Jun 27, 2008

ಹಾದಿಯಿರದವನ ಹಾದಿ

ಹಾದಿ ಇರದವನಿಗೆ
ನಡೆದದ್ದೇ ಹಾದಿ
ನಿರೀಕ್ಷೆ ಇರದವನಿಗೆ ಇದ್ದೇ ಇದೆ
ಹಾದಿಯ ಎರಡೂ ಬದಿ

ನಡೆದ ಹಾದಿಯಲಿ ಉಳಿದಿಲ್ಲ
ಯಾವ ಹೆಜ್ಜೆ ಗುರುತು
ಅಲ್ಲಿ ಹುಲಿ, ಸಿಂಹ, ನರಿ ,
ತೋಳಗಳ ಸಾಥ್.

ಹುಡುಕಾಟವೇನೋ ,
ಏಕೋ, ಹೇಗೋ,ಎಲ್ಲೋ ?

ಇರದುದೇನೆಂಬುದರ ಕಲ್ಪನೆ ,
ಗಾಳಿ ಗಂಧವಿಲ್ಲ
ಇರುವುದೆಲ್ಲವ ತೊರೆದು ನಿಂತರೆ
ಕ್ಯಾರೆ ಎಂಬುವವರಿಲ್ಲ

ಲಗೇಜು ಲೈಟಾಗಿರಲು
ಪಯಣ ಸುಗಮವೆಂಬುದು ನಿಜ
ಹಾದೀಲಿ ಸಿಕ್ಕವರ
ಬೇಕು ಬೇಡಗಳು ಭಾರ, ಸಹಜ.

ಬಯಕೆ ಹೆಚ್ಚಾದಾಗ
ಮೂಡಿದ ಮಾತುಗಳೀಗ
ನಿಜಕ್ಕೂ ಮುಕ್ತಿ ಮಾರ್ಗ.

ಉರಿವ ಉಲ್ಕೆಯ ಹಾಗೆ

ಕೈ ಹಿಡಿದ ಕಾಯಕ
ಆಯ್ಕೆಯಲ್ಲ
ಅನಿವಾರ್ಯತೆ ಹಾಗೂ
ಬೀಸಿದ ಬಲೆ

ದಟ್ಟಡವಿಯಲಿ ಕಳೆದು
ಹೋಗುವುದು ಸುಲಭ
ಎಲ್ಲಿರುವ ಸುಳಿವಿರದ
ಸನ್ನಿವೇಶ.

ಬೇಡುವುದರ ಬೆನ್ನತ್ತಿ
ಬೆತ್ತಲೆ ಬೆವರು
ಕತ್ತಲಲಿ ತಡಕಾಡಿ
ಕಣ್ಣಲ್ಲಿ ಧೂಳು

ಅವಕಾಶಗಳ ಕೊರತೆ
ದೂರುವುದು ಸರಿಯೆ
ಅದೃಷ್ಟ ಪರೀಕ್ಷೆ
ಕೈಕೊಟ್ಟರೂ ಸರಿಯೆ

ಉರಿವ ಉಲ್ಕೆಗಳಂತೆ
ಉರಿಯುವ ಹಂಬಲ.

Jun 25, 2008

ಮುಸ್ಸಂಜೆಯ ಮುಖಾಮುಖಿ

ನೆಪಕೊಂದು ಪುಸ್ತಕ ಕೈಯೊಳಗೆ
ಹಾಳೆಗಳ ತಿರುವಿ
ಭಾವಗಳ ಮುಚ್ಚಿಡುವ ಯತ್ನ.

ಕಿಟಕಿಯಿಂದಾಚೆಗಿರುವ
ಬೆತ್ತಲೆ ಮರದಲ್ಲಿ
ಎಲೆಗಳ ಹುಡುಕುವ
ತವಕ.

ಬೇಸಿಗೆಯ ಮಧ್ಯಾಹ್ನ
ಆಗಸಕೆ ನೀರವ ಮೌನ
ಅಲ್ಲಿ ಬೆಳ್ಳಕ್ಕಿಗಳ ಸಾಲುಗಳ
ಕಾಣುವ ಹಂಬಲ.

ಸಿಕ್ಕ ಸಿಕ್ಕಿದ್ದೆಲ್ಲ ಮುಂದೆ
ಗುಡ್ಡೆಹಾಕಿ, ರಭಸದಿಂದ
ಮುಕ್ಕಿ,ಏನೋ ಸಾಧಿಸಿದ ನಿಟ್ಟುಸಿರು.

ಮಲಗಿದ್ದ ದಿನಪತ್ರಿಕೆಯೆತ್ತಿ
ಅತ್ತಿತ್ತ ನೋಡಿ, ಪರ ಪರ ಹರಿದು
ಹಿಡಿ ಹಿಡಿ ಉಂಡೆಗಳನ್ನೆಸೆದಾಗ
ಕಸದ ಬುಟ್ಟಿಗೆ ಸಮಾಧಾನ.

ಬಿಗಿಯಾಗಿ ಕಟ್ಟಿಟ್ಟ ಭಾರದ
ಮುನಿಸಿನ ಗಂಟು ಸಡಿಲಾದಂತೆ
ಬಿಗುವಾದ ಮೊಗವು ಸಹ
ಬಿಂಕ ಬಿಡಲೊಪ್ಪದು.

ಮುಸ್ಸಂಜೆಯಾದಂತೆ ಮತ್ತೆ
ಮುಖಾಮುಖಿಯ ಸಮಯ.
ಹಗುರಾದ ಮನಸ್ಸಿಗೆ
ಯಾಕೋ ಕೃತಕ ಕೋಪ.

Jun 24, 2008

ತಡವಾಗಿ ಬಂದ ಅರಿವು*

ಅರೆ ಬೆಂದ ಅನ್ನ
ಅರೆ ತುಂಬಿದ ಕೊಡದಲ್ಲಿ
ಕುತ ಕುತ ಕುತ ಕುತ
ಕುದಿಯುತ್ತಿದೆ
ಸುರಿದ ನೀರು
ಆವಿಯಾದಷ್ಟೂ
ಬೆಂದಿರುವುದೆಂಬ ತರ್ಕ.

ಭುಸುಗುಡುವ ರಭಸ
ಹೆಚ್ಚಾದಂತೆಲ್ಲ
ಅದೇ ವೇಗಕೆ
ಸಂಯಮ ಬತ್ತಿ ಹೋಗುತ್ತಿದೆ
ಅರೆ ಬೆಂದ ಅನ್ನ ,
ಇಲ್ಲವೆ ಅಕ್ಕಿ
ಇಲ್ಲಿ ಸುಖವಿಲ್ಲ.

ಉರಿಯ ಬಿಸಿಯೇರಿ
ತನ್ನೊಡಲ ಸುಡುತ್ತಿದ್ದರೆ
ಸಹಿಸಲಾಗದ ಸ್ಥಿತಿ;
ಸುಮ್ಮನಿರಲಾಗದು
ಸುರಿವವರು ಯಾರಿಲ್ಲಿ ನೀರು?

ಧಿಗ್ಗನೆದ್ದು ಧಗ ಧಗನುರಿವ ಬೆಂಕಿ
ಎಲ್ಲವೂ ಕರಗಿ ಕರಕಲಾಗುವ
ಸಮಯ ಹತ್ತಿರವಾದಂತೆ
ಜೀವ ಹಾರಿ ಹೋಗುವ ಕ್ಷಣ
ಪಾಪ ಪ್ರಜ್ಞೆ ಕಾಡುತ್ತಿದೆ
ಪ್ರಾಣ ಭಯಕೊ ,
ಇಲ್ಲ ಮನುಷ್ಯತ್ವದ ನೆನಪಿಗೋ
ಇದೀಗ ಬಹಳ ತಡವಾಗಿದೆ.

ನವೀನ ನರಕ*

ತೇಪೆ ಹಾಕಿದ ರಸ್ತೆಗೆ
ಅಲ್ಲಲ್ಲಿ ಕೆಂಪು, ಹಳದಿ ,
ಹಸಿರು ಲೈಟೊತ್ತ ಕಮಾನು
ವಿಚಿತ್ರ ಕೇಕೆಯೊಂದಿಗೆ
ಧೂಳೆಬ್ಬಿಸಿ ,
ಹೊಗೆ ಉಗುಳಿ ,
ಲಬೋ ಲಬೋ ಎಂದು
ಬಾಯಿ ಬಡಿದುಕೊಂಡು
ಇರುವೆಗಳಂತೆ ಸಾಲುಗಟ್ಟಿ
ಉಸಿರುಗಟ್ಟುವ ವಾಹನಗಳ ದಂಡು.
ಲಲನೆಯೊಬ್ಬಳು ನಿಂತು
ನಾಟಕದ ಪಾತ್ರಧಾರಿಯಂತೆ ಸಿಂಗರಿಸಿ
ಗ್ರಾಹಕರ ಸೆಳೆಯಳು ಯತ್ನಿಸುವಳು.

ಕುಡಿಯಲು ಕೆಟ್ಟ ನೀರು ,
ಚರಂಡಿ ವಾಸನೆ ,
ಕಸದ ಡಬ್ಬಿಗಳು ,
ಬೆನ್ನು ಮುರಿಯುವ ಆಟೊಗಳು
ಹುಬ್ಬೇರಿಸಿದರೂ ಇಳಿಯದ ಪೆಟ್ರೋಲ್ ಬೆಲೆ
ಆಯಾಸಗೊಂಡು ಮನೆ ಸೇರಿದರೆ
ತಡವಾಗಿ ಬಂದಿದಕ್ಕೆ ಮಂಗಳಾರತಿ
ವಿನಮ್ರವಾಗಿ ಸ್ವೀಕರಿಸಿ ,
ಕೈಗಿತ್ತ ಪಟ್ಟಿಯ ಗಂಭೀರ ಪರೀಕ್ಷೆಯ ನಂತರ
ಯುದ್ಧಕ್ಕೆ ತೆರಳಿದ ವೀರ ಸೈನಿಕನಂತೆ
ಚೌಕಾಸಿ ಮಾಡಿದರು ತೃಪ್ತಿಯಿಲ್ಲ;
ಪ್ರತಿಭೆ ಎಲ್ಲವೂ ವ್ಯರ್ಥ.
ತುಟ್ಟಿ ತರಕಾರಿ, ಹಣ್ಣು, ದಿನಸಿ ಸಾಮಾನು ಜೊತೆಗೆ
ಪೆಚ್ಚುಮೋರೆ ಹೊತ್ತು ತಿರುಗಿ ಮನೆಯತ್ತ.

ಮರುದಿನದ ಮುಖಾಮುಖಿಗೆ
ಮಾನಸಿಕ ತಯಾರಿ
ರಕ್ತ ಹೀರುವ ಶಾಲೆಗಳು
ಸದಾ ಕಿರುಚುವ ಬಾಸ್ ಗಳು
ಕರೆಂಟು, ಪೇಪರ್, ಹಾಲು ,
ಗ್ಯಾಸ್, ಕೇಬಲ್, ಮೊಬೈಲು ,
ಲ್ಯಾಂಡ್ ಲೈನ್, ಬ್ರಾಡ್ ಬ್ಯಾಂಡ್ ,
ಎಲ್ ಐ ಸಿ ಪ್ರೀಮಿಯಮ್ ,
ಕ್ರೆಡಿಟ್ ಕಾರ್ಡ್ ಬಿಲ್ಲುಗಳ
ಪಟ್ಟಿ ಬೆಳೆಯುತ್ತಲೇ ಇದೆ
ಹನುಮಂತನ ಬಾಲದಂತೆ
ಕಾರ್ ಲೋನ್, ಪರ್ಸನಲ್ ಲೋನ್ ,
ಹೌಸಿಂಗ್ ಲೋನ್ ಇನ್ಸ್ಟಾಲ್ಮೆಂಟ್...

