Feb 26, 2008

ಹಳ್ಳಿಯ ನೆನಪು

ಬೇಸಿಗೆ ರಜೆಗೆ ನಾವು ಬೇಟೆಗೆ ತೆರಳಿ
ಹೊತ್ತ ಬುತ್ತಿಯ ಮಧ್ಯಾಹ್ನಕೆ ಮುಗಿಸಿ
ದಿನದಲಿ ಅದೃಷ್ಟ ಪರೀಕ್ಷೆಯ ಮಾಡಿ
ದಣಿದ ನಂತರವೇ ಮನೆಕಡೆಗೆ ಮರಳಿ

ವರ್ಷ ಪೂರ ನಾವು ಕೂಡಿಟ್ಟ ಕಾಸನು
ಜಾತ್ರೆಯ ದಿನದಿ ಕಿಸೆಯಲಿ ಸೇರಿಸಿ
ಗೆಳೆಯರೊಡನೆ ಸಂಭ್ರಮದಿ ಹೊರಡಿ
ನಮ್ಮ ಸಂತಸಕೆ ಇಲ್ಲ ಯಾರ ಅಡ್ಡಿ

ಕಾಸಿನ ಆಟವಾ ಜಾತ್ರೆಯಲಿ ಆಡುತಾ
ಮಂಡಕ್ಕಿ, ಬೋಂಡ ಗಬ ಗಬ ಮುಕ್ಕುತಾ
ಸಂಜೆಗೆ ಕುಣಿತ, ನಾಟಕವಾ ನೋಡುತಾ
ಗೆಳೆಯರ ಜೊತೆ ಗಮ್ಮತ್ತಿನ ಮಾತಾಡುತಾ

ಗಿಡದಲಿ ಮಾಗಿದ ಸೀತಾಫಲದ ರುಚಿ
ಬೇಯಿಸಿದ ಅವರೆ, ಅಲಸಂದಿಯ ಮೆಲ್ಲುತಾ
ಸುಟ್ಟ ಕಡ್ಲೆ ಕಾಯಿಯ ಜೋರು ತಿನ್ನುತಾ
ಎಳೆ ಮುಸುಕಿನ ಜೋಳವಾ ಕಚ್ಚುತಾ

ನೀರೂರಿಸುವ ತಿನಿಸುಗಳು ಅಪಾರ
ಹಸೀ ಮಾವಿನ ಕಾಯಿಗೆ ಉಪ್ಪು ಖಾರ
ಕೆರೇಲಿ ಹಿಡಿದ ಮೀನಿನಮಸಾಲೆ ಸಾರ
ನಾಟೀ ಕೋಳಿಯ ರುಚಿ ಕಂಡವ ಶೂರ

ಅಡಿಗೆಗೆ ಕಟ್ಟಿಗೆ ಕಡಿದು ತರುವೆವು
ಸಗಣಿ ಹಾಯ್ದು ತಿಪ್ಪೆಗೆ ಸುರಿವೆವು
ದನ ಕರುಗಳಿಗೆ ಮೇವು ಕೊಡುವೆವು
ಗದ್ದೆಗೆ ಸೊಪ್ಪು ಕತ್ತರಿಸಿ ತುಳಿವೆವು

ಹುಣ್ಣಿಮೆ ದಿನ ಸಂಜೆ ಗುಡಿಯಂಗಳದಲಿ
ಸಾರಿಸಿ ರಂಗೋಲಿಯಿಂದ ಸಿಂಗರಿಸಿ
ಹುಡುಗಿಯರು ತಟ್ಟಿದ ರಾಗಿಯರೊಟ್ಟಿಗೆ
ಹುಡುಗರು ಧಾಳಿಯನಿಡುವರು ಒಟ್ಟಿಗೆ

ಶ್ರಾವಣ ಮಾಸದಿ ಹುಡುಗರಿಗೆ ಹುರುಪು
ಮೂರು ನಾಮವ ಎಳೆದು ಎಲ್ಲರ ಹಣೆಗೆ
ಆರತಿ ಕಂಬವನಿಡಿದು ಗೆಳೆಯರ ಜೊತೆಗೆ
ತಾಳವನೊಡೆದು, ಡೋಲಕ್ಕನು ಬಡಿದು

ಸುತ್ತಲಿರುವ ಎಲ್ಲಾ ಊರುಗಳನು ಸುತ್ತಿ
ರಾಗಗಳರಿಯದ ಭಜನೆಯಾ ಕಿರುಚುತ
ಎಲ್ಲರೂ ಕೊಟ್ಟ ರಾಗಿಹಿಟ್ಟು, ಅಷ್ಟೂ ಅಕ್ಕಿ
ಶೆಟ್ಟರ ಅಂಗಡಿಗೆ ಭಾರೀ ತುಟ್ಟಿಗೆ ಮಾರಿ

ಬಂದ ಹಣದಿ ಟೆಂಟಲಿ ಸಿನಿಮಾ ನೋಡಿ
ಉಳಿದ ಕಾಸನು ಮದ್ಯಂತರಕೆ ಮುಗಿಸಿ
ಮುಗಿದ ನಂತರ ಶುರು ಹರಟೆ, ಗಲಾಟೆ
ಮರಳಿ ಬರುವೆವು ಮನೆಕಡೆಗೆ ಓಡೋಡಿ

No comments: