Oct 25, 2009

ಮತ್ತೆ ಬರುವನು ಚಂದಿರ - 38


ಕೀರ್ತಿ, ಪ್ರತಿಷ್ಠೆಗಳ ಹಂಬಲಕೆ
ವಾದಿ-ಸಂವಾದಿಯ ಸಂಹಾರ
ಅಡ್ಡದಾರಿಗೆ ಅನುಮೋದಿಸುತ
ಅಡ್ಡಗತ್ತರಿಗೆ ಸಿಕ್ಕಿದ ಚಂದಿರ

ಸರಳ ಜೀವನದೃಷ್ಟಿಯ ಮರೆತು
ಸ್ವಾರ್ಥ ಆದ್ಯತೆಗಳ ಸೆರೆಯಿಂದ
ಸನಾತನ ಮೌಲ್ಯಗಳ ಪಸರಿಸುತ
ಪ್ರತಿಭೆಯ ಮೆರೆಯುವ ಚಂದಿರ

ನಡಾವಳಿಗಳ ಪರಿಶೀಲನೆ
ನಂಬುಗೆಗಳ ಪರಾಮಾರ್ಶೆ
ವಿದ್ಯಮಾನಗಳ ಅರಿವಿಂದ
ದೀವಟಿಗೆಯಾಗೊ ಚಂದಿರ

ಪಾಶ್ಚಾತ್ಯ ರಾಷ್ಟ್ರಗಳ ವಿಕೃತಿಗಳು
ಜಾಗತೀಕರಣದ ಹಪಹಪಿಕೆಗಳು
ಮೂಲಭೂತವಾದಿಗಳ ಹುನ್ನಾರ
ಹೆಡೆ ಬಿಚ್ಚಿರಲು ಎಚ್ಚರ ಚಂದಿರ

ಅಂತರಂಗದ ಅಳಲುಗಳ
ಚಿಂತನ ಮಂಥನಗಳಿಂದ
ಆತ್ಮಾನುಸಂಧಾನ ಹರಸುತ
ಆತ್ಮೋದ್ಧಾರವಾಗಲಿ ಚಂದಿರ

ವೇದ, ಉಪನಿಷತ್ತುಗಳಾಗಲಿ,
ಇಲ್ಲಾ ಬ್ರಹ್ಮಸೂತ್ರಗಳಾಗಲಿ
ಧಾರ್ಮಿಕ ಶಾಸ್ತ್ರಗಳಿದ್ದರೂ ಸರಿ
ದಾರ್ಶನಿಕನಾಗಿರೊ ಚಂದಿರ

ಬಡವರ ಬಾಳಿಗೆ ಕೊಳ್ಳಿಯನಿಟ್ಟು
ತೋರಿಕೆಯ ಆಚರಣೆಗಳು ಬೇಕೆ
ಆಡಂಬರದ ಪ್ರದರ್ಶನಗಳೆಂಬ
ವಿಕೃತಪೀಡೆ ತೊಲಗಿಸೊ ಚಂದಿರ

ಸಮಕಾಲೀನ ಪ್ರಜ್ಞೆಯೊಂದಿಗೆ
ಇತಿಹಾಸಗಳ ತಿರುವುಗಳಿಂದ
ತಾತ್ಕಾಲಿಕ ತಂತ್ರಗಳ ತೊರೆದು
ಪರಿಸರಪ್ರೇಮಿಯಾಗು ಚಂದಿರ

ಶತಮಾನಗಳ ನಿರ್ಲಕ್ಷದಿಂದಲೆ
ವಿಕೋಪಗಳು ತಾಂಡವವಾಡಿವೆ
ವಿಷಮಸ್ಥತಿಗೆ ತತ್ತರಿಸುವೆ ಬಹಳ
ತುರ್ತುಸುಧಾರಣೆ ಬೇಕು ಚಂದಿರ

ಅಧಿಕಾರದಾಸೆಗೆ ಮರುಳಾಗಿ
ಸಂಪತ್ತಿನ ಸಂಗ್ರಹ ಅನವರತ
ದ್ವೇಷ, ಸೇಡುಗಳು ಹಪಹಪಿಕೆ
ಇವ ದುಷ್ಟನಾಗಿಹನೊ ಚಂದಿರ

2 comments:

ಮನಸು said...

ಕೊಲ್ಲಿಯನಿಟ್ಟು:ಬದಲು ಕೊಳ್ಳಿಯನಿಟ್ಟು ಅನ್ನಿಸುತ್ತೆ ಅಲ್ಲವೆ..?
ಕವನದ ಶೈಲಿ ತುಂಬಾ ಇಷ್ಟವಾಯಿತು.

ಚಂದಿನ | Chandrashekar said...

ಧನ್ಯವಾದಗಳು ಮನಸು ಮೇಡಮ್,

ಹೌದು ನೀವೇಳಿದ್ದು ಸರಿ, ಈಗ ಸರಿಪಡಿಸಿದ್ದೇನೆ...