಬೇಕೆಂದು
ದಿನಾ ಕುಡಿಯುವೆ.

- 7 -
ಮೊದಲ ವಾರದಲ್ಲೇ
ಖಾಲಿ ನಿನ್ನ ಪ್ರೀತಿ,
ಕೊನೆಯ ವಾರದವರೆಗೂ
ನನಗೆ ಭಾರೀ ಭೀತಿ.

- 8 -
ಇಸ್ಪೀಟು ಆಡಿದರೆ
ಸರ್ವನಾಶವೆಂದೇಕೆ
ನೀ ಜರಿಯುವೆ.
ನಿನ್ನ ಮದುವೆಯಾದ
ಕೂಡಲೆ ನಾಶವಾದೆನೆಂದು
ನಾನರಿತಿರುವೆ.

- 9 -
ಮಿಸ್ಡ್ ಕಾಲ್ಸ್ ಕೊಡುವುದು
ನಿನ್ನ ಅಭ್ಯಾಸ,
ಪ್ರತಿ ಕರೆ ನೀಡದಿರುವುದು
ನನ್ನ ದುರಭ್ಯಾಸ.

- 10 -
ಕುಡಿದಾಗ ಮಾತ್ರ
ನವಾಬ,
ಇಲ್ಲವಾದರೆ ನಾನೂ
ಗರೀಬ.

ಬಿಂಬ – 16

“ಶುದ್ಧ ಪ್ರಾಮಾಣಿಕತೆ
ಶುದ್ಧ ಮೂರ್ಖತನ”
ತಪ್ಪಿದ್ದರೆ ಕ್ಷಮಿಸಿ.

ಬಿಂಬ – 15

ಅಮೂರ್ತ ನರಕದ
ಮೂರ್ತ ಪ್ರತಿರೂಪಗಳ
ಕಡೆಗೆಣಿಸುತ್ತಾ ಕೇಡಿನ
ಕಾರ್ಯದಲ್ಲಿ ಮಗ್ನರಾಗಿ
ಮೈಮರೆತ ಸಂದರ್ಭದಲ್ಲಿ
ಪ್ರಕೃತಿಯ ವಿಕೋಪವು
ರುದ್ರ ತಾಂಡವವಾಡತ್ತದೆ.

ಬಿಂಬ – 14

ಸುಭದ್ರ,
ಸುಖಕರ,
ಮತ್ತು ಸಂತಸದ
ಭವಿಷ್ಯಕ್ಕಾಗಿ
ಈ ಸುಂದರ
ವರ್ತಮಾನ
ವ್ಯರ್ಥ
ಮಾಡುವುದು
ಶುದ್ಧ
ಮೂರ್ಖತನ.

ಬಿಂಬ – 13

ಹಣವೆಂಬುದು
ಎಲ್ಲರಿಗೂ ಅತ್ಯಗತ್ಯ
ಆದರೆ, ಎಷ್ಟು ಎಂಬುದರ
ಸ್ಪಷ್ಟ ತಿಳುವಳಿಕೆಯೊಂದಿಗೆ,
ಅದಕ್ಕೆ ಬದ್ಧನಾಗಿರದಿದ್ದರೆ,
ಬದುಕು ಪಾದರಸದಂತೆ
ಜಾರಿ ಹೋಗುವುದು
ನಿಸ್ಸಂಶಯ.

ಬಿಂಬ – 12

ತಂತ್ರಜ್ಞಾನದ
ಅಗತ್ಯತೆ ಎಷ್ಟು,
ಹೇಗೆ, ಏಕೆ, ಮತ್ತು
ಯಾವುದು, ಯಾವಾಗ
ಎಂಬುದರ ಸ್ಪಷ್ಟ ಅರಿವು
ಮತ್ತೆ ನಿಲುವು ಇಲ್ಲದಿದ್ದರೆ
ಭರಿಸಲಾಗದ ನಷ್ಟ
ಮನುಕುಲಕ್ಕೆ
ಶತಃಸಿದ್ಧ.

