Jun 1, 2009

ಮತ್ತೆ ಬರುವನು ಚಂದಿರ - 23

ಸುಪ್ತ ಮನಸಿನ ಸಂವೇದನೆ
ಭಾವಸ್ತರಗಳ ಕದವ ತೆರೆದು
ವಾಸ್ತವಗಳಿಗೆ ಸ್ಪಂದಿಸಿದರೆ
ಮುದಗೊಳ್ಳುವನೊ ಚಂದಿರ

ಕಣ್ಣಾಮುಚ್ಚಾಲೆಯಾಟ ತರವಲ್ಲ
ಎದುರುಗೊಳ್ಳುವ ಸ್ಥೈರ್ಯವಿರಲಿ
ಸೋಗುಹಾಕುವ ಸರದಿ ಬೇಡ
ಸೋತು ಹೋಗುವೆ ಚಂದಿರ

ತಂತ್ರಗಾರಿಕೆ ಸತತ ಸರಿಯೆ
ಯಂತ್ರ, ಮಂತ್ರಗಳೆಲ್ಲ ವ್ಯರ್ಥ
ಸಹಜ ಒಲವೇ ಬದುಕಿನ ಅರ್ಥ
ಈ ನಿಜವನರಿಯೊ ಚಂದಿರ

ಮುಖವಾಡ ತೊರೆಯೊ ಸ್ನೇಹಿತ
ಕೃತಕ ಕುಣಿತದ ಅಮಲು ವಿಕೃತ
ಅಂತರಾಳದ ಸಲಹೆಗಳ ಪಾಲಿಸು
ಒಳ ಜಗವು ನಗುವುದು ಚಂದಿರ

ನೋವು, ನಷ್ಟ, ದುಮ್ಮಾನಗಳ ನಡುವೆ
ನಿಲ್ಲದೇ ಸಾಗಲಿ ಹೋರಾಟ ಎಂದಿಗೂ
ಹಿತ, ಮಿತವಾಗಿ ಸಿಗುವ ಹಿತಾನುಭಾವ
ಬದುಕಿಗೆ ತೃಪ್ತಿ ಪಡೆಯಲು ಚಂದಿರ

ಆರಿಹೋಗುತ್ತಿದೆ ಸಂಸಾರದ ಹಣತೆ
ಸೋರಿಹೋಗುತ್ತಿದೆ ನಶ್ವರ ಬದುಕು
ಹಲಸಿಹೋಗುತ್ತಿವೆ ಸಂಬಂಧ, ಸ್ನೇಹಗಳು
ಸಲಹೆ ನೀಡೊ ಚಂದಿರ

ಮೃತ್ಯುಪ್ರಜ್ಞೆಯ ನೀಡಿದ ಅರಿವು
ವ್ಯರ್ಥವಾದ ಬದುಕಿನ ಪಯಣ
ಅಂತ್ಯದಲ್ಲಿಯೂ ಈ ಪಾಪಪ್ರಜ್ಞೆ
ಕಾಡುತಿರುವುದೊ ಚಂದಿರ

ವಿಫಲ ಜೀವನದ ಚಿತ್ರಣಗಳೆ
ಸತತ ನುಸುಳಿ ಕೆದಕುತಿರಲು
ಆತ್ಮಸಾಕ್ಷಿ ಎಸೆದ ಪ್ರಶ್ನೆಗಳನ್ನು
ತಿರಸ್ಕರಿಸಿದ ಪ್ರತಿಫಲವಿದು ಚಂದಿರ

ಪ್ರಕೃತಿಯೊಡನೆ ತಾದ್ಯಾತ್ಮ ಭಾವ
ಆತ್ಮಜ್ಞಾನದ ಬಲವಿರಲು ಜೊತೆಗೆ
ಎಲ್ಲಾ ವಿಕೃತಿಗಳನ್ನು ಮೆಟ್ಟಿ ನಿಲ್ಲುವ
ಸಾಧ್ಯತೆ ಇದೆಯೊ ಚಂದಿರ

ಬಾಳಿನ ಅಸಾಂಗತ್ಯ, ಅಪೂರ್ಣತೆ,
ನಿರಂತರತೆಯೊಳಗಿನ ಸಾರ್ಥಕತೆ
ಹುಟ್ಟು, ಸಾವಿನ ಅಂತರದಲ್ಲಿ ಬದುಕು
ಅರ್ಥಪೂರ್ಣವಾಗಿರಲಿ ಚಂದಿರ

2 comments:

ಮನಸು said...

ತುಂಬಾ ಚೆನ್ನಾಗಿವೆ... ಸಾಲುಗಳು ಇದು ಈ ಟಿವಿ ಯಲ್ಲಿ ಬರುವ ಮತ್ತೆ ಬರುವನು ಚಂದಿರದಲ್ಲಿ ಪ್ರತಿದಿನ ಒಂದರಂತೆ ಬಿತ್ತರಿಸುತ್ತಾರೆ ಅಲ್ಲವೆ..? ನಾನು ಕೆಲವು ಬಾರಿ ನೋಡಿದ್ದ ನೆನಪು.. ಅವು ನಿಮ್ಮವೇ ಸಾಲುಗಳಾ? ತುಂಬಾ ಇಷ್ಟವಾಯಿತು ಚಂದಿರನನ್ನೇ ಎಲ್ಲ ರೀತಿಯಲಿ ಅಭಿವ್ಯಕ್ತಿಸಿದ್ದೀರಿ.
ವಂದನೆಗಳು ಅಲ್ಪವಿರಾಮದೊಂದಿಗೆ

ಚಂದಿನ said...

ಹೌದು ಮೇಡಮ್,

ಆ ಧಾರಾವಾಹಿಗಾಗಿಯೇ, ಈ ಸಾಲುಗಳನ್ನು ಬರೆಯುತ್ತಿದ್ದೇನೆ.
ನಿಮಗಿಷ್ಟವಾಗಿರುವುದಕ್ಕೆ ಸಂತಸವಾಗಿದೆ.

-ಚಂದಿನ