ಮಾಂಸಖಂಡಗಳು ಎಲುಬುಗಳನ್ನಾವರಿಸುತ್ತವೆ
ಮೆದುಲನ್ನು
ಅಲ್ಲಿಡುತ್ತಾರೆ ಮತ್ತೆ
ಕೆಲವೊಮ್ಮೆ ಆತ್ಮವನ್ನು,
ಹೆಂಗಸರು
ಗೋಡೆಗಳಿಗೆ ಗಾಜಿನ ಗ್ಲಾಸುಗಳನ್ನೊಡೆಯುತ್ತಾರೆ
ಮತ್ತೆ ಗಂಡಸರು ಕುಡಿಯುತ್ತಾರೆ
ಹೇರಳವಾಗಿ
ಯಾರೂ ಕಾಣುವುದಿಲ್ಲ
ಅವನನ್ನು
ಆದರೂ
ನೋಡಲು ಹಾತೊರೆಯುತ್ತಾರೆ
ಮೇಲೆ, ಆಚೆ, ಅತ್ತಿತ್ತ ಒದ್ದಾಡುತ್ತಾ
ಹಾಸಿಗೆಯಿಂದ.
ಮಾಂಸ ಸುತ್ತುವರೆದಿದೆ
ಎಲುಬುಗಳನ್ನು, ಮಾಂಸವು
ಮಾಂಸಕಿಂತಲೂ ಮಿಗಿಲಾದುದಕ್ಕಾಗಿ
ಹುಡುಕುತ್ತಿರುತ್ತದೆ.
ಅಲ್ಲಿ ಅವಕಾಶವಿಲ್ಲ
ಖಂಡಿತ:
ನಾವೆಲ್ಲರೂ ಸೆರೆಯಾಗಿದ್ದೇವೆ
ಒಂದೇ
ವಿಧಿಯಲ್ಲಿ.
ಯಾರೂ ಎಂದಿಗೂ ಕಾಣಲಾರರು
ಅವನನ್ನು.
ನಗರದ ವ್ಯಸನಗಳು ತುಂಬುತ್ತವೆ
ತ್ಯಾಜ್ಯ ಬಯಲುಗಳು ತುಂಬುತ್ತವೆ
ಹುಚ್ಚಾಸ್ಪತ್ರೆಗಳು ತುಂಬುತ್ತವೆ
ವೈದ್ಯಶಾಲೆಗಳು ತುಂಬುತ್ತವೆ
ಸ್ಮಶಾನಗಳು ತುಂಬುತ್ತವೆ
ಬೇರೆ ಯಾವುದೂ
ತುಂಬುವುದಿಲ್ಲ.
ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ
No comments:
Post a Comment