ಸುಭದ್ರ ಕೋಟೆಯಲಿ ಬಂಧಿತನಲ್ಲ
ನನ್ನೊಂದಿಗೆ ಬೇರೊಬ್ಬರಾರಿಲ್ಲ
ಒಬ್ಬನಾದರೂ ಏಕತಾನತೆ ಕಾಡಿಲ್ಲ
ನೋವುಂಡ ನೆನಪು ನನಗಿಲ್ಲ
ಯಾವ ಕೊರತೆಯು ಕಾಣಲಿಲ್ಲ
ಪರರ ಚಿಂತೆಯ ಸುಳಿವಿಲ್ಲ
ನೂರೆಂಟು ಯೋಚನೆ ಕೊರೆದಿಲ್ಲ
ನೆಂಟರು ನನ್ನ ಬಳಿಗೆ ಬರಲಿಲ್ಲ
ಜೊತೆಗೆ ಸ್ನೇಹಿತರ ದಂಡಿರಲಿಲ್ಲ
ರಾಗ ದ್ವೇಷಗಳ ಪರಿಚಯವಿಲ್ಲ
ದೂರದ ಪಯಣ ಬೇಕಿರಲಿಲ್ಲ
ಋತುಮಾನಗಳ ರುಚಿಯುಂಡಿಲ್ಲ
ದುಷ್ಟಶಕ್ತಿಗಳ ಭಯವಿರಲಿಲ್ಲ
ಆಸೆಗಳ ಅಲೆಗಳು ತಟ್ಟಲಿಲ್ಲ
ಬಿರುಗಾಳಿಯ ವೇಗಕೆ ಎದರಿಲ್ಲ
ಹಗಲು ಇರುಳಿನ ಜಗವಲ್ಲ
ಮೆತ್ತನೆಯ ಬೆಚ್ಚಗಿನ ಹೊದಿಕೆಯಲಿ
ಸುಖದ ಸುಪ್ಪತ್ತಿಗೆಯಲಿ ಮಿಂದವನ
ನನ್ನೊಂದಿಗೆ ನಾ ನಕ್ಕು ನಲಿಯುತಿರಲು
ಕಾಲಮಿತಿಗೆ ಸೋತು ಹೊರಬರಲು
ಸಕಲವ ಕಾಣುವ ತವಕದಲಿ
ಕುತೂಹಲವೊಡೆದು ಕಣ್ಣುಬಿಡಲು
ಇಲ್ಲವುಗಳೆಲ್ಲ ಒಮ್ಮೆಗೆ ಧಾಳಿಯಿಡಲು
ಅನಿವಾರ್ಯತೆಯನರಿತು ಶರಣಾಗುವೆ
No comments:
Post a Comment