ವಿನೀತನಾಗಿ ಬೇಡಿ ಪರಿತಪಿಸುವೆ
ಆರ್ದ್ರನಾಗಿ ನಿನ್ನ ಮುಡಿಗೇರುವೆ
ದಿಗ್ಬಂಧನ ತೊರೆದು ಬಳಿ ಬರುವೆ
ಸಾಕ್ಷಿಗಿರುವನು ನಗುವ ಚಂದಿರ
ಒಣ ಜ್ಞಾನದರ್ಪದ ಠೇಂಕಾರ
ಪಾಂಡಿತ್ಯ ಪ್ರದರ್ಶನ ಇಲ್ಲದೆ
ವಿನಯಶೀಲ ಮುಗ್ಧತೆಯೊಂದಿಗೆ
ಮಾದರಿಯಾಗಿರುವನು ಚಂದಿರ
ಮತ್ತೆ ಮತ್ತೆ ಮರು ಪ್ರವೇಶದಿಂದ
ಸಿಕ್ಕುವ ನೋಟ, ದಕ್ಕಿದ ಭಾವ
ವ್ಯಾಪಕ ಆಳ ಅಗಲದ ವಿಸ್ತಾರ
ಮಹತ್ವ ಮನಸಿಗೆ ಚಂದಿರ
ಪರಿಮಳಭರಿತ ಹೂವುಗಳು
ರಸಭರಿತವಾದ ಸಿಹಿ ಹಣ್ಣುಗಳು
ಮಾಗಿ ಉದುರುವವರೆಗೂ
ಯಾರೂ ಕಾಯವುದಿಲ್ಲ ಚಂದಿರ
ಉಪದೇಶಾತ್ಮಕತೆಯ ತೊರೆದು,
ಮಾಹಿತಿಗಳನ್ನು ಮೀರಿದ ಸತ್ವದಿ
ವಾದ ವಿವಾದ ದಾಟಿ ಸಂವಾದದ
ಕಡೆಗೆ ಚಲಿಸೊ ಚಂದಿರ
ಭಾವ, ವಿಚಾರಗಳ ವಿನ್ಯಾಸದಿಂದ
ಆಲಾಪಗಳ ಹೊಸ ತಿರುವುಗಳಿಂದ
ಒಳತೋಟಿಯೊಡನೆ ನಿತ್ಯ ಸರಸ
ಅದ್ಭುತ ಅನುಭವವೊ ಚಂದಿರ
ಮೀಟಿದಾಗ ವಿಪುಲವಾದ ಪ್ರವಾಹ
ವಿಭಿನ್ನ ಸ್ತರದೆತ್ತರದಿ ರಿಂಗಣಿಸುತ
ಹಾಲುಕ್ಕಿಸಿ, ನೊರೆಯೆಬ್ಬಿಸಿ ನಲಿವ
ವಿಶಿಷ್ಟ ಜಲಪಾತ ಜ್ಞಾನ ಚಂದಿರ
ಕೌಶಲ್ಯಗಳ ಸಾತತ್ಯದಿಂದ ಸತತ
ಜ್ಞಾನದಸಿವನ್ನು ಇಂಗಿಸುವ ಪ್ರಯತ್ನ
ಸಾಪೇಕ್ಷಣೀಯವಾದ ಪ್ರೇರಣೆಗೆ
ಆಶ್ರಯ ನೀಡುತಿರುವ ಚಂದಿರ
ಯಜಮಾನಿಕೆಯ ಗತ್ತು ಗತಕಾಲಕಿರಲಿ
ಬೀಸುತನದ ದರ್ಪ ಇತಿಹಾಸವಾಗಲಿ
ಶಿಸ್ತುಬದ್ಧ ಸರಳ ಬದುಕಿನ ಪರಂಪರೆ
ನಿನ್ನ ಇಂದಿನ ಉಸಿರಾಗಲಿ ಚಂದಿರ
Jun 7, 2009
ಮತ್ತೆ ಬರುವನು ಚಂದಿರ - 24
Subscribe to:
Post Comments (Atom)
No comments:
Post a Comment