ಅ ಆ ಇ ಈ ಉ ಊ ಮೆಲುಕು
ಒಂದು ಎರಡು ಮೂರು ನಾಕು
ಕ ಕಾ ಕಿ ಕೀ ಕು ಕೂ ಕುಲುಕು
ಎರಡೊಂದ್ಲ ಎರಡು ಮಗ್ಗಿ ಸಾಕು
ಬೆಳಗಿನಿಂದ ಸಂಜೆವರೆಗೆ ಇದೇ ಪಾಠ
ಪಕ್ಕಾ ತರಲೆ! ಇದು ನಾನು ಪಡೆದ ಪಟ್ಟ
ಕೈ ತಿರುಗಿಸುವರು, ಕಿವಿಯ ಕೆಂಪಾಗಿಸುವರು
ಕೋಲನಿಡಿದು ಜೋರು ಹೊಡೆವ ಮಾಸ್ಟರು
ಗಂಟೆ ಹೊಡೆವ ಆ ಒಂದು ಕ್ಷಣಕೆ ಕಾದು
ಓ... ಅಂಥ ಕೋಣೆಯ ಹೊರಗೆ ಜಿಗಿದು
ಆಗದವನ ಅಂಗಿ ಹರಿದು ಜಗಳ ತೆಗೆದು
ನೆಗೆದು ಕುಣಿದು ಅಬ್ಬಾ! ಸಾಕಷ್ಟು ದಣಿದು
ಮತ್ತೆ ಸಂಜೆವರೆಗೆ ಮನೆಯ ಕಡೆಗೆ
ಅಮ್ಮ ಕೊಡುವ ತಿಂಡಿಗಿಟ್ಟು ಲಗ್ಗೆ
ಚಡ್ಡಿ ಸ್ನೇಹಿತರ ಜೊತೆ ಕತ್ತಲವರೆಗೆ
ಅಜ್ಜಿ ಹೇಳುವ ಕತೆ ನಿದ್ದೆ ಬರುವವರೆಗೆ
ಇದೇ ಪ್ರತಿ ದಿನದ ದಿನಚರಿ
ನಾನು ಕಳೆದುಕೊಂಡ ಅಚ್ಚರಿ!
ಕಾಡುವವು ಬಿಡದೆ ಪ್ರತಿಸಾರಿ
ನೆನಪಾಗಿ ನಗುವೆ ಹಲವು ಬಾರಿ
No comments:
Post a Comment