ಪುಂಡುಪೋಕರ ಪ್ರತಿಭೆ
ಪ್ರೋತ್ಸಾಹಿಸಲು ನಾಯಕರ ದಂಡು
ಒಳಗೆ ಹೋದಷ್ಟೇ ವೇಗವಾಗಿ
ಹೊರಬರುವ ಕಸರತ್ತು
ಇವರೆಲ್ಲರ ಸಾಧನೆಯ ಬಿತ್ತರಿಸಲು ,
ಪ್ರಚಾರಕ್ಕಾಗಿ ಕಾತುರದಿಂದ
ಕಾದಿರುವ ಮಾಧ್ಯಮದ ಮಿತ್ರರು
ಕೊಲೆ, ರೇಪ್, ದರೋಡೆ, ಸುಲಿಗೆ ,
ಮೋಸ, ವಂಚನೆಗಳ ಸುದ್ದಿ ಬಿತ್ತರಿಸಲು
ಪೈಪೋಟಿ, ಯಾರು
ಎಷ್ಟು ವೇಗವಾಗಿ ಬಿತ್ತರಿಸುವರೊ
ಅವರೇ ಇಲ್ಲಿ ಪ್ರಚಂಡರು.

ಬಿಡದೇ ಕೊರೆಯುವ ಡೈಲಿ ಸೀರಿಯಲ್ಲುಗಳು
ಪ್ರತಿಭಾ ಪ್ರದರ್ಶನಗಳಿಂದ
ಗೋಳಿಡುವ ಕಾರ್ಯಕ್ರಮಗಳು
ಅದೇ ಸುದ್ದಿಯನ್ನು ಸಿಂಗರಿಸಿ
ದಿನಪೂರ ಎಳೆದಾಡುವ
ಸುದ್ದಿ ಚಾನೆಲ್ಲುಗಳು.
ಇವೆಲ್ಲ ಸಹಿಸಿಕೊಂಡು ದಿನದೂಡಿ
ಬದುಕುಳಿದವರು ಅದೃಷ್ಟವಂತರು.
ಹೆಸರೇ ಗೊತ್ತಿರದ ಖಾಯಿಲೆಗಳಿಂದ
ನರಳಿ ನೋವುಂಡವರಿಗೆ
ಹಾಸ್ಪಿಟಲ್ಗೆ ಕಾಲಿಡಲು ಭಯ.
ಅಲ್ಲಿಂದ ಎದ್ದು ,
ಗೆದ್ದು ಬಂದರೆ
ಧೀರ್ಘ ನಿಟ್ಟುಸಿರು.

Jun 23, 2008

ಮಾತು ಮೌನ*

ಮೊದಮೊದಲು ಮಾತು ಮೌನ
ಕ್ಷಣ ಕ್ಷಣವು ಕುತೂಹಲದ ಕದನ
ಹಂಬಲಿಸುತಿರುವೆ ಯಾವುದಕ್ಕೆ.
ಮನವ ಮೌನವಾಗಿಸಲಾಗದೆ?

ತಳಮಳಗಳ ತಡವರಿಕೆಯ ಬೇಗೆ
ಏನನೋ ಕಾಣುವ ಕಾತುರ ಕಣ್ಣಿಗೆ
ಕದಡಿದ ಹನಿ ಗೆರೆಯಂಚಿಗೆ ನೂಕಿ
ಮೊಗದಲ್ಲಿ ತನ್ನ ಹಾದಿ ಹುಡುಕಿತ್ತು

ಕಂಡ ಪ್ರತಿಬಿಂಬ ಅದೇ ಹೇಳಿರಲು
ದಿಟವನೇಕೊ ಒಪ್ಪದೀ ಮನಸು
ತುಟಿತೆರೆದು ತಡುಕಿದರು ಸಿಗದ
ಮಾತು, ಮೌನವೇ ಹಿತವೆನಿಸಿತು.

ಸದ್ದಿಲ್ಲದ ನಡೆನುಡಿಯ ಮರೆತಂತೆ
ಬಂದ ಕರೆಗಳೆಲ್ಲವ ಆಲಿಸುವ ಬಯಕೆ
ತನ್ನದಲ್ಲವೆಂಬ ಭಯ ಕಾಡಿದ್ದು ಸಹಜ
ಪರಿಚಯವಿರದ ಎಚ್ಚರಿಕೆಯ ಜೊತೆಗೆ.

ಹೊಸತು ಹಳೆತಾಗುವುದು ಖಚಿತ
ಯೌವನದ ಕಾಲ ಕರಗುವುದು ನಿಶ್ಚಿತ
ಬೆರಗಾಗುವ ವಿಷಯವಿದಲ್ಲ ಅಪರಿಚಿತ
ನಿಟ್ಟುಸಿರಿಡಲೂ ಸಹ ಕಾಯಬೇಕು.

Jun 21, 2008

ಮುತ್ತಿಟ್ಟ ಹನಿ*

ಮುತ್ತಿಟ್ಟ ಹನಿ ಎಲೆಯ ಮೇಲಿನ ಮುತ್ತು
ಮೆತ್ತಗೊತ್ತಿದರು ಭಯವು ಬೀಳುವ ಕುತ್ತು
ಪಾರದರ್ಶಕದೊಡಲು ಹೊಳೆಯುತಿರಲು
ಗಾಳಿ ಬೀಸಿದೆಡೆಗೆ ಎಲೆಯು ತಲೆದೂಗಿತು.

ಮುಂಜಾನೆ ರವಿಕಿರಣ ನುಸುಳಿ ಬರಲಲ್ಲಿ
ಮಿಂಚುಗಳ ತೇರು ಮೈತುಂಬಿ ಮಿಂಚಿತ್ತು
ಹಣತೆಗಳ ಆರತಿ ನಯವಾಗಿ ಬೀಸುತಿರೆ
ಬಿರುಗಾಳಿಯ ಶಾಪಕೆ ಆರದಿರಲಿ ಬೆಳಕು.

ಬೆಳಕಿತ್ತ ಕಿರಣಗಳು ಬಿಸಿಯೇರಿದಂತೆ
ಮೆಲ್ಲಗೆ ಹನಿಗಳು ಕರಗಿ ಕಾಣೆಯಾಗುವವು
ನೆರಳಲ್ಲಿ ಅಡಗಿದ್ದ ಹನಿಗಳುರುಳಿ ಬಿದ್ದವು
ಮತ್ತದೇ ಹನಿಗಳಿಗೆ ಎಲೆಗಳು ಕಾದಿದ್ದವು.