ಬಿಂಬ – 11

ಅಸಹಾಯಕರಿಗೆ
ಮತ್ತು ಅಸಮರ್ಥರಿಗೆ
ಸಹಾಯ ಮಾಡುವ
ಸಾಮರ್ಥ್ಯವೊಂದಿದ್ದೂ,
ಇಚ್ಛಾಸಕ್ತಿಯ ಕೊರತೆಯಿಂದಾಗಿ,
ಅಥವಾ ಸ್ವಾರ್ಥದಿಂದಾಗಿ
ಸಾಧ್ಯವಾದಷ್ಟಾನ್ನಾದರೂ
ಮಾಡದಿರುವುದೊಂದು
ಅಕ್ಷಮ್ಯ ಅಪರಾಧ
ಮತ್ತು ವಿಕೃತಿ.

ಬಿಂಬ – 10

ಸಾಧನೆಯ
ಸಾಧ್ಯತೆ ಎಂಬುದು
ಯಾವುದೇ ವ್ಯಕ್ತಿಯ
ಸರ್ವತೋಮುಖವಲ್ಲ
ಕೇವಲ ಕೆಲವೊಂದು
ಕ್ಷೇತ್ರಗಳಿಗಷ್ಟೇ
ಸೀಮಿತ.

ಬಿಂಬ – 9

ಕೋಪವೆಂಬುದು
ಯಾರಿಗೂ ಬೇಡದ,
ಎಲ್ಲರೂ ದ್ವೇಷಿಸುವ,
ನಿಯಂತ್ರಿಸಲು ಬಯಸಿ
ಸಂಪೂರ್ಣವಾಗಿ
ಯಶಸ್ಸಾಗದಿರುವುದು.
ಮತ್ತೆ ನಿಂರತರವಾಗಿ
ನಮ್ಮನ್ನು ಬಾಧಿಸುವ
ಒಂದು ದೊಡ್ಡ
ಕಾಯಿಲೆ.

ಬಿಂಬ – 8

ಪ್ರಾಮಾಣಿಕತೆ
ಎಂಬುದು ಎಲ್ಲರೂ
ಎಲ್ಲ ಸನ್ನಿವೇಶದಲ್ಲೂ
ಶೇಕಡಾ ನೂರರಷ್ಟು
ಅನುಸರಿಸದೆ/ಲಾಗದೆ
ಎಲ್ಲರಲ್ಲೂ ಅಪೇಕ್ಷಿಸುವ
ಮತ್ತು ನಿರೀಕ್ಷಿಸುವ
ಸದ್ಗುಣ.

Jun 3, 2009

ಸಾಲು – 6

- 1 -
ಆ ರಸ್ತೆ ಬದಿಯಲ್ಲಿ,
ಹೋಡಾಡುತ್ತಿರುವ ಜನರ ಸಮಕ್ಷಮದಲ್ಲೇ,
ಎಂಬತ್ತರ ಹರಯದ ಮುದುಕಿಯೊಬ್ಬಳು
ದುಷ್ಟ ಮಂತ್ರಿಯ ಪೋಸ್ಟರಿಗೆ
ಕ್ಯಾಕರಿಸಿ ಉಗಿದು ಗೊಣಗುತ್ತಿರುವುದನ್ನು
ಪ್ರಾಜಾಪ್ರಭುತ್ವದ ಸಾಧನೆಯೆನ್ನುವಿರೊ,
ಅಥವಾ ಅದರ ಅಣಕವೊ?

- 2 -
ಮಡದಿಯನ್ನು ಗಾಢವಾಗಿ ಮೋಹಿಸುವ
ಉನ್ಮತ್ತತೆಯಲ್ಲಿ, ಹಠಾತ್ತನೆ ಅವಳ ಕಿವಿಗೆ
ಗೆಳತಿಯ ಹೆಸರನ್ನು ಪಿಸುಗೊಟ್ಟಿದ್ದು,
ಅಂಧ ಪ್ರೇಮದ ಪ್ರತೀಕವೊ,
ಇಲ್ಲಾ ಅವನ ಅಂಧಕಾರವೊ?

- 3 -
ಎಲ್ಲ ಪಕ್ಷದ ನಾಯಕರು ಹೇರಳವಾಗಿ
ಹಂಚಿದ ಹೆಂಡ, ಹಣ, ಬಳುವಳಿಗಳನ್ನು
ವಿನಮ್ರವಾಗಿ, ಖುಷಿಯಾಗಿ ಸ್ವೀಕರಿಸಿದ ಮತದಾರ,
ನಂತರ ಎಲ್ಲರನ್ನೂ, ಎಲ್ಲವನ್ನೂ ಧಿಕ್ಕರಿಸಿ,
ತನ್ನಿಚ್ಛೆಯಂತೆ ಮತ ಚಾಲಾಯಿಸಿದ್ದು
ಅವನ ಧೀಮಂತಿಕೆಯ ಪ್ರತೀಕ ಅಲ್ಲವೆ?

