Feb 23, 2009

ಆದರೂ ನಾನೆದ್ದು ನಿಲ್ಲುವೆ!

ನೀವು ನನ್ನನ್ನು ಇತಿಹಾಸದ ಪುಟದಗಳಲ್ಲಿ ಮುಚ್ಚಿಡಬಹುದು,
ನಿಮ್ಮ ಕೊಳಕು, ನಿಕೃಷ್ಟ, ತಿರುಚಿದ ಸುಳ್ಳುಗಳಿಂದ.
ನನ್ನನ್ನು ಆ ಕೊಳಕಿನಡಿಯಲ್ಲೇ ತುಳಿದದರೂ ಸಹ
ನಾನು ಧೂಳೆದ್ದು ನಿಲ್ಲುವಂತೆ ಎದ್ದು ನಿಲ್ಲುವೆ.

ನನ್ನೀ ಒರಟುತನ ನಿಮಗೆ ಕೋಪ ತರಿಸುವುದೇ?
ಎಲ್ಲಕಡೆಯಿಂದ ಬಿದ್ದ ಹೊಡೆತಗಳಿಗೇಕೆ ನೊಂದಿರುವಿರಿ?
ಏಕೆಂದರೆ, ನನ್ನ ನಡುಮನೆಯಲ್ಲಿ ತೈಲಹೊಮ್ಮುವ
ಕೊಳವೆ ಬಾವಿಗಳಿರುವಂತೆ ನಾನು ನಡೆಯುತ್ತೇನೆ.

ಹಾಗೇ ಆ ಚಂದ್ರ ಹಾಗು ಸೂರ್ಯರಿರುವಂತೆ,
ಭರದಿಂದ ಅಪ್ಪಳಿಸುವ ಭೀಕರ ಅಲೆಗಳಂತೆ,
ನಂಬಿಕೆಗಳು ಮೂಡಿ ಬಲವಾಗಿ ಬೆಳೆಯುವಂತೆ,
ನಾನೆದ್ದು ನಿಲ್ಲುವೆ.

ನೀವು ನನ್ನ ವಿನಾಶವನ್ನು ಕಾಣಲು ಬಯಸುವಿರಾ?
ನಾನು ತಲೆತಗ್ಗಿಸಿ, ಕಣ್ಣುಗಳ ಕೆಳಗಿಳಿಸುವುದನ್ನು,
ನನ್ನ ಭುಜಗಳು ಜೋತುಬಿದ್ದು ನೆಲಕ್ಕುರುಳುವುದನ್ನು,
ತೀವ್ರವೇದನೆಯಿಂದ ಬಳಲಿ ಎದೆಗುಂದುವುದನ್ನು.

ನನ್ನ ದರ್ಪ ನಿಮಗೆ ನೋವುಂಟುಮಾಡುವುದೇ?
ಅದನ್ನು ಅಷ್ಟೊಂದು ಕೆಟ್ಟದಾಗಿ ಪರಿಗಣಿಸಬೇಡಿ,
ಏಕೆಂದರೆ, ನನ್ನ ಮನೆಯ ಹಿತ್ತಲಿನಲ್ಲಿ
ಚಿನ್ನದಗಣಿಗಳಿರುವಂತೆ ನಾನು ನಗುತ್ತಿರುತ್ತೇನೆ.

ನೀವು ನಿಮ್ಮ ಶಬ್ಧಗಳಿಂದ ನನ್ನ ಕೊಲ್ಲಬಹುದು,
ನಿಮ್ಮ ಕಣ್ನೋಟದಿಂದ ನನ್ನ ಕತ್ತರಿಸಬಹುದು,
ನಿಮ್ಮ ದ್ವೇಷದಿಂದ ನನ್ನ ಸಾಯಿಸಲೂಬಹುದು,
ಆದರೂ ನಾನು ಬಿರುಗಾಳಿಯಂತೆ ಎದ್ದುನಿಲ್ಲುವೆ.

ನನ್ನ ಮಾದಕ ಸೌಂದರ್ಯ ನಿಮ್ಮನ್ನು ಕೆರಳಿಸುವುದೇ?
ನನ್ನ ತೊಡೆಗಳು ಸೇರುವಲ್ಲಿ ವಜ್ರಗಳಿರುವಂತೆ,
ಕುಣಿಯುವುದು ನಿಮ್ಮಲ್ಲಿ ಆಶ್ಚರ್ಯ ಮೂಡಿಸುವುದೇ?

ಇತಿಹಾಸದೊಳಗೆ ನಾಚಿಕೆಗೀಡಾದ ಗುಡಿಸಲುಗಳಿಂದ,
ಹೊರಬಂದು ನಾನೆದ್ದು ನಿಲ್ಲುವೆ.
ಭೂತಕಾಲದ ತೀವ್ರ ನೋವಿನ ತಳಪಾಯದಿಂದ
ಮೇಲೆದ್ದು ನಿಲ್ಲುವೆ.
ನಾನೊಂದು ಕಪ್ಪುಸಮುದ್ರ, ಇದ್ದಕ್ಕಿದ್ದಂತೆ ಮೇಲೆರಗುವೆ,
ವಿಶಾಲವಾಗುವೆ, ಸುರಂಗದಂತಾಗುವೆ, ಉಕ್ಕಿದಲೆಗಳನ್ನು
ಎದುರಿಸುವೆ, ಭಯಾನಕ ಭಯವನ್ನು ತೊರೆದು ನಿಲ್ಲುವೆ.
ಸ್ಪಷ್ಟವಾಗಿ ಅತ್ಯದ್ಭುತವಾದ ಮುಂಜಾವಿನಲ್ಲಿ ನಾನೆದ್ದು ನಿಲ್ಲುವೆ.

ನನ್ನ ಪೂರ್ವಜರಿತ್ತ ಬಳುವಳಿಗಳೊಂದಿಗೆ,
ನಾನು ಜೀತದಾಳುವಿನ ಕನಸು ಮತ್ತು ಆಶಾಕಿರಣ.
ನಾನೆದ್ದು ನಿಲ್ಲುವೆ
ನಾನೆದ್ದು ನಿಲ್ಲುವೆ
ನಾನೆದ್ದು ನಿಲ್ಲುವೆ.

ಮೂಲ ಕವಿಯತ್ರಿ: ಮಾಯಾ ಏಂಜೆಲೌ
ಕನ್ನಡಕ್ಕೆ: ಚಂದಿನ

No comments: