Sep 9, 2009

ಮತ್ತೆ ಬರುವನು ಚಂದಿರ - 33


ಆಸೆ, ಆಶಯಗಳಿಗೆ ಪೂರಕವಾಗಿ
ಅರ್ಹತೆ, ಸಾಮರ್ಥ್ಯ, ಸಂಯಮಗಳ
ಸಿದ್ಧಿಸಿಕೊಂಡರೆ ಅನನ್ಯ ಅವಕಾಶಗಳು
ತಡವಾದರೂ ತಾಗುವವು ಚಂದಿರ

ವೃತ್ತಿಯೊಳಗೆ ಮೇಲು-ಕೀಳೆಂದು
ಭಾವಿಸುತ್ತಾ, ಬಿಂಬಿಸಿಕೊಳ್ಳುವವ
ವಿಕೃತ ಮನಸಿನ ಮತಿಹೀನನಷ್ಟೆ
ಜಗದ ಮಾನದಂಡವಲ್ಲ ಚಂದಿರ

ಮಹತ್ತರ ಮಹತ್ವಾಕಾಂಕ್ಷೆಯಿಂದ
ಪೂರಕ ಪರಿಶ್ರಮದೊಂದಿಗೆ ಕಾರ್ಯ
ಪ್ರವೃತ್ತರಾದಾಗ ಸಾಧಿಸುವ ಸಾಧ್ಯತೆಗೆ
ಹತ್ತಿರವಾಗುವುದು ನಿಶ್ಚಿತ ಚಂದಿರ

ನಂಬಿಕೆಯೆಂಬುದು ಅಸಹಾಯಕರಿಗೆ
ಅಂಧಃಕಾರದಲ್ಲಿರುವಾಗ ಸಂತೈಸುವ,
ಹಣತೆ ಹಿಡಿದು ಹಾದಿ ತೋರುವ
ಏಕೈಕ ಆಪ್ತ ಗೆಳೆಯನಲ್ಲವೆ ಚಂದಿರ

ದೇಶ ಕಾಲದ ಸಿಡಿಲು ಮಿಂಚಿಗೆ
ಪರಿಶುದ್ಧ ಪ್ರಾಮಾಣಿಕತೆ ಬಳಲಿ
ಮೂರ್ಖತನದ ಪರಮಾವಧಿಗೇರಿ
ಅಬ್ಬರದಿಂದ ನರ್ತಿಸುತ್ತಿದೆ ಚಂದಿರ

ಅಮೂರ್ತ ನರಕದ, ಮೂರ್ತ ಪ್ರತಿರೂಪಗಳ
ಕಡೆಗೆಣಿಸಿ ಕೇಡಿನ ಕಾರ್ಯದಲ್ಲಿ ಮೈಮರೆತು
ಮಗ್ನರಾದ ಸನ್ನಿವೇಶದಲ್ಲಿ ಪ್ರಕೃತಿಯ ವಿಕೋಪ
ರುದ್ರತಾಂಡವವಾಡುವುದು ಖಚಿತ ಚಂದಿರ

ಸುಭದ್ರ, ಸುಖಕರ ಮತ್ತು ಸಂತಸದ
ಭವಿಷ್ಯಕ್ಕಾಗಿ ಸುಂದರ ವರ್ತಮಾನ
ವ್ಯರ್ಥಮಾಡುವುದು ಶುದ್ಥ ಮೂರ್ಖತನ
ಎಂದು ಕಿವಿಮಾತು ಹೇಳೊ ಚಂದಿರ

ಹಣವೆಂಬುದು ಎಲ್ಲರಿಗೂ ಅತ್ಯಗತ್ಯ
ಆದರೆ, ಅದೆಷ್ಟು ಎಂಬುದಾಗಿ ಸ್ಪಷ್ಟ
ತಿಳುವಳಿಕೆಯಿಂದ ಬದ್ಧನಾಗಿರದಿದ್ದರೆ
ಬದುಕು ಜಾರುವುದು ನಿಶ್ಚಿತ ಚಂದಿರ

ತಂತ್ರಜ್ಞಾನದ ಅಗತ್ಯತೆ ನಿಯಮಿತ,
ಯಾವುದು, ಏಕೆ, ಹೇಗೆ, ಯಾವಾಗ
ಎಂಬುದರ ಸ್ಪಷ್ಟ ಅರಿವು ಇರದಿದ್ದರೆ
ಮನುಕುಲಕ್ಕೆ ಕೇಡು ಖಚಿತ ಚಂದಿರ

ಅಸಹಾಯಕರಿಗೆ, ಅಸಮರ್ಥರಿಗೆ
ನೆರವಾಗುವ ಸಾಮರ್ಥ್ಯವಿದ್ದರೂ
ಸ್ವಾರ್ಥ ಸಾಧನೆಗೆ ಮಾಡದಿರವುದು
ವಿಕೃತ ನಡವಳಿಕೆ ಅಲ್ಲವೆ ಚಂದಿರ

2 comments:

ಮನಸು said...

neevu heLida ondondu saalugaLu nijavenisutte.. tumba istavagide

ಚಂದಿನ | Chandrashekar said...

ನಿಮ್ಮ ಉಮ್ಮಸ್ಸಿನ ಪ್ರತಿಕ್ರಿಯೆ ನನಗೆ ಸ್ಪೂರ್ತಿದಾಯಕ...ಮನಸು ಮೇಡಮ್.