ಧನ್ಯತಾಭಾವ ಮೈತುಂಬಿಕೊಂಡಾಗ
ಅಂತರಾಳಕೆ ಹಬ್ಬದನುಭವದ ಕ್ಷಣವಾಗ
ಮತ್ತೆ ಬರುವನೆಂದೋ ಅತಿಥಿ ಮನೆಗೆ
ಮುತ್ತಿಟ್ಟು ಮೈ ಮೇಲೆ ಮಿಂಚಿ ಬೆಳಗಲು?

Jun 20, 2008

ಹನಿಗಳು – 2*

- 1 –
ಎದುರು ಮನೆ ಹುಡುಗಿಗೆ
ಹೊಡೆದರೆ Sight ?
ಖಂಡಿತ ಸಿಗುವುದೊಂದು
Site!

- 2 –
ಹಗಲಲ್ಲಿ ನಡೆಯುತ್ತೆ
ಬೈಟು
ಸಂಜೆಗೆ ಆಗಲೇ ಬೇಕು
ಟೈಟು.

- 3 –
ಗೆಳತಿಯಾದರೆ
ಗರುಡ ಮಾಲ್
ಗೆಳೆಯನಾದರೆ
ದರ್ಶಿನಿ ಹೋಟೆಲ್

- 4 –
ಕಾಸಿದ್ದರೆ ಫೋರಮ್
ಇರದಿದ್ದರೆ ಬರೀ ರಮ್

- 5 –
ಗೆದ್ದವರಿಗೆ ಗದ್ದುಗೆ
ಬಿದ್ದವರು ಬೀದಿಗೆ.

- 6 –
ಮನೆಯಲ್ಲಿ ಅವಳದೇ
ಕಾರುಬಾರು
ನನಗುಳಿದಿರುವುದು
ಬರೀ ಕಾರು, ಬಾರು.

Jun 17, 2008

ಇಂತಿ

ಇಂತಿ ನಿನ್ನವಳೆನ್ನುವ ಉಸಿರೆ
ಕಹಿಯಾದರು, ಸಿಹಿಯಾದರು
ಇತಿಮಿತಿಗಳೇ ನಿತ್ಯದುಸಿರು
ಹಸಿರಾಗುವ ಹಂಬಲ ಸಹಜವೆ

ಭಾರವಾದುದೇನೋ ಆ ಹೊರೆ
ಸ್ಥಿಮಿತ ಹಿಡಿತದಲ್ಲಿರುವವರೆಗೆ
ಬಿಡಿಸಲಾಗದ ಗಂಟುಗಳೆಷ್ಟೋ
ಅದುಮಿಟ್ಟುಕೊಳ್ಳುವ ಬಯಕೆಗೆ

ದೂರ ಪಯಣವಿದು ನಲ್ಲೆ ನಡೆದೇ
ಸಾಗಬೇಕು ಜೊತೆಗಿದ್ದವರೆಲ್ಲರು
ಇರುವವರೆಗೆ ಮಾತ್ರ ಸೀಮಿತ
ಊಹೆಗೂ ಎಟುಕದ ಹಾದಿಯಲ್ಲಿ

ಕಟುಕರಿಗೇನೂ ಕೊರತೆ ಇರದಿಲ್ಲಿ
ಮುಗ್ಧರಾದವರು ಬೀಳುವರು ನೇರ
ಹೊಂಚುತಿಹ ಹೆಬ್ಬುಲಿಯ ಬಾಯಿಗೆ
ತರತರದ ರುಚಿ ನೋಡುವ ಚಪಲಕೆ

ನೀನು ನನ್ನವಳಾಗುವುದಕೆ ಮುನ್ನ
ಮುಖ್ಯ ನೀನು ನಿನ್ನವಳಾಗುವುದು
ನೀನು ನಿನ್ನವಳಾಗಿ ನನ್ನವಳಾಗು
ಆಗ ಹಸನಾಗುವ ಪಯಣ ನಮ್ಮದು

Jun 16, 2008

ಅಲಾರಮ್ ಬೆಲ್ಲು

ಮೊಬೈಲ್ನಲ್ಲಿ ಅಲಾರಮ್ ಬೆಲ್ಲು ನಿರೀಕ್ಷಿಸಿದಂತೆ
ರಿಯಾಯಿತಿ ತೋರದೆ ಸದ್ದು ಶುರು ಮಾಡಿ
ಪ್ರತಿ ಹತ್ತು ನಿಮಿಷಕ್ಕೊಮ್ಮೆ ಸರದಿಯಂತೆ
ಬಾರಿಸುವುದು ಮುಂದುವರೆಸಿತ್ತು

ಸೋಮವಾರದಿಂದ ಶನಿವಾರದವರೆಗೆ
ಸೂಚಿಸಿದ ಸಮಯಕ್ಕೆ ಸರಿಯಾಗಿ
ದಿನವು ಎಬ್ಬಿಸುವ ಜವಾಬ್ದಾರಿ ಹೊತ್ತು
ಪ್ರತಿವಾದ, ಪ್ರತಿರೋಧವ ತೋರದೆ

ಇಂದೇಕೋ ಪ್ರತಿಕಕ್ಷಿಯಂತೆ ಗುಡುಗುತ್ತಿದೆ
ಪ್ರತಿಕಾರ ಪಡೆದಂತೆ ಬೀಗುತ್ತಿದೆ
ಪ್ರತಿಕೂಲ ಪರಿಣಾಮ ಬೀರಿ
ತನ್ನ ಪ್ರತಾಪ ಪ್ರಕಟಿಸುತ್ತಿದೆ

ನಿನ್ನೆ ಮುಂಜಾನೆ ಶುರುವಾದ ಕದನವಿದು
ಸಂಜೆ ತಾರಕಕ್ಕೇರಿ ಕುದಿಯುತ್ತಲೇ ಇತ್ತು
ಅಲ್ಪವಿರಾಮ ವಿಶ್ರಾಂತಿಗೆ ಮೀಸಲಿಟ್ಟು
ಮತ್ತದೇ ವೇಗಕ್ಕೆ ಚಾಲನೆ ನೀಡುತ್ತಿತ್ತು

ಇಂದು, ಎಂದಿನಂತೆ ಅದೇ ಆರು ಘಂಟೆಗೆ
ತೆರೆದ ಬಾಯಿಗೆ ಮುಚ್ಚುವ ಸೂಚನೆಯಿಲ್ಲ
ತಾಳ್ಮೆ ಪರೀಕ್ಷೆ ಮಾಡುತ್ತಿದೆ ಮಾಡಲಿ
ಇದೊಂದು ಅವಕಾಶವೇ ಸರಿ ನೋಡೋಣ

