Sep 3, 2008

ಮತ್ತೆ ಬರುವನು ಚಂದಿರ - 1

ಕೂಡಿ, ಕಳೆವ ಆಟ ತರವೆ
ತಂದ ಗಂಟು ಮರೆತು ಬಿಡುವೆ
ಬೇಡ ಆಸೆ ಬೆಟ್ಟದಷ್ಟು
ಏರಲಾರೆ ಚಂದಿರ

ಸಾಕು ದಿನಕೆ ಮೂರು ತುತ್ತು
ಮಾತೆ ಕೊಟ್ಟ ಹತ್ತು ಮುತ್ತು
ಉಳಿದುದೆಲ್ಲ ಊರು ಪಾಲು
ನಮ್ಮ ಪಾಲಿಗಿರುವ ಚಂದಿರ

ಕತ್ತಲಿರುವ ಜಾಗದಲ್ಲಿ
ಹಣತೆ ಬೆಳಗಿ ಆಪ್ತನಾಗು
ಬಳಲಿ ಬಂದ ಬಂಧುಗಳಿಗೆ
ಬದುಕು ನೀಡು ಚಂದಿರ

ಸ್ವಚ್ಛ ಮನಕೆ ಶ್ವೇತ ವರ್ಣ
ಒಳಗಡಗಿದೆ ಏಳು ಬಣ್ಣ
ಬಿಗಿದಿಡುವ ಬಯಕೆ ತರವೆ
ಬೆಳಗುತಿರುವ ಚಂದಿರ

ಕುತೂಹಲ ಕೆರಳಿದಾಕ್ಷಣ
ಕುಂತಿಗಾಗ ಚಿರಯೌವನ
ದಾನ ವೀರ ಶೂರ ಕರ್ಣ
ವರವಾದನೆ ಚಂದಿರ

ಯಾವ ದಾಹ ಯಾವ ಮೋಹ
ಬಿಡಿಸಿ ಸುತ್ತ ಚಕ್ರವ್ಯೂಹ
ಇರುವ ತನಕ ಸುತ್ತಿ ಸುತ್ತಿ
ಸುಳಿಗೆ ಸಿಕ್ಕ ಚಂದಿರ

ಅರಿವಿಲ್ಲದ ಆಳದಲ್ಲಿ ಆಟವಾಡಬೇಡ
ಬಯಸಿದ್ದು ಸಿಕ್ಕಿದಷ್ಟು ಅತಿಯಾಸೆಬೇಡ
ಹಿಂದಿರುಗಿ ನೋಡೊ ಗೆಳೆಯ
ನೆನಪು ತರುವ ಚಂದಿರ

ಬೆಳಕರಿಯದ ಊರಿನಲ್ಲಿ
ಕತ್ತಲೆಂದು ಕದಲದು
ಹಸಿವಿಲ್ಲದ ಮನುಜನಲ್ಲಿ
ಬೆಳಕು ಬರದು ಚಂದಿರ

ಹುಚ್ಚು ಕುದುರೆ ಓಟದಲ್ಲಿ
ಕುರುಡಾಗಿದೆ ಪಯಣವು
ಎಡವಿಬಿದ್ದ ಸ್ಥಳದ ಸುಳಿವು
ಸಿಗಲಾರದೆ ಚಂದಿರ

ಇತಿಮಿತಿಗಳ ಇತಿಹಾಸ
ಬಲ್ಲವನೆ ಸಂತನು
ಎಲ್ಲೆ ಇರದ ಸಾಹಸಕೆ
ಸೈ ಎನ್ನುವ ಚಂದಿರ

No comments: