Feb 25, 2008

ನನ್ನ ಗರತಿ

ಎಲ್ಲೆ ಮೀರಿದರೆ ನಲ್ಲೆ ಮುಖಭಾವ ಭಯವ
ತಿರುಗಿ ನೋಡಳವಳ ಕಳವಳದ ಕಲರವ

ಹೊಂದಿಕೆಯ ಸೂತ್ರದಿಂದ ಸೆಳೆವ ತರವ
ಮೌನದಲಿ ತೋರಿಸುವವಳಿವಳು ಜಗವ

ಉಭಯ ಕುಶಲೋಪರಿಗಳಲಿ ದೂಡಿ ದಿನವ
ಬರುವ ದಿನಗಳನು ಹಸನಾಗಿಸುವ ಛಲವ

ಅವಳೊಡೆಯ ನಾನೆಂಬ ಐಶ್ವರ್ಯವನುಂಡು
ಈಕೆ ನಾನರಿಯದಾ ವಿಶ್ವವೆಂಬಚ್ಚರಿಯ ಕಂಡು

ಎಲ್ಲಿ ಅಡಗಿಸಿಹಳೋ ಇವಳು ಈ ಪರಿಯ ಜ್ಞಾನ
ಎಲ್ಲಿ ಕಲಿತಲೋ ಇವಳು ಈ ನಿಗೂಢ ವಿಜ್ಞಾನ

ನಲಿದಾಡುವವಳಿವಳು ನಿಲ್ಲದಲೇ ಅರಗಳಿಗೆ
ಮಮತೆಯಾ ಮೃಷ್ಟಾನ್ನವುಣಿಸಿ ಮನೆಮಂದಿಗೆ

ಸಂಜೆಗೆ ತವಕದಲಿ ಕಾಯುವಳು ನನ್ನೊಡತಿ
ಕಂಡ ಕ್ಷಣಕೆ ನಗೆಯ ಸ್ವಾಗತವೇ ನನಗಾರತಿ

ಮುನಿದಾಗ ಮೆಲು ದನಿಯಲೇ ಮಂಗಳಾರತಿ
ಮಣಿದರೆ ಆಗ ಶೃಂಗಾರ ರತಿಯೇ ನನ್ನ ಗರತಿ

No comments: