Feb 20, 2008

ಒಲವಿನಾ ರಥವೇರಿ

ಬಚ್ಚಿಡುವೆ ಭಾವಗಳನೇಕೆ ನೀ ಗೆಳತಿ
ಇರುವ ಒಲವನೀ ಪುಟ್ಟ ಹೃದಯದಲಿ
ಹುಚ್ಚು ಸಾಹಸ ತರವಲ್ಲ ನೆನಪಿರಲಿ
ಗೆಲುವು ನಿನದಾಗಲು ಸಾಧ್ಯವಿಲ್ಲ?

ಮೋಡ ಕವಿದ ಮಾತ್ರಕೆ ಭಯವೇ ಆಗಸಕೆ
ಸುರಿವ ಮಳೆಗಾಗಿ ನಾ ಮಾಡುವೆನು ಹರಕೆ
ಕವಿದ ಕಗ್ಗತ್ತಲಲಿ ಹೊಳೆವ ತಾರೆಯ ಹಾಗೆ
ಹುಣ್ಣಿಮೆಯ ಚಂದಿರ ನಾನಾಗುವಾ ಬಯಕೆ

ಮತ್ತದೇ ಆಟಕೇ ಬಿಂಕ ಬಿಡದೇ ಬೆಡಗಿ
ಕಂಡಿರುವೆ ನಿನ್ನೊಳಗೆ ಒಲವಿರುವ ಬಗೆ
ಮಂಕಾಗಿ ನೀ ಕುಂತು ಚಿಂತಿಸುವೆ ಏಕೆ
ನೆನಪಿನಾ ನದಿ ಹರಿಯುವಾ ವೇಗಕೆ ಸಿಲುಕಿ

ಮಳೆ, ಗಾಳಿ, ಚಲಿ, ಬಿಸಿಲಿಗೆದರುವನೇ ರವಿ
ದಿನವು ಮೂಡಣದಿ ಉದಯಿಸುವವನಿವ ಕವಿ
ಮುಳುಗಿ ತೇಲುವ ಆಟ ಹೊಸತಲ್ಲ ಅವನಿಗೆ
ಸರಸವಾಡುವ ದಿನವು ಭೂರಮೆಯ ಜೊತೆಗೆ

ವ್ಯರ್ಥ ಮಾಡದೆ ಕಾಲ ಒಳ ಮುಖವ ತೋರೆ
ಆಗೆನ್ನ ಪ್ರಾಣಸಖಿ ನೀನಾಗುವೇ ನಿತ್ಯಸುಖಿ
ಇಬ್ಬರೂ ಜೊತೆಗೂಡಿ ಒಲವಿನಾ ರಥವೇರಿ
ಇರುವ ಮೂರು ದಿನವೂ ನಗುವಿನಾ ರಸವೀರಿ

No comments: