Jun 16, 2009

ಮತ್ತೆ ಬರುವನು ಚಂದಿರ - 26

ನೆಟ್ಟ ನೋಟದಿಂದ ಕಾಣುವ ಕಾತುರ
ಸಿದ್ಧಿಸಿದ ಚಿತ್ರ ದಿಟ್ಟಿಸುವ ಕುತೂಹಲ
ಗೆರೆಗಳಾಚೀಚೆಗೆ ಇಣುಕುವ ಹಂಬಲ
ತಳಮಳದ ಹುಚ್ಚು ಮನವೊ ಚಂದಿರ

ಚಿತ್ತ ಭಿತ್ತಿಯ ಭ್ರೋಣ ಟಿಸಿಲೊಡೆದು
ನವಿರಾಗಿ ಚಿಗಿರೊಡೆದು ತೂಗಾಡುತ
ಉಲ್ಲಾಸ, ಉತ್ಸಾಹ ಉಮ್ಮಳಿಸುವ
ಪ್ರಕ್ರಿಯೆ ನಿಗೂಢ ವಿಸ್ಮಯ ಚಂದಿರ

ತವಕ ತಲ್ಲಣಗಳ ನಿಯಂತ್ರಿವ ಜಾಣತನ
ಸ್ಥಿರ ಮನಸ್ಥಿತಿ, ನಿರ್ಲಿಪ್ತ ಭಾವಸ್ತರದಿಂದ
ನಿಲುವು, ನಿರ್ಧಾರ ಮಂಡಿಸುವ ಸ್ಥೈರ್ಯ
ಸಾಪೇಕ್ಷ ಸಾಧನೆ ಅಗತ್ಯವೊ ಚಂದಿರ

ಊರುಕೇರಿಗಳ ಅಲೆಯುತ್ತ ಮುತ್ತ
ಸಂದ ತುತ್ತನ್ನು ಸವಿಯುತ್ತ ಮುಕ್ತ
ಲೋಕದರ್ಶನದಿಂದ ವೈರಾಗ್ಯ ಚಿತ್ತ
ಇವ ಅತ್ಯೋತ್ತಮನಲ್ಲವೆ ಚಂದಿರ

ಬೆಟ್ಟ ಗುಡ್ಡಗಳತ್ತಿ ಕಡಿದ ಕಟ್ಟಿಗೆ ಸುತ್ತಿ
ಹೊತ್ತು ಮಾರಿದಾಗಲೆ ದಿನದ ತುತ್ತು
ದಶಕಗಳ ದಾಟಿದ ದಣಿದ ದಾರ್ಶನಿಕ
ಯೋಗ್ಯನಲ್ಲವೆ ನಮಗೆ ಚಂದಿರ

ಮುಗ್ಧತೆಯ ಮೆಟ್ಟಿಲನು ಸತತ ಹತ್ತುತ್ತಾ
ಬಣ್ಣ ಬಣ್ಣಗಳ ಕಡೆಗೆಣಿಸುತ ಕದಡದಂತೆ
ಸರಳತೆಯ ಸನ್ಮಾರ್ಗದಲಿ ಸ್ವರ್ಗ ಕಂಡು
ಐಕ್ಯನಾದವನು ಶರಣನಲ್ಲವೆ ಚಂದಿರ

ಬೆಳ್ಳಿ, ಬಂಗಾರ, ನಗನಾಣ್ಯ, ಮಣ್ಣ,
ಮುಷ್ಟಾನ್ನ, ಮಧುಪಾನ ಸಿರಿಹೊತ್ತು
ಹೂತು ಹೋದ ಕೊನೆಗೆ ಕಡುಬಿಕ್ಷುಕನ
ಹಾಗೆ, ಸಾಧಿಸಿದ್ದೇನೊ ಚಂದಿರ

ಅತ್ತಿತ್ತ ನೋಡದೆ, ಹಿಂತಿರುಗಿ ಕಾಣದೆ
ಮತಿಗೆಟ್ಟು ಮುನ್ನುಗ್ಗಿ ಆಪ್ತರ ತೊರೆದು
ಮುಗ್ಗರಿಸಿ ಬಿದ್ದಾಗ ಎಬ್ಬಿಸುವವರಿಲ್ಲದೆ
ತತ್ತರಿಸಿ ಹೋದನೊ ಇವ ಚಂದಿರ

ಝಣ ಝಣ ಕಾಂಚಾಣ ಮೋಹವಿರಲಿ
ವ್ಯಾಮೋಹವಿರದಂತೆ ಎಚ್ಚರಿಕೆಯಿಂದ
ಸೂಕ್ಷ್ಮಗೆರೆಯನ್ನು ಎಳೆದಾಗಲೇ ಗೆಳೆಯ
ಸಂತೃಪ್ತಿ ಪ್ರಾಪ್ತಿ ಖಚಿತ ಚಂದಿರ

ಸಿಡುಕಿನ ಸಿಂಗಾರಿ ಸಿರಿ ಅವಳ ಕಾಣೊ
ತಿರುಗುತಿದೆ ಬುಗುರಿ ಬಿಂಕ ತೊರೆದು
ನಾಜೂಕು ನಡೆ-ನುಡಿಯಿಂದ ಸೆಳೆದು
ಮುಗ್ಧ ನಗು ಚೆಲ್ಲಿ ಮನ-ಮನೆಗೆ ಚಂದಿರ

4 comments:

ಮನಸು said...

very nice!!

ಮನಸು said...

bangalore nallideeni...

ಬಿಸಿಲ ಹನಿ said...

ನಿಮ್ಮ ಮತ್ತೆ ಬರುವನು ಚಂದಿರ ಕವನಗಳು ಚಂದಿರನ ಬೆಳದಿಂಗಳಷ್ಟೆ ಮನಸ್ಸಿಗೆ ಮುದ ನೀಉತ್ತವೆ.

ಚಂದಿನ | Chandrashekar said...

ಧನ್ಯವಾದಗಳು ಮೇಡಮ್ ಮತ್ತು ಉದಯ ಇಟಗಿ ಅವರಿಗೆ,

ನಿಮ್ಮ ಪ್ರೋತ್ಸಾಹ ಹೀಗೇ ಮುಂದುವರೆಯಲಿ.