Feb 26, 2008

ಹಕ್ಕಿ*

ಫಡಫಡಿಸಿ ರೆಕ್ಕೆಯ ಬಡಿಯುತಿಹ ಹಕ್ಕಿ
ಮೊನಚಾದ ಕೊಕ್ಕಿನಿಂದಿಟ್ಟು ಚುಕ್ಕಿ
ತವಕ ತಲ್ಲಣಗಳ ನಡುವೆ ನೆಟ್ಟಿರುವೆ
ನಿನ್ನ ವಾರೆನೋಟವನು ಯಾವಕಡೆಗೆ?

ಆಳದಾ ಬೇರುಗಳ ತಳಪಾಯದಲಿ
ಮೆಲ್ಲನೇ ಅಲ್ಲಿ ಮೇಲೆದ್ದ ಮರವನು
ನೆಲೆಯಾಗಿಸಿ, ಎಲ್ಲಿಂದಲೋ ಆಯ್ದು
ಪರಿಕರಗಳನೊಟ್ಟುಗೂಡಿಸಿ ಗೂಡಾಗಿಸಿದೆ.

ಜೊತೆಗಾರನನು ರಮಿಸಿ ಸರಸ ವಿರಸ
ವೇದನೆಗಳನನುಭವಿಸಿ, ಸಂತಾನ ಬೆಳೆಸಿ
ಮತ್ತದೇ ಗಾಳಿಯಲಿ ತೂರಾಡುತಾ ಹಾರಿ
ಬಾಳ ಚಕ್ರದಲಿ ತಿರುಗುತ್ತಾ, ತಡಕುತ್ತಿವೆ.

ಹುಡುಕುತಾ ಎಲ್ಲ ತಳಮಳಗಳ ಜೊತೆ
ಮನದಾಳದಲಿ ಮಿಡಿಯುತಾ ಮೀಟುತಾ
ತವಕದಲಿ ಯಾರನೋ ನೆನೆಯುತಿರುವೆ
ನೋವ ಮೀಟಿದವನ ಮರೆಯಲೆತ್ನಿಸುವೆ.

ಈ ಬದುಕಿನ ಪಯಣದಲ್ಲಿಟ್ಟು ಚುಕ್ಕಿ
ತಿರುಗಿ ನೋಡುವ ಬಯಕೆಯಲಿ ಬಿಕ್ಕಿ
ಮತ್ತೆ ಬಾರದೆಡೆಗೆ ಹಾರಿಹೋಗಿದೆ ಹಕ್ಕಿ.

No comments: