ಗೆರೆ ಎಳೆದು ಆ ಪರಿಧಿಯೊಳಗೆ
ನನ್ನ ನಾ ಹುಡುಕುವುದರೊಳಗೆ
ನಿನ್ನೆ ಸರಿದಾಗಿತ್ತು ಆಗಲೇ
ಈ ದಿನ ಪರಿಚಯವಾಗುವಲ್ಲೇ
ಗೆರೆಯಾಚೆಗೊಮ್ಮೆ ದಿಟ್ಟಿಸುವ
ಹಂಬಲ ಆಗಾಗ ಹೊಮ್ಮಿ
ಹೊರಟಿತ್ತು ನನಗದರ
ಅರಿವು ಮೂಡುವ ಮೊದಲೇ
ನಾನೇನು ಸುಮ್ಮನೆ ನಿಂತವನಲ್ಲ
ಎಲ್ಲರಂತೆ ಗೊಂದಲಗಳಿದ್ದವಲ್ಲಾ
ಅವರ ನೋಡಿಯೇ ನನಗೆ
ಪಾಠ ಕಲಿಯಬೇಕಿರಲಿಲ್ಲ ನಿಜವೇ
ಅವರಂತೆ ನಾನಾಗಲೂ ಸಾಧ್ಯವೆ
ಆದರೂ ಅದು ನ್ಯಾಯವೇ
ನನ್ನ ಹಾದಿಯ ಪರಿ ಹುಡುಕುವ
ಯತ್ನದಲೇ ನಾ ಕಳೆದು ಹೋಗಲೇ
ಇದ್ದ ಕ್ಷಣವನು ಒದ್ದು ಇರದ ನಾಳೆಯ
ಬಗ್ಗೆ ಕುರಿಯ ಮಂದೆಯ ಹಾಗೆ
ಮುಗ್ಗರಿಸಿ ಬಿದ್ದು ಎದ್ದು ಮತ್ತದೇ
ಜಾಗಕ್ಕೆ ಸಂಜೆ ಮರಳಿ ಬರಲೇ
ಎಲ್ಲ ಧಿಕ್ಕರಿಸಿ ಕಣ್ಮುಚ್ಚಿ ಒಮ್ಮೆಗೆ
ಗೆರೆಯ ದಾಟಿ ನಾ ಹೊರಟು ಬಿಡಲೇ
ಇರುವಲ್ಲಿ ಮತ್ತೆ ಮರಳಿ ಬರದ ಹಾಗೆ
ಇನ್ನೆಲ್ಲೋ ನನ್ನ ನಾ ಕಂಡುಕೊಳ್ಳಲೇ
ಇದ್ದಲ್ಲೇ ಇದ್ದು ನರಳಿ ನಾರಾಗುವ ಮುನ್ನ
ಕೊನೆಯ ಪುಟವೂ ಓದಿ ಮುಗಿಸುವ ಮುನ್ನ
ಕತ್ತಲ್ಲಲ್ಲೇ ಬದುಕು ಕಳೆದು ಹೋಗುವ ಮುನ್ನ
ಬೆಳಕು ಇರುವಲ್ಲಿಗೇ ಗೆರೆಯಾಚೆಗೊಮ್ಮೆ ನಾ ಓಡಲೇ
2 comments:
ಗೆರೆಯಾಚೆ ಓಡು
ಗೆರೆ ಬರೆದವ ನೀನೆ ತಾನೆ
ಪರಿಧಿಯಾಚೆಗೆ ಹುಡುಕು ನಿನ್ನನು
ಗೊಂದಲಗಳನು
ದೂಡಿ ಹೊರಟುಬಿಡು
ಕತ್ತಲೆಗೆ ಬೆಳಕು ಬೇಕು
ಬದುಕಿಗೆ ನೀನು ಬೇಕು
ಒಳ್ಳೆಯ ಕವನಗಳನ್ನು ಓದಿದ ಅನುಭವ ಅಪೂರ್ವವಾದುದು. ಮತ್ತೆ ಮತ್ತೆ ಬರುವೆನು. ಕವನಗಳೊಳಗಿನ ನಿಮ್ಮನ್ನು ನೋಡಲು.
ಒಲವಿನಿಂದ
ಬಾನಾಡಿ
ಬಾನಾಡಿ
ನಿಮ್ಮ ಹಿತನುಡಿ
ಮತ್ತೆ ಬರುವೆನೆಂಬ ಚೆನ್ನುಡಿ
ನಾನಾಗಲೆತ್ನಿಸುವೆ ನನ್ನ
ಕವನಗಳ ಕನ್ನಡಿ.
ಧನ್ಯವಾದಗಳು ನಿಮಗೆ,
- ಚಂದಿನ
Post a Comment