- 4 -
ಅಲ್ಲಿ, ಕಳ್ಳಬಟ್ಟಿ ಸೆರೆಯೇರಿಸಿದ ಕಡು ಬಡವ
ಹಾದಿಯಲ್ಲೆಲ್ಲಾ ಸ್ವಚ್ಛಂದ ಹಾಡಿ ಕುಣಿದು
ಪಡೆಯುವ ಪರಮ ಸುಖ.
ಇಲ್ಲಿ, ಉತ್ಕೃಷ್ಟ ವಿದೇಶೀ ಮದ್ಯ ಸೇವಿಸಿದ
ಶ್ರೀಮಂತ ಏರಿದ ಅಮಲನ್ನು
ನಿಯಂತ್ರಿಸಲು ಪರದಾಡುವ ಸನ್ನಿವೇಶ
ವಿಪರ್ಯಾಸ ಅಲ್ಲವೆ?

Jun 1, 2009

ಮತ್ತೆ ಬರುವನು ಚಂದಿರ - 23

ಸುಪ್ತ ಮನಸಿನ ಸಂವೇದನೆ
ಭಾವಸ್ತರಗಳ ಕದವ ತೆರೆದು
ವಾಸ್ತವಗಳಿಗೆ ಸ್ಪಂದಿಸಿದರೆ
ಮುದಗೊಳ್ಳುವನೊ ಚಂದಿರ

ಕಣ್ಣಾಮುಚ್ಚಾಲೆಯಾಟ ತರವಲ್ಲ
ಎದುರುಗೊಳ್ಳುವ ಸ್ಥೈರ್ಯವಿರಲಿ
ಸೋಗುಹಾಕುವ ಸರದಿ ಬೇಡ
ಸೋತು ಹೋಗುವೆ ಚಂದಿರ

ತಂತ್ರಗಾರಿಕೆ ಸತತ ಸರಿಯೆ
ಯಂತ್ರ, ಮಂತ್ರಗಳೆಲ್ಲ ವ್ಯರ್ಥ
ಸಹಜ ಒಲವೇ ಬದುಕಿನ ಅರ್ಥ
ಈ ನಿಜವನರಿಯೊ ಚಂದಿರ

ಮುಖವಾಡ ತೊರೆಯೊ ಸ್ನೇಹಿತ
ಕೃತಕ ಕುಣಿತದ ಅಮಲು ವಿಕೃತ
ಅಂತರಾಳದ ಸಲಹೆಗಳ ಪಾಲಿಸು
ಒಳ ಜಗವು ನಗುವುದು ಚಂದಿರ

ನೋವು, ನಷ್ಟ, ದುಮ್ಮಾನಗಳ ನಡುವೆ
ನಿಲ್ಲದೇ ಸಾಗಲಿ ಹೋರಾಟ ಎಂದಿಗೂ
ಹಿತ, ಮಿತವಾಗಿ ಸಿಗುವ ಹಿತಾನುಭಾವ
ಬದುಕಿಗೆ ತೃಪ್ತಿ ಪಡೆಯಲು ಚಂದಿರ

ಆರಿಹೋಗುತ್ತಿದೆ ಸಂಸಾರದ ಹಣತೆ
ಸೋರಿಹೋಗುತ್ತಿದೆ ನಶ್ವರ ಬದುಕು
ಹಲಸಿಹೋಗುತ್ತಿವೆ ಸಂಬಂಧ, ಸ್ನೇಹಗಳು
ಸಲಹೆ ನೀಡೊ ಚಂದಿರ

ಮೃತ್ಯುಪ್ರಜ್ಞೆಯ ನೀಡಿದ ಅರಿವು
ವ್ಯರ್ಥವಾದ ಬದುಕಿನ ಪಯಣ
ಅಂತ್ಯದಲ್ಲಿಯೂ ಈ ಪಾಪಪ್ರಜ್ಞೆ
ಕಾಡುತಿರುವುದೊ ಚಂದಿರ