ಅದರ ಬಾಯಿ ಮುಚ್ಚುವ ಸ್ಥಿತಿಯಲ್ಲಿರಲ್ಲಿಲ್ಲ
ಜೊತೆಗೆ ಸ್ವಾಭಿಮಾನ ಅಡ್ಡಗಾಲಾಕಿತ್ತು
ಏಕೆಂದರೆ ಆ ಬಡ್ಡಿ ಮಗಂದು ಮೊಬೈಲು
ಆವಳ ದಿಂಬಿನಡಿಯಲ್ಲಿ ಬೆಚ್ಚಗೆ ಅಡಗಿತ್ತು

Jun 15, 2008

ಬೆಳಕರಿಯದ ಊರು

ಎಂದೂ ಬೆಳಕರಿಯದ ಊರು
ಕಗ್ಗತ್ತಲದೇ ಕಾರುಬಾರು
ಎಲ್ಲವೂ ಹೊಂದಿಕೊಂಡಂತೆ
ಭಾಸವಾಗುವುದು ಸುಳ್ಳಲ್ಲ

ದೂರಲು ಕಾರಣಗಳಿದ್ದಂತೆ ತೋರದು
ಬೆಳಕುಂಡವರಲ್ಲ, ಕಂಡವರಲ್ಲ
ಮುಗ್ಧರೆಂದು ಕೈ ತೊಳೆದುಕೊಂಡರೆ ಎಡವಿದಂತೆ
ಹೊಂದಾಣಿಕೆ ಬಲವಾಗಿ ಬೇರೂರಿದೆ

ಒಮ್ಮೆ ಇಲ್ಲಿ ಬೆಳಗಾದರೆ
ಬೆರಗಾಗುವುದು ಖಂಡಿತ
ಏರುಪೇರಾದರೂ ಆಗಬಹುದು
ಒಲಿತು, ಕೆಡುಕಿನ ಪ್ರಶ್ನೆ ನಂತರ

ಆರೋಪ, ಪ್ರತ್ಯಾರೋಪಗಳ
ಜಾಗವಿದಲ್ಲ, ಎಲ್ಲ ಜಾಣ ಕುರುಡ, ಕಿವುಡರೆಂಬುದು
ನಿಜವಲ್ಲ, ನಡೆಸುವವರು ಕೆಲವರಾದರೆ
ನಡೆಸಿದಂತೆ ನಡೆವವರೇ ಎಲ್ಲರು

ಬೆಳಕು ಬೇಕೆಂದು ಕೇಳುವವರು ವಿರಳ
ಅದು ಯಾರ ಕಿವಿಗೂ ಬಿದ್ದಂತಿಲ್ಲ
ಅನುಕೂಲ ಸಿಂಧು ನಿಯಮವನ್ನು
ಕಟ್ಟುನಿಟ್ಟಾಗಿ ಪಾಲಿಸುವವರೆಲ್ಲ

ಇಲ್ಲಿ ಬೆಳದಿಂಗಳಿದೆ, ಅದು ಕ್ರಮೇಣ ಕರಗಿದಂತೆ
ಅಮಾವಸ್ಯೆಯ ಆಗಮನವೂ ನಡೆಯುತ್ತದೆ
ತಮ್ಮ ಸರದಿಯಂತೆ ಬಂದು ಹೋಗುತ್ತಿರತ್ತವೆ
ಆದರೆ ಬೆಳಗಾದಂತೆ ಎಂದೂ ಅನ್ನಿಸಲಿಲ್ಲ

Jun 13, 2008

ಬೇಸರದ ಕಾಣಿಕೆ

ಅಂದು ತಡರಾತ್ರಿ
ಬಿದ್ದ ಆ ಸುಂದರ ಕನಸು
ತಡವಾಗಿದ್ದರೂ ತಡೆದಿತ್ತು
ಆರು ಘಂಟೆಗೆ ಅಲಾರಮ್ ಬೆಲ್ಲು

ಒಂದಿರುಳು, ಹಗಲು
ಜೊತೆಗಿರಲು ಅವಳು
ಅವಳಾಳದ ಇರುಳು, ಹಗಲು
ಸಾಧ್ಯವೆ ಅರಿಯಲು

ಆ ಕನಸು, ಆ ನನಸು
ಕನಸೋ, ಇಲ್ಲ ನನಸೋ
ಅವಳು ಬರಲಿಲ್ಲ ಮತ್ತೆ
ಆ ಕನಸಿನಂತೆಯೇ

ಅವರ ನೆನಪು ಮಾತ್ರ
ಕಾಡುತಾ ಕಾಯುತ್ತಿದೆ
ಅವರಿಗಾಗಿ ಮತ್ತೆ ಮತ್ತೆ
ಇದಕ್ಯಾವುದೋ ನಂಬಿಕೆ

ಆ ಮಧುರ ಕ್ಷಣಗಳು
ಅತ್ಯಮೂಲ್ಯ ಜೀವಕೆ
ಅನುಭವಿಸಿದ ಮನವು
ಮತ್ತೆ ಹಂಬಲಿಸಿತ್ತು ಅದಕೆ

ಆ ಇರುಳು, ಹಗಲು
ಆ ಕನಸು, ನನಸು
ದಿನ ಕಾಣುವ ಬಯಕೆಗೆ
ಬೇಸರದ ಕಾಣಿಕೆ

Jun 12, 2008

ಅಂತರಾಳದಲ್ಲೊಂದು

ಅಂತರಾಳದಲ್ಲೊಂದು ಮನೆ
ಆಗಲೇ ಕಟ್ಟಿದೆ
ನಂತರ ನಾನೊಂದು
ನಿವೇಶನ ಹುಡುಕಿದೆ

ತಳಪಾಯ ಬೇಕಲ್ಲವೆ
ಒಂದು ಕಡೆ
ಗಟ್ಟಿಗೆ ತಳವೂರಲು
ಅಲ್ಲಲ್ಲಿ ಅಲೆಯದಿರಲು

ಇಟ್ಟಿಗೆ ಬೇಕೇ ಬೇಕು
ಮನೆ ಕಟ್ಟಲು
ಅದಕೆ ಕಟ್ಟಿಗೆಯ
ಕಿಟಕಿ, ಬಾಗಿಲು

ಹಿಡಿದಿಡಲು ಅಲುಗಾಡದೆ
ಅವರಿಗೆ ಬೇಕಲ್ಲವೆ
ಸಿಮೆಂಟು, ಮರಳು
ಇವರಿಗೆ ಸಾಕಷ್ಟು ನೀರು

ತದನಂತರವಲ್ಲವೆ
ಒಳ, ಹೊರ ವಿನ್ಯಾಸ
ಅಭಿರುಚಿಗೆ ತಕ್ಕ ಬಣ್ಣ
ಒಳನೋಟ, ಹೊರನೋಟ

ಅವಸರ, ಆವೇಶದಿಂದ
ಆಡುವ ಆಟ ಇದಲ್ಲವಲ್ಲ
ಮುದ್ದು ಮಗುವಿಗೆ ಒಂಬತ್ತು
ತಿಂಗಳು ಕಾಯಲೇ ಬೇಕಲ್ಲ

Jun 11, 2008

ಅಲ್ಲಿಗೆ ಹತ್ತಿರ

ಅಲ್ಲಿಗೆ ಹತ್ತಿರ ಇಲ್ಲಿಗೆ ದೂರ
ಬಂದು ಹೋಗುವ ನಡುವಿನ ಅಂತರ
ನಾನಾ ಅವತಾರ
ಇದುವೇ ಇಲ್ಲಿನ ಚಮತ್ಕಾರ

ಬಿದ್ದ ಕ್ಷಣದಿಂದ
ಬಿಡುವ ಕ್ಷಣದವರೆಗೂ
ತಿಳಿಯದಾಗಿದೇ ಈ ಸಾಗರ
ತಿಳಿಸಲಾಗದೇ ಶಂಕರ

ಪಡೆದುದೆಲ್ಲಾ ಪಡೆಯುವವರೆಗೆ
ಪಡೆದ ಮೇಲೆ ಬೇರೆಯೆಡೆಗೆ ,
ಬಿಟ್ಟಮೇಲೆ ಬೇರೆಯವರಿಗೆ
ಪಡೆದು ಪಡೆಯದೆ ಪಡೆದೆನೆಂಬುವೆ
ಪಡೆದುದೇನೋ ನರಹರ

ದಿನವು ಹತ್ತಿರ ದಿನವು ದೂರ
ದೈತ್ಯನಾಗುವ ಬಯಕೆ ಭಾರ
ನಾಳೆ ನಾಳೆಗಳಾಚೆ ಬಾರ
ಇರುವುದಿಂದೇ ನಿಜವೊ ಶೂರ

ದೀನ ದಾನವ ದೇವನಾಗು
ದಣಿದ ದೇಹಕೆ ದಾಸನಾಗು
ಇಹದ ಪರಿಗಳ ಅರಿತು ಅರಸನಾಗು
ಅಗು ನೀನು, ನೀನು ನೀನಾಗು

Jun 10, 2008

ಕ್ರಿಯೆ

ಕಳ್ಳಬಟ್ಟಿಗೆ ಕುಡುಕರ ಸಂಹಾರ
ಬಾಂಬ್ ಬ್ಲಾಸ್ಟ್ ಐವತ್ತು ಡೆತ್
ತಂದೆ ಮಗಳ ಕೊಂದ
ಪ್ರಿಯಕರನ ಜೊತೆ ನಟಿ
ಕತ್ತರಿಸಿದಳು ಅವನ ಮುನ್ನೂರು ಚೂರು
ಎಸೆದು ಸುಟ್ಟರು ಹಚ್ಚಿ ಪೆಟ್ರೋಲು
ಅಲ್ಲೊಬ್ಬ ಕುಡಿದು ಮಂದಿಯ ಮೇಲೆ
ಹತ್ತಿಸಿದ ಕಾರು
ಗುಂಡು ನಿರಾಕರಿಸಿದ ಕಾರಣ
ಮತ್ತೊಬ್ಬ ಗುಂಡ್ಹಾರಿಸಿ ಕೊಂದ ಅವಳ ,
ತಂಗಿಯ ಪ್ರೀತಿಸಿದವನ ಖೂನಿ
ಪ್ರೀತಿ ನಿರಾಕರಿಸಿದ್ದಕ್ಕೆ ಇಲ್ಲೊಬ್ಬ
ಎರಚಿದ ಆಸಿಡ್ ಅವಳ ಮುಖಕ್ಕೆ

ತರಕಾರಿ ಹಚ್ಚುತ್ತಿದ್ದಳು ಆಕೆ
ಹವಣಿಸುತ್ತಿದ್ದನವ ಅಲ್ಲೇ ಬೆಳಗಿನಿಂದ ಜೊತೆಗೆ
ಮಾಂಸದಂಗಡಿಯಾತ ಮೂಳೆಗಳ
ಕತ್ತರಿಸುತ್ತಿದ್ದ ಎಂದಿನಂತೆ ,
ಭಿನ್ನ ವ್ಯವಹಾರ, ನಿಗೂಢತೆಯ ಆಗರ
ನಡೆದದ್ದು, ನಡೆಯ ಬೇಕಾದುದು
ನಡೆಯುತ್ತಲೇ ಇತ್ತು

ಪಟ್ಟಿ ಬೆಳೆಯುತ್ತಲೇ ಇದೆ
ಆದಿ, ಅಂತ್ಯ ತಿಳಿಯದೆ
ಹಿನ್ನಲೆಗಳು ಹಲವಾರು
ಮನಸು ಸ್ಥಿಮಿತ ಕಳೆದುಕೊಂಡ ಕ್ಷಣ
ನಿರೀಕ್ಷೆ ಹುಸಿಯಾದಾಗ, ಗುಮಾನಿ ಯಾರಮೇಲೆ
ಬೇಲಿಯೆದ್ದು ತಿರುಗಿಬಿದ್ದಾಗ
ಕಾರಣ ಕ್ಷುಲ್ಲಕ, ಕ್ರಿಯೆ ಭಯಾನಕ
ಅನಾಯಾಸವಾಗಿ ಹಾಡ ಹಗಲೆ
ಜನರ ಸಮಕ್ಷಮದಲೆ ನಡೆದಿತ್ತಂದು ಕೊಲೆ
ಅಸಮಾಧಾನ, ಆತಂಕ ಗಿರಕಿ ಹೊಡೆಯುತ್ತಿವೆ
ಯಾರ ನೆತ್ತಿಯ ಮೇಲೆ, ಯಾವಾಗ ,
ಏಕೆ, ಹೇಗೆ ಬೀಳುತ್ತದೆ ಕತ್ತಿ
ಬಿದ್ದ ನಂತರ ಸುದ್ದಿ

