Jun 22, 2009

ಮತ್ತೆ ಬರುವನು ಚಂದಿರ - 27

ಗೆಳೆಯರ ಜೊತೆ ದೊಡ್ಡಕೆರೆಯಲಿ ಮಿಂದು
ಕಾದ ಮರಳ ದಂಡೆಯಲಿ ಅಂಗಾತ ಮಲಗಿ
ಹೊಂಗೆ ಮರದಡಿಯಲಿ ಸುಖನಿದ್ರೆ ಮುಗಿಸಿ
ಹಸಿವಾದಾಗ ಮನೆಗೆ ಮರಳಿದ ಚಂದಿರ

ರಂಗಮಂಟಪದಲ್ಲಿ ಜೋರು ಪ್ರದರ್ಶನ
ಊರೈಕಳ ಜೊತೆಗೆ ನೋಡವ ಸಿರಿತನ
ಮಸಾಲೆ ಉರಿಗಾಳು ಪುರಿ ಮೆಲ್ಲುವುದು
ಸ್ವರ್ಗ ಸಿದ್ಧಿಸಿದ ಸಂತಸ ಚಂದಿರ

ಊರ ಗುಡ್ಡಗಳಲ್ಲಿ ಓತಿಕ್ಯಾತವನ್ನಟ್ಟಿ
ಮುಳ್ಳು ಕಲ್ಲುಗಳ ತುಳಿದು ಹಿಮ್ಮೆಟ್ಟಿ
ತರಚಿ-ಪರಚಿದರು ಕಲ್ಲು ಬೀಸಿದಾಗ
ಏನೋ ಸಾಧಿಸಿದ ತೃಪ್ತಿ ಚಂದಿರ

ಘಮ ಘಮ ಮಲ್ಲಿಗೆ ಮುಂಜಾನೆ ಎದ್ದು
ಅಕ್ಕನಿಗೆ ಕೊಟ್ಟಾಗ ಸಿಕ್ಕ ಆಪ್ತ ಮುತ್ತು
ಕದ್ದ ಮಾವಿನ ಕಾಯಿಗಚ್ಚಿ ಉಪ್ಪುಖಾರ
ಮಂಡಕ್ಕಿ ಮುಕ್ಕಿದ್ದೇನು ಮಜ ಚಂದಿರ

ಮಳೆಗಾಲ ಬಂದಾಗ ಹಸಿರಾದ ಒಡಲು
ಬಣ್ಣಬಣ್ಣದ ಚಿಗುರು ಬಗೆಬಗೆಯ ನವಿರು
ಸಿರಿಕಾಣೊ ಕೆರೆಯಲ್ಲಿ ಕಿರಣಗಳ ತೇರು
ಹಕ್ಕಿಗಳ ಕಲರವಕೆ ಮನಸೋತ ಚಂದಿರ

ನೇರಳೆಕಾಯಿಗಳು ಕಡುನೀಲಿಯಾದಂತೆ
ಇತ್ತಲ ಪೇರಳೆಕಾಯಿ ದುಂಡಗೆ ಮೈದುಂಬಿ
ದೂರದ ನೆಲ್ಲೀಕಾಯಿ ನಳನಳಿಸಿ ಕರೆಯಲು
ಹಲಸಿನ ಹಣ್ಣಿನ ಘಮ ಸೆಳೆದು ಚಂದಿರ

ಊರ ಜಾತ್ರೆಗೆ ಹೊರಡುವ ಉಮ್ಮಸ್ಸು
ಕೂಡಿಟ್ಟ ದುಡ್ಡೆಲ್ಲ ಕಿಸೆಗಿಳಿಸಿದ ಪೋರರು
ನಲಿದಾಡಿ ಬಯಲಲ್ಲಿ ರಿಂಗಣಿಸಿ ಕುಣಿದು
ರಂಗಿನ ತರುಣಿಯರ ತೇರು ಚಂದಿರ

ಪಂಚಭೂತಗಳಲ್ಲಿ ಲೀನವಾದ ನಂತರ
ಮರುಜನ್ಮದ ಪರಿಕಲ್ಪನೆ ಅತಿಮಾನಸ
ಪ್ರಕೃತಿಯಿಂದ, ಪ್ರಕೃತಿಯೆಡೆಗೆ ಪಯಣ
ಈ ನಿಗೂಢ ಪ್ರಕ್ರಯೆ ವಿಸ್ಮಯ ಚಂದಿರ

ರಣರಣ ಬಿಸಿಲಿಗೆ ಮೈ ಸುಡುತ್ತಿರಲು
ಕಣ್ಣುಗಳು ಕಡುಗೆಂಪಾಗಿ ಉರಿದುರಿದು
ಕಾಣದಾಗಿದೆ ಸುತ್ತಮುತ್ತ ಮರದ ನೆರಳು
ಆಯಾಸಕೆ ತಳಮಳಿಸಿದೆ ಜೀವ ಚಂದಿರ

ಮೌನದೊಂದಿಗೆ ಸಂಯೋಜಿತ ಸಂಗೀತ
ಲಹರಿಗಳು ಹೊರಡಿಸುವ ನಾದ ಅದ್ಭುತ
ಹಗುರಾದ ಮೈಮನಗಳಿಗೆ ಚೈತನ್ಯದಿಂದ
ಹಾರುವ ಹಕ್ಕಿಯ ಹಾಗೆ ಚಂದಿರ

2 comments:

Guruprasad said...

chennagi ide kavana.....munduvarisi....

ಚಂದಿನ said...

ಗುರು ಅವರೆ,
ಧನ್ಯವಾದಗಳು.