ವಿಫಲ ಜೀವನದ ಚಿತ್ರಣಗಳೆ
ಸತತ ನುಸುಳಿ ಕೆದಕುತಿರಲು
ಆತ್ಮಸಾಕ್ಷಿ ಎಸೆದ ಪ್ರಶ್ನೆಗಳನ್ನು
ತಿರಸ್ಕರಿಸಿದ ಪ್ರತಿಫಲವಿದು ಚಂದಿರ

ಪ್ರಕೃತಿಯೊಡನೆ ತಾದ್ಯಾತ್ಮ ಭಾವ
ಆತ್ಮಜ್ಞಾನದ ಬಲವಿರಲು ಜೊತೆಗೆ
ಎಲ್ಲಾ ವಿಕೃತಿಗಳನ್ನು ಮೆಟ್ಟಿ ನಿಲ್ಲುವ
ಸಾಧ್ಯತೆ ಇದೆಯೊ ಚಂದಿರ

ಬಾಳಿನ ಅಸಾಂಗತ್ಯ, ಅಪೂರ್ಣತೆ,
ನಿರಂತರತೆಯೊಳಗಿನ ಸಾರ್ಥಕತೆ
ಹುಟ್ಟು, ಸಾವಿನ ಅಂತರದಲ್ಲಿ ಬದುಕು
ಅರ್ಥಪೂರ್ಣವಾಗಿರಲಿ ಚಂದಿರ

ಸಾಲು - 5

- 1 -
ಮದ, ಮತ್ಸರ, ಕಾಮ, ಕ್ರೋಧ,
ಲೋಭ, ವ್ಯಾಮೋಹ ಮತ್ತು ಛಲ
ಇವುಗಳನೆಲ್ಲಾ ತೊರೆಯಬೇಕು
ಎನ್ನುವುದು ಶಿಷ್ಟರ ಸಲಹೆ.
ಆದರೆ, ಇವೆಲ್ಲವನ್ನು ತೊರೆದ ಮೇಲೆ
ಮನುಷ್ಯನಾಗಿ ಉಳಿಯುವ
ಸ್ಪಷ್ಟ ಸಾಧ್ಯತೆ ಅಥವಾ ಅರ್ಹತೆ ಇದೆಯೆ?

- 2 -
ಮದುವೆಯಾದ ಮೇಲೆ ಬೇರೆಯವರನ್ನು
ಬಯಸಬಾರದೆನ್ನುವುದು ಸಾಪೇಕ್ಷವಾದರೂ.
ಇಲ್ಲವೆಂದು ಯಾರಾದರೂ ದಿಟ್ಟ ಉತ್ತರ ಕೊಟ್ಟರೆ
ಸೋಗುಹಾಕುತ್ತಿದ್ದಾರೆಂಬುದು ಶೇಕಡಾ ನೂರರಷ್ಟು
ನಿಸ್ಸಂಶಯ ಅಲ್ಲವೆ?

- 3 -
ಪರಿಮಳ ಭರಿತ ಗುಲಾಬಿಯೊಂದು
ಚಿರಯೌವನದಲ್ಲಿ ತೇಲಾಡುತ್ತಾ
ಸಂದಿಗ್ಧ ಸನ್ನಿವೇಶದಲ್ಲಿ ಸಿಲುಕಿದೆ.
ಮೊದಲು ಅವಳ ಮುಡಿಗೆ ಮುತ್ತಿಡಲೊ,
ಅಥವಾ ಅವನ ಹೃದಯವನ್ನಪ್ಪಿಕೊಳ್ಳಲೊ
ಎಂಬುದರ ತೀವ್ರ ಗೊಂದಲದಲ್ಲಿ.
ಇದು ಸಮಯಾಭಾವದ ಸೃಷ್ಟಿ ಇರಬಹುದೆ?

- 4 -
ತುಂಟ ಬೇಟೆಗಾರನ ಬಂದೂಕಿನ ಗುಂಡಿಗೆ
ಉರುಳಿ ಬಿದ್ದಿದೆ ಒಂದು ಸಾಧು ಜಿಂಕೆ
ಕಾನೂನಿನ ಕಣ್ಣಿಗೆ ಸಿಕ್ಕಿಬಿದ್ದ ನಂತರ
ಅವನು ಆತ್ಮಸಂರಕ್ಷಣೆಗೆ ಎಂದು ಬೊಬ್ಬೆಯಿಟ್ಟದ್ದು
ದೊಡ್ಡ ವಿಪರ್ಯಾಸ ಅಲ್ಲವೆ?