ಪ್ರಕರಣ ದಾಖಲು, ಇನ್ವೆಸ್ಟಿಗೇಷನ್ ಮೊದಲು
ಸಾಕ್ಷಿಗಳ ಹುಡುಕಾಟ, ಆರೋಪಿಗಳ ಪತ್ತೆ ,
ಬಂಧನ, ಭೇಟಿ, ಬಿಡುಗಡೆ ಮತ್ತೆ
ಅದೇ ಆಟ ಶುರು ,
ಈಗ ದೊಡ್ಡ ಮಟ್ಟದಲ್ಲಿ
ಚದುರಂಗದಾಟಕೆ ಕಳೆದು ಹೋದವರೆಷ್ಟೋ
ಮಂದಿ, ಆಡಿಸುವವರ ಆಟ
ನಡೆಯುತ್ತಲೇ ಇದೆ ನಿಲ್ಲದೆ
ವ್ಯವಸ್ಥೆ ಜನರ ಅಣಕಿಸುತ್ತಲೇ

Jun 6, 2008

ಚಕ್ರ

ಚಕ್ರ ತಿರುಗುತ್ತಲೇ ಇತ್ತು
ತದೇಕಚಿತ್ತವಾಗಿ ನಿಲ್ಲದಂತೆ
ಅದುವೇ ಅದಕೆ ಗೊತ್ತಿದ್ದ
ಕಾರ್ಯ, ಕರ್ಮ, ತತ್ವ ,
ತರ್ಕ, ತಪಸ್ಸು ಎಲ್ಲವೂ ,
ದಣಿವು, ದಾಹವೇನೂ
ಇದ್ದಂತಿರಲಿಲ್ಲ ,
ಮುಖಭಾವ ನಿರ್ಲಿಪ್ತ, ನಿಶ್ಚಲವಾಗಿ
ಊಹೆಗಳಿಗೆ ಮೀಸಲಿಟ್ಟಂತೆ
ಇತಿಹಾಸಕಾರನಿಗೊಂದು ,
ಕವಿಗೊಂದು ಮುಖ ,
ವಿಜ್ಞಾನಿಗೊಂದು, ಧರ್ಮದರ್ಶಿಗೆ ,
ಹೀಗೆ ಕ್ಷೇತ್ರಾವಾರು ಅವರವರ
ಸಾಮರ್ಥ್ಯಕ್ಕೆ ತಕ್ಕಂತೆ
ಭಿನ್ನ ಉತ್ತರಗಳಿದ್ದರೂ
ಇನ್ನೂ ಪ್ರಶ್ನೆಗಳು ಬಹಳ ಉಳಿಸಿ
ಅದಕಿರಲಿಲ್ಲ ಯಾವ ಚಿಂತೆ
ಎಲ್ಲವೂ ನಮಗೇ ಬಿಟ್ಟಂತೆ
ಉದಾರ ಮನೋಭಾವವೋ ,
ಉದಾಸೀನವೋ ಗೊತ್ತಿಲ್ಲ
ನೆಗೆಯುತ್ತಿದ್ದರು ಕಪ್ಪೆಗಳಂತೆ ,
ನಾಯಿ, ನರಿಗಳಂತೆ ಬೊಗಳುತ್ತ
ಕರುಣೆ, ಸಹನೆ, ಸಂಯಮ
ಮರೆತಂತೆ ,
ಅಗಾಧ ಭಾರ ಹೊತ್ತು
ಇಳಿಸಲೂ, ಹೊರಲೂ
ಆಗದಂತೆ
ಚಕ್ರ ಸುತ್ತುತ್ತಲೇ ಇದೆ
ನಿಶ್ಚಿಂತನಾಗಿ, ನಿರಾಳವಾಗಿ ,
ನಿರಮ್ಮಳವಾಗಿ ಹಾಗೇ ...
ತಂತ್ರಜ್ಞಾನ, ವಿಜ್ಞಾನ ,
ವೈಚಾರಿಕತೆ, ಪುರಾವೆ ,
ಚಿಂತನೆ, ಮಂಥನ ,
ತರ್ಕ, ವಾದ-ವಿವಾದಗಳ
ಸೃಷ್ಠಿಸಿದವರು ಯಾರೋ
ತನಗರಿವಿಲ್ಲದಂತೆಯೇ
ಮುಂದುವರೆಸಿದೆ ಹಾಗೇ ...
ಅದೇ ಶೃತಿ ಲಯದಲ್ಲಿ
ರಾಗ ತಾಳಗಳರಿವಿರದೆ
ಯೋಗ ಭೋಗಗಳ ನೋಡುತ
ಹಸಿವು, ನಲಿವುಗಳಿಗೆ ಪ್ರತಿಕ್ರಿಯಿಸದೆ
ಬಡವ, ಬಲ್ಲಿದರಿಗೆ ,
ಜಾತಿ, ಮತಗಳಿಗೆ
ಯಾವುದೇ ಉತ್ತರ ನೀಡದೆ
ತನ್ನಷ್ಟಕ್ಕೆ ತಾನೇ ಜೊತೆಯಾಗಿ
ಚಕ್ರ ಸುತ್ತುತ್ತಲೇ ಇದೆ
ನಿಲ್ಲದೆ ಎಂದಿನಂತೆ

Jun 4, 2008

ದೊಡ್ಡಾಟ - ದುಡ್ಡಾಟ

ಸಣ್ಣಾಟವಲ್ಲವೋ ಗೆಳೆಯ
ಘಟಾನುಘಟಿಗರು ಕಣದಲಿ
ದಶಕಗಳಿಂದ ಮೊಹರೊತ್ತಿ
ಪ್ರತಿಷ್ಠೆ ಪಣಕ್ಕಿಟ್ಟವರಿವರು

