Feb 3, 2008

ನಡೆಸು ಪಯಣವನು

ವೇಗದಿಂದ ಸಾಗುತ್ತಿರುವವರು
ಯಾರ ಒಳಿತನು ಬಯಸದವರು
ರಭಸಕ್ಕೆ ನೀ ಸಿಲುಕಿ ನಲುಗದಿರು
ಕುರಿಮಂದೆ ಹಿಂದೆ ನೀ ಹೋಗದಿರು

ಇವರ ಹೊರನೋಟ ಬಲು ಆಕರ್ಷಕ
ಸಿಹಿ ನುಡಿಯ ಸುರಿಮಳೆ ಬರಿ ನಾಟಕ
ಸುಳಿಯದಿರು ಇವರ ಬಳಿ ಇರಲಿ ಎಚ್ಚರ
ಕೊಳೆತ ಮನಸಿನವರು ಹೋಗು ನೀ ದೂರ

ವಸ್ತುಗಳ ವ್ಯಾಮೋಹದಲಿ ಮುಳುಗಿರುವರು
ಈ ಸ್ಪರ್ಧೆಯ ವೇಗಕ್ಕೆ ಕೊಚ್ಚಿಹೋಗುವರು
ಕುರುಡು ಕಾಂಚಾಣದ ದಾಸರಾಗಿಹರು
ನೋಡು ಗ್ರಾಹಕೀಕರಣದ ಭೂತ ಹಿಡಿದವರು

ಮನುಜನ್ಮ ಅತ್ಯಮೂಲ್ಯ ತಿಳಿದಿರಲಿ ಗೆಳೆಯ
ಮರುಜನ್ಮ ಇಹುದೆಂದು ಯಾರು ಬಲ್ಲವರು
ವ್ಯರ್ಥ ಮಾಡದೆ ನಿನಗೆ ಸಿಕ್ಕ ಅವಕಾಶವನು
ಸಂತಸದಿ ದಿನ ದಿನವು ನಡೆಸು ಪಯಣವನು
*****

No comments: