ವೈರಾಗ್ಯ, ವ್ಯಾಮೋಹಗಳು
ಹೊಳೆವ ಮೊಣಚು ಕತ್ತಿಗಳು
ಇವರ ಜೊತೆಗೆ ಸರಸ ತರವೆ
ಸಂಯಮವಿರಲಿ ಚಂದಿರ
ಒಣ ವಿದ್ವತ್ತಿನ ಪ್ರದರ್ಶನ ಎಲ್ಲೆಡೆ
ಹಿಂಸಾತ್ಮಕ ಪ್ರವೃತ್ತಿ ಹರಡುತಿರೆ
ಸಹನೆ, ಸಂಯಮ ಬತ್ತಿ ಹೋಗಿದೆ
ಒಡಲು ಸತತ ಉರಿಯುತಿದೆ ಚಂದಿರ
ಅಂತಃಕಲಹಗಳ ತೊರೆಯುತ
ಅಂತಃಕರಣದ ಶುದ್ಧೀಕರಿಸಿ
ಆತ್ಮಾನುಸಂಧಾನ ಅಳವಡಿಸಿ
ಆತ್ಮ ವಿಮುಕ್ತಿ ಪಡೆಯೊ ಚಂದಿರ
ಅನುಭವದ ಮನನ ಬಲುಮುಖ್ಯ
ಪ್ರಾಮಾಣಿಕ ಪ್ರಯತ್ನ ಅತ್ಯಗತ್ಯ
ಪ್ರತಿಫಲದ ನಿರೀಕ್ಷೆ ತೊರೆದಾಗ
ಖಚಿತ ಪ್ರಗತಿ ಚಂದಿರ
ಭವಿಷ್ಯದ ಲೆಕ್ಕಾಚಾರ ತೊರೆದು
ದುಗುಡ, ಆತಂಕಗಳನು ದೂಡಿ
ಭಾವುಕ ಕ್ಷಣಗಳ ತೆಕ್ಕೆಯಿಂದ
ಹಾರುವ ಹಕ್ಕಿಯಾಗೊ ಚಂದಿರ
ಸಮೃದ್ಧ ಜ್ಞಾನ ತಳಹದಿಯಿಂದ
ಸಮಗ್ರ, ಸ್ಪಷ್ಟ ನಿಲುವು ಸಾಧ್ಯ
ವಿಚಿತ್ರ ವಿನ್ಯಾಸವೆ ವಿಶಿಷ್ಟವಲ್ಲ
ವಿಚಾರ ಮಾಡೊ ಚಂದಿರ
ಪರಿಪೂರ್ಣ ಪುರುಷೋತ್ತಮನ್ಯಾರು ಇಲ್ಲ
ಪರಿಶುದ್ಧ ಪಂಚಾಮೃತ ದೊರೆಯುವುದಿಲ್ಲ
ಕಲುಷಿತಗೊಂಡು ಕಲ್ಮಷವಾಗಿದೆ ಎಲ್ಲವು
ಸರಿಪಡಿಸುವ ದಾರಿ ತೋರೊ ಚಂದಿರ
ಆತ್ಮಜ್ಞಾನದ ಜೊತೆ ಸಂವಾದದಿಂದ
ಪರಿಜ್ಞಾನ ನೀಡುವ ಸರಳತೆಯಿಂದ
ಪರಿಶುದ್ಧತೆ, ಪ್ರಮಾಣಿಕತೆಗೆ ಹತ್ತಿರ-
ವಾಗುವ ಸಾಧ್ಯತೆಯಿದೆಯೊ ಚಂದಿರ
ಭ್ರಮಾಲೋಕದಿಂದಿಳಿದು ಬಾರ
ಬೇಡದ ಉಪದೇಶ ನೀಡಬೇಡ
ನೈಜ ನಡತೆ ಹಿತವೊ ಶೂರ
ನಿನ್ನ ಗೆಳೆಯನಾಗುವ ಚಂದಿರ
ಖಚಿತ ನಿಲುವು ಸುಲಭವಲ್ಲವೊ
ಪ್ರಖರ ಖ್ಯಾತಿ ಕುರುಡು, ಕೃತಕ
ವಿಷಯದ ಆಳಕಿಳಿದು ವಿಚಾರಮಾಡು
ವಿವೇಚನೆ ಪಡೆಯುವೆ ಚಂದಿರ
May 13, 2009
ಮತ್ತೆ ಬರುವನು ಚಂದಿರ - 22
Subscribe to:
Post Comments (Atom)
2 comments:
ತುಂಬಾ ಇಷ್ಟವಾದವು ಕವನಗಳ ಸಾಲುಗಳು..... ನಿಮ್ಮ ಕವನ ಶೈಲಿ ಸಾಮಾನ್ಯರಿಗೊ ಅರ್ಥವಾಗುವಂತಿವೆ.
ಧನ್ಯವಾದಗಳು ಮೇಡಮ್.
ನಿಮ್ಮ ಪ್ರೋತ್ಸಾಹವೇ ನನ್ನ ಪ್ರೇರಣೆ.
-ಚಂದಿನ
Post a Comment