ವ್ಯಕ್ತಿತ್ವದ ದ್ವಂದ್ವತೆ ಬೆಟ್ಟದಷ್ಟು
ಅಷ್ಟೇ ಮಟ್ಟಕ್ಕೆ ಹಣವನಿಟ್ಟು
ಜಾತಿ ಧರ್ಮದ ನಶೆಯೇರಿಸಿ
ಬಿಟ್ಟಿ ಹೆಂಡ ಹಂಚಿದವರು

ಚಂದುರಂಗದಾಟವಲ್ಲವೋ
ಮೌಲ್ಯ, ಸಿದ್ಧಾಂತ, ಬದ್ಧತೆ
ಮುಖವಾಡ ಹೊತ್ತು
ಸ್ವರ್ಧೆಗೆ ಸೈ ಎಂದವರು

ಜನನಾಯಕರಿವರಲ್ಲವೋ
ಹಣವಿಟ್ಟು ಪಣತೊಟ್ಟು
ಜನರ ಮತ ಖರೀದಿಸಿ
ನರ ಭಕ್ಷಕರಾದವರು

ಜನ ಸೇವೆ ನೆಪವೊಡ್ಡಿ
ಜನಾರ್ಧನನಾಗುವವರೆಗೆ
ತಲೆಬಾಗಿ ದಾಹಕೆ
ತಾವಿರಲು ಮಾರಾಟಕೆ

ಶ್ರೀಮಂತಿಕೆ ವಿಕೃತ ಪ್ರದರ್ಶನ
ಹಣವೇ ಜನ ಗಣ ಮನ
ಲೆಕ್ಕಾಚಾರದ ವ್ಯವಹಾರ
ಗೆದ್ದವರೇ ಅಪಾರ

ದೇವ ದೇವತೆಯರ ದರ್ಶನ
ಜಾತಿ ಮಠಾದೀಶರಿಗೆ ನಮನ
ಜ್ಯೋತಿಷಿಗರಿಗೊಂದು ಸವಾಲು
ಒಳಗೊಳಗೇ ಎಲ್ಲ ಡೀಲು

ಚಿಕ್ಕವನಿದ್ದಾಗ ನೆನಪಿದೆ
ಆಕೆಯ ಕೈಗೆ ಹತ್ತು ರುಪಾಯಿ
ನನ್ನ ತಲೆಗೊಂದು ಕುಲಾಯಿ
ಮೇಲೆ ಕೈ, ಇಲ್ಲವೆ ನೇಗಿಲು

ಹಿರಿಯರಿಗೆ ಇತ್ತಲ್ಲ ಸರಾಯಿ
ಮಕ್ಕಳ ಜೋಬಿಗೆ ಕೈ ಪತ್ರ
ತಮ್ಮಟೆ ಜೊತೆಗೆ ಪ್ರಚಾರ
ಸದ್ಯಕೆ ಅಷ್ಟೇ ನೆನಪು

ಭಿನ್ನವಿಲ್ಲ ಈಗಲೂ ಅದೇ
ಹತ್ತು ರೂ ಸಾವಿರ ಆಗಿದೆ
ಸೀರೆ ಸೇರಿದೆ, ಪ್ಯಾಕೆಟ್
ಜೊತೆಗೆ ಬಾಟಲ್ ಬಂದಿದೆ

ಬದಲಾಗಿರುವುದು ಕೇವಲ
ನನ್ನ ವಯಸ್ಸಷ್ಟೆ, ಆಗ
ಹತ್ತು ಈಗ ನಲವತ್ತು
ಆಟದೊಳಗಾಟ ಮುನ್ನಡೆದಿತ್ತು

ಸ್ಪರ್ಧೆ

ಭಾರಿ ಉದ್ದಗಲದ ಸ್ಪರ್ಧೆ
ಕದ್ದೆಲ್ಲರ ನಿದ್ದೆ
ಹಳ್ಳಿಗೂ, ಡೆಲ್ಲಿಗೂ
ಕೊಟ್ಟೊಂದು ಒದೆ

ವಿಲ ವಿಲ ವಿಲ ಒದ್ದಾಡುತ
ಇದೀಗ ದಡಕೆಸದ ಮೀನಂತೆ
ನೆಗೆದು ಬಿದ್ದರೇನಂತೆ
ನಗದು ಸಿಗುವುದಾದರೆ

ಯಾವ ಪರಿ ರಿಯಾಯಿತಿ
ಇಲ್ಲಿ ಸಲ್ಲದು
ಸಾಲ ಬೇಕೆ ಸಿಗುವುದು
ಸುಲಿಗೆ ಆನಂತರವಷ್ಟೆ

ಮಾಹಿತಿಗಷ್ಟೇ, ಖಂಡಿತ
ಇಲ್ಲಾ ಇಲ್ಲಿ ಸಾಲಮನ್ನಾ
ಕೇವಲ ರಾಜಕೀಯ
ಆಟವಷ್ಟೇ

ಸುಳಿಗೆ ಸಿಕ್ಕವರೆಷ್ಟೋ
ಲೆಕ್ಕಕೆ ಸಿಗದವರು
ಮುಖಭಾವದಿಂದೇನು
ತಿಳಿಸದವರು

ಕಾಲಹರಣ ಕಾಲದಲ್ಲಿ
ಆಗ ಕನಸು ಕಾಣಲು
ಸಹ ಸಮಯವಿತ್ತು
ಸ್ಪರ್ಧೆಗೂ ಸೀಮಿತ

ಕಾರ್ಯಕ್ರಮಗಳ ಮಂಥನ
ಕಾರ್ಯರೂಪದಲಿ ಮಗ್ನ
ಕನಸಿಗೆಲ್ಲಿ ಸಮಯ
ನಿದ್ದೆ ಕಾಣೆಯಾಗಲು

ವೇಗ ಹೆಚ್ಚಾದಂತೆಯೆ
ನಾಡಿ ಮಿಡಿತ ಕೂಡ
ಹೇಗೆ, ಎಲ್ಲಿ, ಏಕೆ ಎಂಬ
ಪ್ರಶ್ನೆಗಳು ಮೌನ