Jun 26, 2009

ಪ್ರಸಕ್ತ ಚಿತ್ರಣಕ್ಕೊಂದು ಕನ್ನಡಿ

ಎಷ್ಟೋ ಕೊರತೆಗಳಿರುವುದು ಕಂಡಿದ್ದೇನೆ
ಅವನ್ನು ಪಡೆಯಲಿಕ್ಕೆ, ದುಬಾರಿ ಬೆಲೆ.
ಜನಸಾಮಾನ್ಯರು ಅತ್ತಿತ್ತ ಪರದಾಡುತ್ತಾರೆ
ಊಟ, ನೀರು ಮತ್ತೆ ನೆಲೆಗಾಗಿ.

ಪ್ರಾಮಾಣಿಕರಿಗೆ ಉಸಿರುಗಟ್ಟುವ ಸನ್ನಿವೇಶ
ನರಿಗಳಂಥವರು ತಮ್ಮ ತಿಜೋರಿ ತುಂಬಿಸುತ್ತಾರೆ
ಸುಳ್ಳು ಪ್ರಮಾಣ ಪತ್ರ ನೀಡಿ ಪ್ರಭಾವಿಗಳಾಗುತ್ತಾರೆ
ಮಧ್ಯರಾತ್ರಿ ನಿದ್ದೆಗೆಟ್ಟು ಓದುವವರಿಗೆ ಕೇವಲ ವಯಸ್ಸಾಗುತ್ತದೆ.

ಕುತಂತ್ರಿಗಳು ಪರರ ಪರಿಶ್ರಮವನ್ನು ದೋಚುತ್ತಾರೆ
ಅಳಿದುಳಿದದ್ದು ಮಾತ್ರ ಪ್ರತಿಭಾನ್ವಿತರಿಗೆ ನೀಡುತ್ತಾರೆ
ಪರಿಣಾಮಕಾರಿ ಕೆಲಸಗಾರರನ್ನು ಹೊರಹಾಕುತ್ತಾರೆ
ಸೋಮಾರಿಗಳನ್ನು ಶ್ರೇಷ್ಟರೆಂದು ಬಿಂಬಿಸುತ್ತಾರೆ.

ಭ್ರಷ್ಟಾಚಾರ, ಕುತಂತ್ರಗಳಿಂದು ಸಹಜ ಸ್ವಾಭಾವಿಕವಾಗಿವೆ
ಅವರಿಗೆ ತಿರುಗಿ ಬಿದ್ದವರನ್ನು ನಿರ್ಣಾಮ ಮಾಡುತ್ತಾರೆ
ಉದ್ಯೊಗವಕಾಶಗಳು ತಮ್ಮ ಹೊಗಳು ಭಟ್ಟರಿಗೆ ಮೀಸಲು
ಸಾಮರ್ಥ್ಯ ಹೊಂದಿರುವವರನ್ನು ಕಡೆಗೆಣಿಸುತ್ತಾರೆ.

ಪ್ರಶಸ್ತಿಗಳೇನಿದ್ದರೂ ತಮ್ಮ ಅನುಯಾಹಿಗಳಿಗೆ ಮಾತ್ರ
ಉಳಿದವರಿಗೆ ಶಿಸ್ತುಕ್ರಮ ಕೂಡಲೇ ಜಾರಿಗೊಳಿಸುತ್ತಾರೆ
ಉಳ್ಳವರು ಮಾತ್ರ ಮತ್ತೂ ಶ್ರೀಮಂತರಾಗುತ್ತಾರೆ
ನಿಸ್ವಾರ್ಥ ಶ್ರಮಿಕರು ಮತ್ತೂ ಬಡವರಾಗುತ್ತಾರೆ.

ಹೆಗ್ಗಣಗಳಂಥಹ ಲಂಚಕೋರರಿಗೆ ಉತ್ತಮ ಅವಕಾಶ ಲಭ್ಯ
ಪ್ರಾಮಾಣಿಕರತ್ತ ಒಮ್ಮೆ ತಿರುಗಿ ನೋಡಲೂ ಸಹ ಹೇಸುತ್ತಾರೆ
ಬಡ್ತಿಯೆಂಬುದು ಕೆಲವರ ಪಿತ್ರಾರ್ಜಿತ ಆಸ್ತಿಯಂತೆ ಅನುಭವಿಸುತ್ತಾರೆ
ನೀತಿವಂತರಿಗೆ ಮಾತ್ರ ಹಿಂಬಡ್ತಿಯ ಕೊಡುಗೆ ನೀಡುತ್ತಾರೆ.

ಮೌಲ್ಯ, ನೈತಿಕತೆ ಎಂಬುದೆಂದೋ ಕಳೆದು ಹೋಗಿವೆ
ಅವನೀತಿವಂತರನ್ನೇ ಅತ್ಯುತ್ತಮರೆಂದು ಕೊಂಡಾಡುತ್ತಾರೆ
ಆದರೂ, ಅಲ್ಲಲ್ಲಿ ಸತ್ಯದ ಹಣತೆಗಳು ಇನ್ನೂ ಕಂಡುಬರುತ್ತವೆ
ಅವುಗಳನ್ನು ಉಳಿಸಿಕೊಳ್ಳದಿದ್ದರೆ, ಕೊಳೆಯುವುದಂತೂ ನಿಶ್ಚಿತ.

ಮೂಲ ಕವಿಯತ್ರಿ : ಚಿತ್ರ .ಜಿ. ಲೇಲೆ
ಕನ್ನಡಕ್ಕೆ : ಚಂದಿನ

No comments: