Apr 14, 2009

ನನ್ನ ಚಿತ್ರಿಸು, ಇಲ್ಲಾ ಛಿದ್ರಿಸು

ಹೌದು,
ಸಾವಿರಾರು ಮೈಲಿಯಾಚೆಗೆ
ನಿನ್ನ ಮಾತು ಖಂಡಿತ
ಎಷ್ಟೇ ದೂರದಲ್ಲಿದ್ದರೂ
ಸ್ಪಷ್ಟವಾಗಿ ಕೇಳಿಸುತ್ತದೆ.
ರಾತ್ರಿಯಲ್ಲಿ ಕೊರೆಯುವ ಚಳಿಯು
ನಿನ್ನನ್ನು ಒತ್ತಾಸೆಯಿಂದ ಕರೆಯುತ್ತಿದೆ
ನನ್ನ ಜೊತೆಗಿರಲು.

ಮರಳುಗಾಡಿನ,
ಮರುಭೂಮಿಗಳಲ್ಲಿ
ತಿರುತಿರುಗಿ ಸೋತಿದ್ದೇನೆ.
ನಿನ್ನ ಒಲವೆಂಬ ಶರಾಬು
ಅದೆಷ್ಟೋ ಗ್ಲಾಸುಗಳು
ನಿನ್ನ ಪವಿತ್ರ ಕಣ್ಣುಗಳಿಂದ
ತುಂಬಿಸಿ ಕುಡಿದಿದ್ದೇನೆ.
ಸ್ವರ್ಗವು ಮೂಕ ಪ್ರೇಕ್ಷಕನಂತಾಗಿದೆ ಇಂದು,
ಮುಸ್ಸಂಜೆಯ ಮೌನ ನೀಲಾಕಾಶವ ಕಂಡು
ಹೊಳೆಯುವ ಪೂರ್ಣಚಂದ್ರನನು ಕಂಡು
ಹಸಿರು ಹುಲ್ಲಿನಲಿ ಮಿಂಚುವ ಇಬ್ಬನಿಯ ಕಂಡು.

ನಿನ್ನ ಹೆಸರಿನ ಪ್ರತಿ ಅಕ್ಷರವೂ
ನನಗೆ ರೋಮಾಂಚಕಾರಿ,
ರುದ್ರಾಕ್ಷಿ ಹಿಡಿದು ಪ್ರತಿದಿನವು ಜಪಿಸುವ
ಆ ಮಂತ್ರವೂ ಸಹ ನಿನ್ನದೇ ಹೆಸರು
ತಿಳಿಯಾಗಿ ತೇವವಾಗಿರುವ ನಿನ್ನ ತುಟಿಗಳು
ನನ್ನನ್ನು ಕೆಣಕಿ ಅತಿಯಾಗಿ ಕಾಡುತ್ತಿವೆ.
ನಿನ್ನ ಬೆವರಿನ ಉಸಿರಾಟದಿಂದ
ನನಗೆ ಮೈ ಮರೆತಂತಾಗುತ್ತದೆ.
ಆ ನಿನ್ನ ದಿಟ್ಟ ನೋಟ ನನಗೆ ಅಮಲೇರಿಸುತ್ತದೆ.
ನಿನ್ನ ಜಾದುವಿಗೆಂದೋ ನಾನು ಮರುಳಾಗಿದ್ದೇನೆ.
ಹಗಲು-ಇರುಳು ನಿನ್ನ ಯೋಚನೆಗಳಲ್ಲೇ
ಕಳೆದು ಹೋಗಿದ್ದೇನೆ.

ನಿನ್ನ ಚಾತುರ್ಯ,
ನನ್ನನ್ನು ಪರಿಪರಿಯಾಗಿ ಸೆಳೆಯುತ್ತದೆ.
ನಿನ್ನ ಉತ್ಕಟಾಕಾಂಕ್ಷೆ,
ನನ್ನಲ್ಲಿ ದಿಗ್ಭ್ರಮೆ ಮೂಡಿಸುತ್ತದೆ.
ನಿನ್ನ ದಿಟ್ಟ ಏಕಾಗ್ರತೆ,
ನನಗೆ ಅತೀವ ಆಶ್ಚರ್ಯ ಉಂಟುಮಾಡುತ್ತದೆ.
ನಿನ್ನ ಸಮಯ ಪ್ರಜ್ಞೆಗೆ
ವಿನಮ್ರ ಭಕ್ತಳಂತೆ ಬೆರಗಾಗಿದ್ದೇನೆ.
ನಿನ್ನ ಆಕರ್ಷಕ ವ್ಯಕ್ತಿತ್ವವು
ನನ್ನನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಿದೆ.

