ಜೀವಸೃಷ್ಟಿಯ ಸಾಧ್ಯತೆ ವಿಸ್ಮಯ
ಬದುಕೆಂಬುದೊಂದು ಅತ್ಯದ್ಭುತ
ಈ ಆವಿಸ್ಮರಣೀಯ ಉಡುಗೊರೆ
ಸವಿಯುವುದೇ ಅದೃಷ್ಟ ಚಂದಿರ
ಬಾಲ್ಯ, ತಾರುಣ್ಯ, ಯೌವನ,
ಪ್ರಬುದ್ಧತೆ,ಬದ್ಧತೆ, ಮುದಿತನ
ಎಲ್ಲ ಘಟ್ಟಗಳನ್ನು ಆಸ್ವಾಧಿಸಿ
ಮುಕ್ತಿ ಪಡೆಯೊ ನೀ ಚಂದಿರ
ಬಚ್ಚಿಟ್ಟುಕೊಳ್ಳಲು ಹಾತೊರೆಯುವೆ
ಕೆಟ್ಟು ಕುಲಗೆಟ್ಟಾಗ ಆತಂಕಪಡುವೆ
ಇಷ್ಟಾನಿಷ್ಟಗಳ ಮಧ್ಯೆ ಗೆರೆ ಎಳೆದು
ಸ್ಪಷ್ಟತೆ ನೆರಳಲ್ಲಿ ಅರಳೊ ಚಂದಿರ
ಜಗದಗಲ ನಿನ್ನ ಆಸೆಗಳ ಚದುರಿವೆ
ನಿತ್ಯ ನರಳುವೆ ನಿರೀಕ್ಷೆ ಉಸಿಯಾದರೆ
ಆಸೆ, ನಿರೀಕ್ಷೆಗಳ ಎಲ್ಲೆ ಮೀರಿದಾಗಲೆ
ನೀನು ಹೂವಂತೆ ಅರಳುವೆ ಚಂದಿರ
ಅನನ್ಯ ಜಗದಲ್ಲಿ ಎದೆಯುಬ್ಬಿ ಉಸಿರಾಡು
ಆಗಾಧ ಆಗಸದೆಡೆಗೆ ಹಣೆಯೊಡ್ಡಿ ಹಾಡು
ಆರ್ದ ಆತ್ಮರತಿ ಅನುಭವಿಸಿ ಕುಣಿದಾಡು
ಅಸೂಯೆ ಪಡುವಂತೆ ಚೋರ ಚಂದಿರ
ನಿಮಿಷಗಳ ಲೆಕ್ಕಿಸದೆ ದಶಕಗಳ ಕಳೆದೆ
ಕೂಡಿ, ಕಳೆವ ಲೆಕ್ಕದ ಆಟದಲಿ ಮುಳುಗಿ
ಅತ್ತಿತ್ತ ನೋಡುವ ಅವಕಾಶಗಳು ಕೈಜಾರಿ
ಆತ್ಮ ಹಾರಿ ಹೋಗುವ ಹಕ್ಕಿ ಚಂದಿರ
ಸುಡು ಸುಡು ಬಿಸಿಲಲ್ಲಿ ಬೆವರು ಬತ್ತಿದೆ
ಬಿರುಕು ಬಿಟ್ಟ ನೆಲ ಬೆಂಕಿ ಉಗುಳುತ್ತಿದೆ
ಹಸಿರಿಗೆ ಉಸಿರಿಲ್ಲ ನಿಷ್ಕರುಣ ಧಾರುಣ
ಅಂಧಕಾರ ಮೊಳಗಿರಲು ಇಲ್ಲಿ ಚಂದಿರ
ಬಾಲ್ಯ ಸ್ಮೃತಿಗಳ ಸವಿನೆನಪಿನಿಂದ
ಕಣ್ಣಾಲಿಗಳು ತಂಬಿ ಹರಿಯುತ್ತಿವೆ
ಕಳಚಿರುವ ಕೊಂಡಿಯನು ಕೂಡಿಸುವ
ಬಯಕೆ ತೀರಿಸುವೆಯಾ ನೀ ಚಂದಿರ
ಹುಳಿ, ಒಗರು, ಸಿಹಿ, ಖಾರ ಬಾಳು
ನಡೆ-ನುಡಿಗಳಿಂದ ಸಿದ್ಧಿಸಿದ ಜ್ಞಾನ
ನಿರ್ಧಾರ, ನಿಯಂತ್ರಣ ನೆಪಮಾತ್ರ
ಆತ್ಮತೃಪ್ತಿಗೆ ಸಾಕು ನಗುವ ಚಂದಿರ
ನೆನಪಿನ ದೋಣಿಯಲಿ ತೇಲುವ ಸುಖ
ವಾಸ್ತವಕ್ಕಿಲಿಯಲು ಹಿಂಜರಿಕೆ, ದುಃಖ
ಕನಸು ಕನ್ನಡಿಯಲ್ಲ ಕದಡುವುದು ಬೇಗ
ನೈಜತೆಗೆ ಜೊತೆಯಾಗೊ ಚಂದಿರ
4 comments:
ನಿಮ್ಮ ಕಾವ್ಯ ಮಧುರ
ಒದಲದು ಸುಂದರ...
ಧನ್ಯವಾದಗಳು, ಜಿ.ಎಸ್.ಬಿ.ಅಗ್ನಿಹೋತ್ರಿ ಅವರೆ.
ಚುಟುಕು ಕವನಗಳ ನಂತರ ಒಂದು ದೀರ್ಘವಾದ, ಅಷ್ಟೇ ಸೊಗಸಾದ ಕವನ ಬರೆದಿದ್ದೀರಿ...
ಧನ್ಯವಾದಗಳು ಶಿವು ಅವರೆ.
Post a Comment