Jun 28, 2009

ಮತ್ತೆ ಬರುವನು ಚಂದಿರ - 28

ಒಂಟಿ ಬದುಕಿನ ನಿರಂತರ ಓಟ
ಸಂಜೆಗಣ್ಣಿನ ಅಸ್ಪಷ್ಟ ನೋಟಕೆ
ಸ್ಥಾಯೀಭಾವದ ಸ್ಥಿರ ಹಿನ್ನಲೆಗೆ
ಹಿಮ್ಮೇಳ ನುಡಿಸುವನೊ ಚಂದಿರ

ನಡೆದ ಹಾದಿಯ ಪರಮಾವಧಿ
ಪಾಪ, ಪುಣ್ಯದ ಪರಮಾರ್ಥಕ
ಸಂಸರ್ಗ, ಸಂಸಾರ, ಸಂಸೃತಿ
ಸಂಸ್ಕರಿಸುವವನೆ ಚಂದಿರ

ಸಹನೆಯಿಂದೋಡಿಸುತ್ತಾ ಬೇಸರ
ಕ್ಷಮೆಯಿಂದ ನಿಯಂತ್ರಿಸು ಕೋಪ
ಬಲಹೀನತೆ ಜಯಿಸು ಪ್ರೇಮದಿಂದ
ತಪ್ಪನ್ನು ನಗುವಿಂದ ಉತ್ತರಿಸೊ ಚಂದಿರ

ಮುತ್ತಿರುವ ಪರದೆಗಳನ್ನು ಕಿತ್ತೆಸೆದು
ಅಡಗಿದ್ದ ವಿಕೃತಿ ಅನಾವರಣಗೊಳಿಸಿ
ಮುಕ್ತಿಮಾರ್ಗದಲಿ ನಡೆಯಲಿಚ್ಛಿಸಿದರೆ
ಆರ್ದ ಸಂತೃಪ್ತಿ ಸಿದ್ಧಿಸುವುದು ಚಂದಿರ

ಅವತರಿಪ ವಿಶಿಷ್ಟ ತುಮುಳಗಳಿಗೆ
ಕದಡದಿರಲಿ ಸ್ಥಿರಚಿತ್ತ, ಸಂಯಮ
ಕಾಲಾತೀತದಲ್ಲಿ ಲೀನವಾಗುವುದು
ಮತ್ತೆ ಮರುಕಳಿಸದಂತೆ ಚಂದಿರ

ನೆನಪುಗಳ ಹೊಳೆಯಲ್ಲಿ ಮಿಂದು
ಆಶಯಗಳಿಗೆ ವಾಸ್ತವದ ನೋಟ
ಪರಿಚಯಿಸುವ ಸ್ಥೈರ್ಯವಿರದಿದ್ದರೆ
ಗಾಳಿಗೋಪುರ ಖಚಿತ ಚಂದಿರ

ಭೂತ, ವರ್ತಮಾನದ ಬಿಡಿಚಿತ್ರಗಳು
ಅಗಾಧವಾಗಿ ಕಲಕುತಿವೆ ಮನವನ್ನು
ಏಕಾಗ್ರತೆಯ ಸಾಧಿಸುವ ಹಾದಿಯಲಿ
ಮತ್ತೆ ಸೋತಿರುವೆನೊ ಚಂದಿರ

ಬದುಕು ಕಾಣಿಸಿದ ಚಿತ್ರಗಳೆಲ್ಲವು
ಸ್ಥಾನಪಲ್ಲಟಗೊಂಡಿವೆ ಬಲುಬೇಗ
ಅದರ ವೇಗ, ಅವೇಗದ ಬಿರುಸಿಗೆ
ಬಲಿಪಶುವಾಗಿರುವೆನೊ ಚಂದಿರ

ಪ್ರತಿರೂಪಗಳ ಗುರುತಿಸಲಾಗದೆ
ಪರಿಕಲ್ಪನೆಗಳಿಗೆ ರೆಕ್ಕೆಗಳನ್ನಿಡದೆ
ಕಾರ್ಯಪ್ರವೃತ್ತಿಗೆ ಸಜ್ಜುಗೊಳ್ಳದೆ
ನುಚ್ಚುನೂರಾಗಿರುವೆನೊ ಚಂದಿರ

ಚಿಂತನೆಗಳಿಗೆ ಚಾಲನೆ ನೀಡದೆ
ಮಂಥನಗಳಿಗೂ ಮನಗೊಡದೆ
ಅಂತರಾತ್ಮವನೆಂದೂ ಪ್ರಶ್ನಿಸದೆ
ಅಸ್ಪಷ್ಟಗಳಿಗೆ ಬಲಿಯಾದೆ ಚಂದಿರ

2 comments:

ಜಲನಯನ said...

ಚಂದಿನ ಸರ್
ಚಂದಿರ..ವಿವಿಧಗಳ ಪ್ರತೀಕವೆಂಬಂತೆ ವೈವಿಧ್ಯತೆಯನ್ನು ಹೊದ್ದು ಪ್ರತಿ ಪಾದದ ಅಂತ್ಯಕ್ಕೆ ಕಾಣಿಸಿಕೊಳ್ಳುವುದು, ಮತ್ತು ಕೊನೆಯ ಸಾಲುಗಳು
ಚಿಂತನೆಗಳಿಗೆ ಚಾಲನೆ ನೀಡದೆ
ಮಂಥನಗಳಿಗೂ ಮನಗೊಡದೆ
ಅಂತರಾತ್ಮವನೆಂದೂ ಪ್ರಶ್ನಿಸದೆ
ಅಸ್ಪಷ್ಟಗಳಿಗೆ ಬಲಿಯಾದೆ ಚಂದಿರ
ಚಂದಿರ ಹೇಗೆಲ್ಲಾ ಬಳಕೆಯಾದ ಎನ್ನುವುದನ್ನು ಬಿಂಬಿಸಿದೆ....ಚನ್ನಾಗಿದೆ...

ಚಂದಿನ | Chandrashekar said...

ಧನ್ಯವಾದಗಳು ಜಲನಯನ ಅವರೆ
ನಿಮ್ಮ ಪ್ರೊತ್ಸಾಹದ ಪ್ರತಿಕ್ರಿಯೆಗೆ.