Feb 29, 2008

ಒತ್ತಡ

ಒತ್ತಡದಿಂದ ಹೊರಬರುವ ಕಂದ
ಒತ್ತಡ ಜೊತೆಗೆ ಇರುವುದೇನಂದ
ಒತ್ತಡ ಬಯಸದೆ ಬೇಡುವುದರಿಂದ
ಒತ್ತಡದೊಂದಿಗೆ ಬದುಕೇನು ಚಂದ

ಒತ್ತಡ, ಒತ್ತಡ ಎತ್ತಣದೊತ್ತಡ
ಅರಿಯುವ ಆಸೆಯೇ ಒತ್ತಡವು
ಹೆಜ್ಜೆ, ಹೆಜ್ಜೆಗೂ ಗುದ್ದಾಡುವನಿವ
ಗುಡ್ಡದ ಮೇಲತ್ತಿಸಿ ಒದೆಯುವನು

ನಮಗೆ ಮಾನಸಿಕ ಒತ್ತಡ, ದೈಹಿಕ ಒತ್ತಡ
ವಿದ್ಯಾಭ್ಯಾಸದ ಜೊತೆ ಉದ್ಯೋಗದೊತ್ತಡ
ಮದುವೆಯ ನಂತರ ಸಂಸಾರದ ಒತ್ತಡ
ಅನಾರೋಗ್ಯದೊಡನೆ ಮುದಿತನದೊತ್ತಡ

ಆಡಲು, ತಿನ್ನಲು, ಮಲಗಲು ಬಿಡದೆ
ಕಲಿಯಲು, ಕಲಿಸಲು ಕಷ್ಟದ ನೆಪದಿ
ಕೂಡುವ, ಕಳೆಯುವ ಲೆಕ್ಕಕೆ ಅವಸರ
ಮುಕ್ತಿ ದೊರೆಯುವುದೆಂದೋ ದಿನಕರ

ಇರದವರಿಗುಂಟು, ಇರುವವರಿಗೆ ನಂಟು,
ಇದ್ದೂ ಇರದಂತವರಿಗ ಕಟ್ಟಿದ ಕಗ್ಗಂಟು
ಸರಸಕು, ವಿರಸಕು ತೋರದೇ ಕನಿಕರ
ಯಾರು ಏನಂದರೂ ಇದಕಿಲ್ಲವೋ ಬೇಸರ

ಇಲ್ಲಿರುವವರಿಗೂ, ಅಲ್ಲಿರುವವರಿಗೂ,
ಚಿಕ್ಕ ಚಿಣ್ಣರಿಗು, ದೊಡ್ಡ ಜಾಣರಿಗು,
ಯುವಕ, ಯುವತಿಯರ ಬೆನ್ನತ್ತಿ
ಮುದುಕರನೂ ಮುತ್ತಿದ ಅವಾಂತರ

ಇರುವ ತೀವ್ರತೆಯಲ್ಲಿರುವುದು ಅಂತರ
ಈ ಸೂಕ್ಷ್ಮವೇ ನಮಗಿರುವ ಏಕೈಕ ವರ
ಎಡ ಬಿಡದೇ ಕಾಡುವನಿವ ಭಯಂಕರ
ಈ ಪೀಡೆಗೆ ತಿಳಿಯೋ ಬೇಗನೆ ಉತ್ತರ

No comments: