ಆಸೆಗಳಿದ್ದರೆ ಸಾಕೆ
ಆಸೆಗೆ ಬತ್ತಿಯನಿಟ್ಟು
ಬತ್ತಿಗೆ ತೈಲವ ಬಿಟ್ಟು
ಹಣತೆ ಉರಿಸೋಕೆ
ಹಣತೆ ಉರಿದರೆ ಸಾಕೆ
ಹಣತೆಗೆ ಕತ್ತಲು ಬೇಕು
ಕತ್ತಲು ಕರಗುವವರೆಗೆ
ಬೆಳಗಿಗೆ ಕಾದಿರಬೇಕು
ಬೆಳಗಿಗೆ ಕಾದರೆ ಸಾಕೆ
ಕಾಯಲು ಸಂಯಮ ಬೇಕು
ಸಂಯಮಕ್ಕೆ ಸ್ಥಿರ ಚಿತ್ತವಿರಬೇಕು
ಸ್ಥಿರ ಚಿತ್ತಕೆ ಅನುಭವ ಬೇಕು
ಅನುಭವವಿದ್ದರೆ ಸಾಕೆ
ಅನುಭವಕ್ಕೆ ಅಭಿವ್ಯಕ್ತಿ ಬೇಕು
ಅಭಿವ್ಯಕ್ತಿಗೆ ಅರಿವು ಇರಬೇಕು
ಅರಿವಿಗೆ ಹಸಿವಿರಬೇಕು
ಅರಿವಿಗೆ ಹಸಿವಿದ್ದರೆ ಸಾಕೆ
ಹಸಿವಿಗೆ ಹೂರಣ ಬೇಕು
ಹೂರಣ ಸಿಗುವಂತಿರಬೇಕು
ಸಿಕ್ಕರೂ ಬಡಿಸುವವರಿರಬೇಕು
ಬಡಿಸುವವರಿದ್ದರೆ ಸಾಕೆ
ಬಡಿಸಲು ಮನಸಿರಬೇಕು
ಮನಸಿಗೆ ಮಮತೆಯು ಬೇಕು
ಮಮತೆಯು ಮಾಗಿರಬೇಕು
ಮಮತೆ ಮಾಗಿದ್ದರೆ ಸಾಕೆ
ಮಾತೆಯ ಮುಖವಿರಬೇಕು
ಮುಖದಲಿ ನಗುವಿರಬೇಕು
ನಗುವಿಗೆ ಒಲವಿರಬೇಕು
ಒಲವು ಇದ್ದರೆ ಸಾಕೆ
ಒಲವಿಗೆ ಕೂಸಿರಬೇಕು
ಕೂಸು ಕಾಡುತಿರಬೇಕು
ಕಾಡಲು ಆಸೆಗಳಿರಬೇಕು
No comments:
Post a Comment