ದೂರ ದೂರ ದೂರ ತೀರ
ಹೊತ್ತು ಹೊತ್ತು ತಂದ ಭಾರ
ತತ್ತರಿಸಿದೆ ತನು ತಡವರಸಿ
ತುಸುವಿರಾಮ ನೀಡು ಚಂದಿರ
ತಿರುವುಗಳಿಗೆ ತಿರುಳು ಮರುಳು
ಏರಿಳಿತಕೆ ಎದೆಯುಸಿರು ಕಟ್ಟಿದೆ
ಕಾರ್ಮೋಡದ ಕಗ್ಗತ್ತಲಲ್ಲಿ ತಡಕಿ
ಕಾಡ್ಗಿಚ್ಚಿಗೆ ಸಿಕ್ಕಿಕೊಂಡೆ ಚಂದಿರ
ಎಳೆಬಿಸಿಲಿಗೆ ಮೈಯೊಡ್ಡಿದಾಗ
ಇಬ್ಬನಿಯಲಿ ಸುಳಿದಾಡುವಾಗ
ಎಳೆಗಳಲ್ಲಿ ಹೊಳೆವ ಮುತ್ತುಗಳ
ಕಾಣೊ ಅದೃಷ್ಟ ನೀಡು ಚಂದಿರ
ಸುರಿವ ಮಳೆಯ ರಾಗದಲ್ಲಿ
ತೊಟ್ಟಿಕ್ಕುವ ಹನಿಗಳಿಂಚರ
ಮಾಳಿಗೆ ಮೃದಂಗವಾದನಕೆ
ತೇಲಿತೆನ್ನ ಮನವು ಚಂದಿರ
ಹಸಿರನೊತ್ತ ಮರದ ತುದಿಗೆ
ಹಳದಿ ಚಿಟ್ಟೆಯಿಡಲು ಚುಂಬನ
ನಾಚಿ ನಡೆದಳೇಕೊ ಯುವತಿ
ಇನಿಯನ ನೆನಪಾಗಿ ಚಂದಿರ
ರಂಗೋಲೆಯಿಡುವ ಚಿಟ್ಟೆಗೆಳು
ಯೌವನದಿ ಮೈ ಮರೆತಂತಿವೆ
ದುಂಬಿ ಕುಣಿದು ಬರಲು ಅತ್ತ
ತಳಮಳಗೊಂಡವೇಕೊ ಚಂದಿರ
ಹಕ್ಕಿಯೊಂದು ಆಗಿನಿಂದ
ವಿಷಾದಗೀತೆ ಹಾಡುತಿರಲು
ಸಂಗೀತಗಾರನಿಗೇಕೊ ಚಿಂತೆ
ಅದ್ಯಾವ ರಾಗವೆಂದು ಚಂದಿರ
ಹಬ್ಬರದ ಹಬ್ಬಗಳೆಲ್ಲವೂ
ಹಣದುಬ್ಬರಕೆ ತತ್ತರಿಸಿವೆ
ಸರಳ ಪಥದ ಮಂತ್ರವನ್ನು
ಬಿಡದೆ ಜಪಿಸುತಿವೆ ಚಂದಿರ
ದಿನದ ಮೂರು ಹೊತ್ತಿನಲ್ಲೂ
ಧಾರಾವಹಿಗಳ ಗುಂಗಿನಲ್ಲಿ
ಗಂಗೆ ಗಂಡ ತೊರೆದನವಳ
ಕುರುಡಿಯನರಸಿ ಚಂದಿರ
ಪ್ರತಿಭಾನ್ವೇಷಣೆಯೆಂಬ ಹೆಸರಿನಲ್ಲಿ
ಒತ್ತಡದ ಅಬ್ಬರಕೆ ಮಣಿದ ಮುಗ್ಧರು
ಕಮರಿಹೋದವು ಎಳೆ ಹೂಗಳಲ್ಲೆ
ತುಸು ಬೆಳಕು ತೋರೊ ಚಂದಿರ
3 comments:
eno vishista ee saalugaLalli.. sir Eke chandira endu ella saalugaLalli baLasideeri karana enadaru ideye?
super agide :)
ಧನ್ಯವಾದಗಳು ಮನಸು ಮೇಡಮ್..
ಹಾಗು ಕನ್ನಡ ಹಾಡುಗಳ ಮಾಲೀಕರಿಗೆ.
Post a Comment