- 1 -
ಆ ರಸ್ತೆ ಬದಿಯಲ್ಲಿ,
ಹೋಡಾಡುತ್ತಿರುವ ಜನರ ಸಮಕ್ಷಮದಲ್ಲೇ,
ಎಂಬತ್ತರ ಹರಯದ ಮುದುಕಿಯೊಬ್ಬಳು
ದುಷ್ಟ ಮಂತ್ರಿಯ ಪೋಸ್ಟರಿಗೆ
ಕ್ಯಾಕರಿಸಿ ಉಗಿದು ಗೊಣಗುತ್ತಿರುವುದನ್ನು
ಪ್ರಾಜಾಪ್ರಭುತ್ವದ ಸಾಧನೆಯೆನ್ನುವಿರೊ,
ಅಥವಾ ಅದರ ಅಣಕವೊ?
- 2 -
ಮಡದಿಯನ್ನು ಗಾಢವಾಗಿ ಮೋಹಿಸುವ
ಉನ್ಮತ್ತತೆಯಲ್ಲಿ, ಹಠಾತ್ತನೆ ಅವಳ ಕಿವಿಗೆ
ಗೆಳತಿಯ ಹೆಸರನ್ನು ಪಿಸುಗೊಟ್ಟಿದ್ದು,
ಅಂಧ ಪ್ರೇಮದ ಪ್ರತೀಕವೊ,
ಇಲ್ಲಾ ಅವನ ಅಂಧಕಾರವೊ?
- 3 -
ಎಲ್ಲ ಪಕ್ಷದ ನಾಯಕರು ಹೇರಳವಾಗಿ
ಹಂಚಿದ ಹೆಂಡ, ಹಣ, ಬಳುವಳಿಗಳನ್ನು
ವಿನಮ್ರವಾಗಿ, ಖುಷಿಯಾಗಿ ಸ್ವೀಕರಿಸಿದ ಮತದಾರ,
ನಂತರ ಎಲ್ಲರನ್ನೂ, ಎಲ್ಲವನ್ನೂ ಧಿಕ್ಕರಿಸಿ,
ತನ್ನಿಚ್ಛೆಯಂತೆ ಮತ ಚಾಲಾಯಿಸಿದ್ದು
ಅವನ ಧೀಮಂತಿಕೆಯ ಪ್ರತೀಕ ಅಲ್ಲವೆ?
- 4 -
ಅಲ್ಲಿ, ಕಳ್ಳಬಟ್ಟಿ ಸೆರೆಯೇರಿಸಿದ ಕಡು ಬಡವ
ಹಾದಿಯಲ್ಲೆಲ್ಲಾ ಸ್ವಚ್ಛಂದ ಹಾಡಿ ಕುಣಿದು
ಪಡೆಯುವ ಪರಮ ಸುಖ.
ಇಲ್ಲಿ, ಉತ್ಕೃಷ್ಟ ವಿದೇಶೀ ಮದ್ಯ ಸೇವಿಸಿದ
ಶ್ರೀಮಂತ ಏರಿದ ಅಮಲನ್ನು
ನಿಯಂತ್ರಿಸಲು ಪರದಾಡುವ ಸನ್ನಿವೇಶ
ವಿಪರ್ಯಾಸ ಅಲ್ಲವೆ?
No comments:
Post a Comment