ಹೊಸತಾಗಿ ಮೂಡಿದಾ ಅಭಿಮಾನ
ನಾನಾದಾಗ ನನ್ನವಳ ಯಜಮಾನ
ಕಾಡುವ ಕೊರತೆ ಕ್ಷಣಕೆ ಪಲಾಯನ
ಎಲ್ಲ ಪಡೆದೆನೆಂಬ ನನ್ನ ಬಿಗುಮಾನ
ಮೊದ ಮೊದಲು ಎಂಥಾ ಮೋಜು
ನನ್ನಾಕೆಗೆ ನನ್ನೊಲವಿನ ಸರಬರಾಜು
ದಿನ ದಿನವು ನಾನಾಡಿದೇ ಜೂಜು
ಆಗ ನನಗಿಲ್ಲ ಯಾರದೂ ಮುಲಾಜು
ಮುಂದುವರೆದ ದೂರ ತೀರ ಯಾನ
ಉಲ್ಲಾಸ, ಉತ್ಸಾಹಗಳಿಡುವ ಚುಂಬನ
ಹಿಡಿತಕೆ ಸಿಲುಕದೆ ಓಡುವ ಈ ಮನ
ಮೈಮರೆತು ನಾನಾದಾಗ ಮತಿಹೀನ
ಚಂದವೋ ಕುತೂಹಲ ಕರಗುವ ಮುನ್ನ
ಮುದ್ದು ಮಗುವಿಗೆ ತಾಯಾಗುವ ಮುನ್ನ
ಸಮಯ, ಪ್ರೀತಿ ಇಬ್ಭಾಗವಾಗುವ ಮುನ್ನ
ಸಿಡುಕಿನ ಜಗ ಪರಿಚಯವಾಗುವ ಮುನ್ನ
ಹಗುರವಾದ ಮನ ಭಾರವಾದಾಗ
ಅವಿತರಿಪ ಆದ್ಯತೆಗಳು ಅಗಾಧವಾಗ
ಪಡುವ ಯತ್ನಗಳೆಲ್ಲ ಕೈಕೊಡುವಾಗ
ಇರುವ ಸಂಯಮ ಬತ್ತಿ ಬರಿದಾದಾಗ
ಮೋಜಿನ ದಿನಗಳ ನೆನಪು ಉಳಿದಿರಲು
ಅದು ಭಾರವಾಗಿ ಪರಿವರ್ತನೆಗೊಂಡಿರಲು
ಬಾಳಿನ ಬಂಡಿ ಎಳೆದೆಳೆದು ಸುಸ್ತಾಗಿರಲು
ನೂರೆಂಟು ಯೋಚನೆ ಬಿಡವು ಹಗಲಿರುಳು
ನನ್ನಸಖಿ ಇದನರಿತು ಸಹಕರಿಸಲು
ನೋವು ನಲಿವುಗಳಲ್ಲಿ ನನ್ನ ಜೊತೆಗಿರಲು
ಬಂದ ಕಷ್ಟವನು ಲೆಕ್ಕಿಸದೆ ಬಡಿದಾಡುವೆ
ಕಂಡ ಜಯಕೆ ಖುಷಿಯಾಗಿ ಕುಣಿದಾಡುವೆ
ಜವಾಬ್ದಾರಿಗಳೇ ನನಗೆ ದಾರಿ ದೀಪವಾದಾಗ
ದಣಿದ ಮನಕೆ ಮುದ್ದು ಮಗುವೇ ಮದ್ದು ಆಗ
ನನ್ನಾಕೆಯಕ್ಕರೆಯ ರುಚಿ ನಾ ಸವಿಯುವಾಗ
ಕಂಡುಕೊಂಡೆ ನಾ ಜೀವನದಾ ಗುಟ್ಟಾಗ
No comments:
Post a Comment