ನೀನನ್ನ ಹೃದಯವನ್ನು ಕದ್ದಾಗ
ನಾನೇನು ಮಾಡುತ್ತಿದ್ದೆನೊ ನಾನರಿಯೆ?
ನನಗೆ ಗೊತ್ತಿಲ್ಲದಂತೆ,
ನಿನಗೆ ಮನಸೋತಿದ್ದೇನೆ.
ನಾನು ನಿನ್ನವಳಾಗುವುದೊಂದೇ
ಈಗ ನನ್ನ ಧ್ಯೇಯೋದ್ದೇಶ.
ನಿನ್ನ ಪ್ರೀತಿಸುವುದನ್ನು ನಿಯಂತ್ರಿಸುವುದು
ನನಗೆ ಕಷ್ಟಸಾಧ್ಯ.
ಹಣೆಬರಹವು,
ನಮ್ಮನ್ನು ಇಂದು ಒಂದಾಗಿಸಿದೆ,
ಎಂದಿಗೂ ಬೇರಯಾಗುವುದಿಲ್ಲ ಎಂಬ
ನಂಬಿಕೆಯಿಂದ.

ನಿನ್ನ ಕಿರೀಟದಲ್ಲಿ ಪ್ರಕಾಶಿಸುತ್ತಿರುವ
ವಜ್ರವನ್ನಾಗಿಸು ನನ್ನ,
ನಿನ್ನ ಆಗಸದಲ್ಲಿನ ಚಂದ್ರಮನನ್ನಾಗಿಸು,
ನಿನ್ನ ಹೃದಯದ ರಾಣಿಯನ್ನಾಗಿಸು,
ನಿನ್ನ ಬದುಕಿನ ಪ್ರೀತಿಯನ್ನಾಗಿಸು,
ನಿನ್ನ ಸರ್ವಸ್ವವನ್ನಾಗಿಸು,
ನಿನ್ನಲ್ಲಿ ನನ್ನನ್ನು ಒಂದಾಗಿಸು,
ನನ್ನನ್ನು ನಿನ್ನಲ್ಲಿ ನಿನ್ನನ್ನಾಗಿಸು.

ನನ್ನ ಚಿತ್ರಿಸು, ಇಲ್ಲಾ ಛಿದ್ರಿಸು
ಅದು ನಿನಗೆ ಬಿಟ್ಟದ್ದು.

ಮೂಲ ಕವಿಯತ್ರಿ : ಅಂಜಲಿ ಸಿನ್ಹಾ
ಕನ್ನಡಕ್ಕೆ : ಚಂದಿನ

1 comment:

ಚಂದಿನ | Chandrashekar said...

Comment by Ashraf manzarabad 19 hours ago Delete Comment ಪ್ರೇಮಿಯೊಬ್ಬ ತನ್ನ ಪ್ರಿಯತಮೆಯನ್ನು ವರ್ಣಿಸುತ್ತಾ ಜೊತೆಗೆ ಆಕೆಯನ್ನು ಹಂಬಲಿಸುವ "ನನ್ನ ಚಿತ್ರಿಸು, ಇಲ್ಲಾ ಛಿದ್ರಿಸು ಎಂಬ" ಈ ಕವನ ಉತ್ತಮವಾಗಿದೆ. ಕವನವನ್ನು ಉತ್ತಮವಾಗಿ ಕನ್ನಡಕ್ಕೆ ಅನುವಾದಿಸಿದ್ದೀರಿ. ಓದುತಿದ್ದಂತೆ ಮತ್ತೊಮ್ಮೆ ಓದಬೇಕೆನಿಸುತ್ತದೆ. ಈಗಾಗಲೇ ನಾಲ್ಕು ಬಾರಿ ಓದಿದ ನಂತರ ಈ ಪ್ರತಿಕ್ರಿಯೆ ಬರೆದಿದ್ದೇನೆ. ಉತ್ತಮವಾಗಿದೆ. ಈ ಕವನ ಯುವ ಹೃದಯಗಳ ಮನಸೂರೆಗೊಳ್ಳುವಂತಿದೆ.